ಬಾಳಿಗೊಂದು ಚಿಂತನೆ - 192
‘ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ’ ಹೇಗೆ ಧರ್ಮವನ್ನು ರಕ್ಷಿಸಿದರೆ ಅದೇ ಧರ್ಮ ನಮ್ಮನ್ನು ಕಾಪಾಡುವುದೋ ಹಾಗೆ. ಆದರೆ ನಾವುಗಳು ಸ್ವಾರ್ಥವೋ, ಜೀವನ ದಾರಿಯೋ, ನಗರೀಕರಣ, ಆಧುನಿಕತೆಯ ಭರಾಟೆ, ಕಾಂಕ್ರೀಟ್ ಕಟ್ಟಡಗಳು ಮಹಡಿ ಮೇಲೆ ಮಹಡಿ ಕಟ್ಟುವುದು ಇನ್ಯಾವುದಕ್ಕೋ ಪರಿಸರವನ್ನು ಹರಣ ಮಾಡುತ್ತಿದ್ದೇವೆ. ಇದರಿಂದ ಮಳೆಯ ಕೊರತೆ, ಶುದ್ಧ ಗಾಳಿಯ ಕೊರತೆ, ಕಾಡುಪ್ರಾಣಿಗಳಿಗೆ ಸಾಕಷ್ಟು ನೆಲೆಯಿಲ್ಲದ ಕೊರತೆ ಉಂಟಾಯಿತು. ಎಲ್ಲೆಂದರಲ್ಲಿ ರಬ್ಬರ್ ತೋಟಗಳು ತಲೆಯೆತ್ತಿದವು. ಇದರಿಂದ ಮಳೆಯ ಕೊರತೆ ಉಂಟಾಯಿತು.ಕಾಲಕ್ಕೆ ಸರಿ ಮಳೆ ಬಾರದಿದ್ದರೆ ಹೇಗೆ? ಮಳೆನೀರನ್ನೇ ನಂಬಿದ ಅನ್ನದಾತರಿದ್ದಾರೆ. ಎಷ್ಟು ಕೃತಕವಾಗಿ ನೀರಿನ ಸೌಕರ್ಯ ಮಾಡಿದರೂ ಮಳೆನೀರು ಅಗತ್ಯವಾಗಿ ಬೇಕು. ನೀರಿನ ಮೂಲವೇ ಅದು. ಅಂತರ್ಜಲ ಮಟ್ಟ ಏರಬೇಕಾದರೆ ಸಾಕಷ್ಟು ಮಳೆ ಬೀಳಬೇಕು, ಆ ನೀರನ್ನು ಭೂಮಿಗೆ ಇಂಗಿಸುವ ಕಾರ್ಯಗಳಾಗಬೇಕು, ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಮಳೆ ಸರಿಯಾಗಿ ಬರಲೆಂಬ ಆಶಯ ನಮ್ಮೆಲ್ಲರದು.
*ಕಾಲೇ ವರ್ಷಂತು ಪರ್ಜನ್ಯಃ* *ಪೃಥಿವೀ ಸಸ್ಯ ಶಾಲಿನೀ/*
*ದೇಶೋಯಂ ಕ್ಷೋಭರಹಿತಃ ಸಾತ್ವಿಕಾಃ ಸನ್ತು ನಿರ್ಭಯಾಃ//*
ಈ ಜಗತ್ತಿನಲ್ಲಿ ಮಳೆಯು ಸರಿಯಾದ ಸಮಯಕ್ಕೆ, ಕಾಲಕಾಲಕ್ಕೆ ಬರಲಿ. ಭೂಮಿಯು ಪೈರು ಪಚ್ಚೆಯಿಂದ ಕೂಡಿ ಹಸುರಾಗಿ ಕಂಗೊಳಿಸಲಿ. ಯಾವುದೇ ರೀತಿಯ ಕಷ್ಟಗಳು ನಷ್ಟಗಳು, ಕ್ಷೋಬೆ, ಬೇನೆ, ಬೇಸರಿಕೆ ಇಲ್ಲದೆ ಶಾಂತಿಯಿಂದ ಇರುವ ಹಾಗೆ ಆಗಲಿ. ಎಲ್ಲರೂ ಸಾತ್ವಿಕರಾಗಿರಲಿ, ಒಳ್ಳೆಯ ಬುದ್ಧಿಯಿಂದ ಇರಲಿ. ಯಾವುದೇ ರೀತಿಯ ಹೆದರಿಕೆ, ಅಂಜಿಕೆ, ಭಯದ ವಾತಾವರಣದ ಬದುಕು ನಡೆಸದ ಹಾಗೆ ಆಗಲಿ. ಎಲ್ಲವನ್ನೂ ಆ ದೇವರು ನಡೆಸಿಕೊಡಲಿ. ಕೊಡುವವನೂ ಅವನು, ತೆಗೆದುಕೊಳ್ಳುವವನೂ ಅವನು ನಮ್ಮದೇನಿಲ್ಲ. ನಾವು ನಿಮಿತ್ತ ಮಾತ್ರರು. ಇರುವಷ್ಟು ಕಾಲ ಒಳ್ಳೆಯದರಲ್ಲಿರಬೇಕು ಅಷ್ಟೆ. ನಮ್ಮನ್ನು ಸಲಹುವ, ನಮ್ಮ ಬದುಕಿಗೆ ಆಧಾರವಾದ ಪ್ರಕೃತಿಯ ರಕ್ಷಣೆ ಮಾಡೋಣ, ಪರಿಸರದ ಮೇಲಾಗುವ ಪ್ರಹಾರಗಳನ್ನು ತಡೆಯೋಣ. ನಮ್ಮೊಂದಿಗೆ ಇತರರೂ ಜೀವಿಸಲು ಅನುವು ಮಾಡಿಕೊಡೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ರತ್ನಾವಳಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ