ಬಾಳಿಗೊಂದು ಚಿಂತನೆ - 191

ಬಾಳಿಗೊಂದು ಚಿಂತನೆ - 191

ಜೇಡರ ದಾಸಿಮಯ್ಯ ಅಥವಾ ದೇವರ ದಾಸಿಮಯ್ಯ

*ಹರ ತನ್ನ ಭಕ್ತರ ತಿರಿವಂತೆ* *ಮಾಡುವ*

*ಒರೆದು ನೋಡುವ ಸುವರ್ಣದ ಚಿನ್ನದಂತೆ*

*ಅರೆದು ನೋಡುವ ಚಂದನದಂತೆ*

*ಅರಿದು ನೋಡುವ ಕಬ್ಬಿನ ಕೋಲಿನಂತೆ*

*ಬೆದರದೆ ಬೆಚ್ಚದೆ ಇದ್ದಡೆ*

*ಕರವಿಡಿದೆತ್ತಿಕೊಂಬ ನಮ್ಮ ರಾಮನಾಥನು*

‘ರಾಮನಾಥ’ ಅಂಕಿತನಾಮದಿಂದ ಅತ್ಯುತ್ತಮ ವಚನಗಳನ್ನು ಜನಸಮೂಹಕ್ಕೆ ನೀಡಿದ ವಚನಕಾರ ದೇವರ ದಾಸಿಮಯ್ಯ. ಕನ್ನಡದಲ್ಲಿ ವಚನಗಳನ್ನು ೧೦-೧೧ನೇ ಶತಮಾನದಲ್ಲಿ ರಚಿಸಿದ ಮೊದಲ ಶರಣ ವಚನಕಾರನೆಂಬ ಪ್ರತೀತಿ ಇದೆ. ಸುಮಾರು ೧೫೦-೧೭೦ ವಚನಗಳು ಲಭ್ಯವೆಂಬ ಮಾಹಿತಿಯಿದೆ. ಸುರಪುರ ತಾಲೂಕಿನ ಮುದನೂರು ಯಾದಗಿರಿ ಜಿಲ್ಲೆಯವರು. ದೇವಾಲಯಗಳ ಊರಂತೆ ಅದು. ಶಿವನ ಆರಾಧಕನಂತೆ. ಶಿವಸಾರವನ್ನು, ಶಿವನ ಮಹಿಮೆಯನ್ನು, ಶಿವತತ್ವವನ್ನು ತನ್ನ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ. ದುಗ್ಗಲೆಯೆಂಬ ಶಿವಶರಣೆ ಸತಿ.

ಈ ಜೀವ ಜಗತ್ತನ್ನು ಪೂರ್ತಿಯಾಗಿ ವ್ಯಾಪಿಸಿದ ಏಕೈಕ ಶಕ್ತಿ ಆ ಮಹಾಶಿವ. ಜಗತ್ತೇ ಶಿವಮಯ. ಶ್ರೀಶೈಲದ ಶ್ರೀ ಚಂದ್ರಗುಂಡ ಶಿವಾಚಾರ್ಯ ಗುರುಕುಲದಲ್ಲಿ ಬಾಲ್ಯದ ಶಿಕ್ಷಣ. ಆಗಲೇ ಬಾಲಕನಲ್ಲಿ ಪ್ರಶ್ನಿಸುವ ಮನೋಭಾವ ತುಂಬಿತ್ತು. ವೈಚಾರಿಕತೆಗೆ ಹೆಚ್ಚು ಒತ್ತು ಕೊಡುತ್ತಿದ್ದರು.

ಪ್ರಾಥಮಿಕ ಶಾಲಾ ಪಠ್ಯದಲ್ಲಿ ಓದಿದ ನೆನಪು. ಈ ಮಹಾವಚನಕಾರನನ್ನು ಈ ದಿನ ನೆನೆಯೋಣವೇ?

*ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಪುದೆ*

*ಕಡೆಗೀಲು ಬಂಡಿಗಾಧಾರ*

*ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ*

*ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ!ರಾಮನಾಥ*

ಎಷ್ಟೊಂದು ಸಾರಯುಕ್ತವಾದ ವಚನದ ಸಾಲುಗಳು, ಬಳಸಿದ ಪದಗಳು.

-ರತ್ನಾ ಕೆ.ಭಟ್, ತಲಂಜೇರಿ

(ಸಂಗ್ರಹ: ವಚನಾಮೃತ)

ಚಿತ್ರ ಕೃಪೆ: ಇಂಟರ್ನೆಟ್ ತಾಣ