ಬಾಳಿಗೊಂದು ಚಿಂತನೆ - 193
ಪ್ರತಿಯೊಂದರಲ್ಲೂ ತೃಪ್ತಿ ಮುಖ್ಯ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಸ್ವೀಕರಿಸಿದರೆ ನೆಮ್ಮದಿ ಮತ್ತು ಆರೋಗ್ಯ. ಆದರೆ ನಮ್ಮ ಆಸೆಯೆಂಬ ಶರಧಿ ಅದಕ್ಕೆ ಮನಸ್ಸು ಮಾಡುವುದು ಕಷ್ಟ. ಮತ್ತಷ್ಟು, ಇನ್ನಷ್ಟು, ಮೊಗೆದಷ್ಟು ಬೇಕೆಂಬ ಆಸೆ ನಮಗೆ. ಬೇಡಿಕೆಗೆ ಕೊನೆ ಮೊದಲಿಲ್ಲ.
*ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು/*
*ಬೇಕೆನುತ ಬೊಬ್ಬಿಡುತಲಿಹ ಘಟವನಿದನು*//
*ಏಕೆಂದುರಚಿಸಿದನೊ ಬೊಮ್ಮನೀ ಬೇಕು ಜಪ/*
*ಸಾಕೆನಿಪುದೆಂದಿಗೆಲೊ--ಮಂಕುತಿಮ್ಮ*//
ಬೇಡಿಕೆಗೆ ಕೊನೆ ಮೊದಲಿಲ್ಲ, ಸಾಕೆಂದು ಹೇಳುವುದೇ ಇಲ್ಲ. ಉಪ್ಪರಿಗೆಗೆ ಹತ್ತುವ ಮೆಟ್ಟಿಲ ತೆರದಿ ಒಮ್ಮೆಯ ಏರಬೇಕೆಂಬಾಸೆ. ಈ ಭಗವಂತ ಏನು, ಯಾಕಾಗಿ ರಚಿಸಿದನೋ ಅರ್ಥವಾಗುತ್ತಿಲ್ಲ. ಆ ಸೃಷ್ಟಿಸಿದ ಬ್ರಹ್ಮನಿಗೂ ತಿಳಿಯದು.
ಪುರಂದರದಾಸರ ಒಂದು ಕೀರ್ತನೆಯಲ್ಲಿ ‘ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ ಮತ್ತಿಷ್ಟು ದೊರಕಿದರೆ ಮತ್ತೂ ಇಷ್ಟರಾಸೆ’ ಎಷ್ಟು ಸತ್ಯ ವಿಚಾರ ಅಲ್ಲವೇ? ಹೆಸರಿಗಾಗಿ, ಬೇಗನೆ ಜನಗುರುತಿಸಬೇಕೆಂಬ ವಾಂಛೆಗಾಗಿ ವಾಮದಾರಿಯಲ್ಲಿ ಸಾಗಬಾರದು. ಒಂದೊಂದೇ ಮೆಟ್ಟಿಲನ್ನು ನಿಧಾನವಾಗಿ ಏರುತ್ತಾ ಹೋಗೋಣ. ಇಲ್ಲದಿದ್ದರೆ ಮುಗ್ಗರಿಸಿ ಬೀಳಬಹುದು. ಆಗ ನಮ್ಮತ್ತ ಯಾರೂ ತಿರುಗಿ ನೋಡರು, ಸಹಾಯ ಹಸ್ತ ನೀಡರು. ತೃಪ್ತಿ ಎಂಬುದು ಮರೀಚಿಕೆಯಾಗಬಾರದು. ಸಾವಕಾಶವಾಗಿ ಸಿಗುವಂತಾಗಬೇಕು. ‘ಇರುವುದೆಲ್ಲವ ಬಿಟ್ಟು ಇಲ್ಲದಕೆ ಆಸೆ ಸಲ್ಲದು’.
ನಮ್ಮ ಮನೆಯ ವಸ್ತುಗಳೇ ನಮಗೆ ಶ್ರೇಷ್ಠ, ನಾವು ಕಷ್ಟಪಟ್ಟು ಗಳಿಸಿದ ಸಂಪಾದನೆಯಲ್ಲಿ ತಂದಿರುತ್ತೇವೆ. ಆದರೆ ಕೆಲವು ಜನರಿಗೆ ನೆರೆಹೊರೆಯ ವಸ್ತುಗಳ ಮೇಲೆಯೇ ವ್ಯಾಮೋಹ. ನಮ್ಮ ಮನಸ್ಸಿನ ಮೇಲಿನ ಹಿಡಿತ ನಮ್ಮಲ್ಲೇ ಇರಬೇಕು. ಅತೃಪ್ತಿಯ ಬದುಕು ಗೊಣಗಾಟಕ್ಕೆ ನಾಂದಿ ಹಾಡಬಹುದು. ಚಿಂತೆ ಒಮ್ಮೆ ಸುರುವಾಯಿತೆಂದರೆ ಚಿತೆಯತ್ತ ಒಯ್ಯಬಹುದು. ಹಾಗಾದರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಜೋಪಾನ ಮಾಡೋಣ. ಸಂತೃಪ್ತಿ ಸದಾ ಇರಲಿ. ‘ದೂರದ ಬೆಟ್ಟ ನುಣ್ಣಗೆ, ಹತ್ತಿರ ಹೋದರೆ ಕಲ್ಲು ಬಂಡೆ ಗಿಡ ಮುಳ್ಳುಗಳು’ ಕಾಣಬಹುದು. ಅದು ಬೇಡ ನಮಗೆ. ಭೂಮಿಗೂ ಆಗಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಎಟುಕದ ನಕ್ಷತ್ರಕ್ಕೆ ಕೈಚಾಚದಿರೋಣ. ಉಪ್ಪುಗಂಜಿ ಸೇವಿಸಿದರೂ ನೆಮ್ಮದಿಯ ನಿದ್ದೆ ಬರಬಹುದು ಪ್ರಾಮಾಣಿಕ ಸಂಪಾದನೆಯಲ್ಲಿ...
-ರತ್ನಾ ಭಟ್ ತಲಂಜೇರಿ
(ಕಗ್ಗ: ಮಂಕುತಿಮ್ಮನ ಕಗ್ಗ)
ಚಿತ್ರ ಕೃಪೆ: ಇಂಟರ್ನೆಟ್ ತಾಣ