ಬಾಳಿಗೊಂದು ಚಿಂತನೆ - 190
ಅವಿವೇಕದ ಕೆಲಸಕಾರ್ಯಗಳನ್ನು ಮಾಡಲು ಮನುಷ್ಯರಾದ ನಮಗೇನೂ ನಾಚಿಕೆಯಿಲ್ಲ. ಯಾಕೆ ಎಂಬುದರ ಅರಿವಿಲ್ಲ. ಹಿಂದು ಮುಂದಿನ ಯೋಚನೆ ಮಾಡದೆ ಪ್ರವೃತ್ತರಾಗುತ್ತೇವೆ. ಯಾಕೆ ಹೀಗೆಂದು ಅರ್ಥೈಸಿಕೊಳ್ಳುವ ಹೊತ್ತಿಗೆ ಎಲ್ಲಾ ಮುಗಿದು ಹೋಗಿರುತ್ತದೆ.
ಬಡಿವಾರ ಬಡಿಯುವವರೆಲ್ಲರೂ ನಾವು ಸಾಧಿಸುತ್ತೇವೆ ಎಂದರೆ ನಂಬಲಾಗದು. ಜಂಭ ಎನ್ನುವ ಕೃತಕ ಕೋಡುಗಳು ಮುರಿದು ಬಿದ್ದಾಗ ಕೈತಟ್ಟಿ ನಗುವರು, ಇದು ಮುಜುಗರವಾದೀತು. ಮೊದಲೇ ಯೋಚಿಸಿ ಕಾಲೂರುವುದೇ ಸರಿ ಅಲ್ಲವೇ? ಆಡುವ ಮಾತುಕೃತಿಗಳು ಪೊಳ್ಳಾಗದಿರಲಿ, ಹುರುಳಿರಲಿ. ತನ್ನ ಕೆಲಸಕಾರ್ಯಗಳು ಹೇಗಿವೆ? ಹೇಗಿರಬೇಕೆಂಬ ಯೋಜನೆಯಿರಲಿ. ಇಲ್ಲದಿದ್ದರೆ ನಗೆಪಾಟಲಿಗೆ ಈಡಾಗಬಹುದು.
ಸಹವಾಸ ಮಾಡುವಾಗ, ಮಾತುಗಳ ಕೇಳುವಾಗ ಅಂತಹ ಜನರಿಂದ ದೂರವಿರಬಾರದೇ? ಸಮಾಜದಲ್ಲಿ ಕೀಳು ಕೆಲಸಗಳನ್ನು ಮಾಡದೆ ಸಭ್ಯರಾಗಿರಲು ಪ್ರಯತ್ನಿಸುವುದು ಉತ್ತಮ. ಒಂದು ಹೊತ್ತು ಉಪವಾಸವಿದ್ದರೂ ಆಗಬಹುದು. ನಾಚಿಕೆ ವಾತಾವರಣ ಬೇಡ. ತಲೆತಗ್ಗಿಸುವ ಕೆಲಸ ಬೇಡ.
*ಹೀನಸೇವಾ ನ ಕರ್ತವ್ಯಾ ಕರ್ತವ್ಯೋ ಮಹದಾಶ್ರಯ:/*
*ಪಯೋಪಿ ಶೌಂಡಿಕೀ ಹಸ್ತೇ ವಾರುಣೀತ್ಯಭಿಧೀಯತೇ//*
ಸಹವಾಸ, ಸ್ನೇಹ ಮಾಡುವಾಗ ಒಳ್ಳೆಯವರ ಆರಿಸಿ. ಗೊತ್ತಿದ್ದವರೊಡನೆ ವ್ಯವಹಾರವಿರಲಿ. ಕೀಳು ಜನರ ಸಹವಾಸ ಹಾವಿನ ಹೆಡೆ ತುಳಿದಂತೆ. ಮೇಲೇಳಲಾಗದು. ಓರ್ವ ಹೆಂಡ ಮಾಡುವ ಮನೆಯ ಹೆಣ್ಣು ಮಗಳು ತನ್ನ ಕೈಯಲ್ಲಿ ಹಾಲಿನ ಪಾತ್ರೆಯನ್ನು ಹಿಡಿದು ನಿಂತರೂ, ನೋಡುವವರು ಹೆಂಡವೇ ಎಂದು ಸಂದೇಹಪಡುವರು. ಹಾಗಾಗಿ ನಾವೇ ಸ್ವಯಂ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ನಗೆಪಾಟಲಿಗೆ ಈಡಾಗಬಹುದು. ದಾರಿತೋರುವವರು ಸರಿಯಾದವರಾದರೆ ಹೀಗಿರುವ ಸನ್ನಿವೇಶ ಎದುರಾಗದಲ್ಲವೇ? ನಮ್ಮ ಯಶಸ್ಸಿನ ಹಿಂದೆ ಹಲವರ ಶ್ರಮ ಬೇಕಾಗುತ್ತದೆ. ಕಗ್ಗದ ಎರಡು ಸಾಲಿನಂತೆ ‘ದಾರಿ ನಡೆವಾಗ ನಿನಗೆ ನೀನೇ ಗುರುವು, ಸರಿದಾರಿ ಕರುಣಿಪುದು ಸರಿಗುರಿಯ ಭಾಗ್ಯ//’
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ರತ್ನಾವಳಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ