ಬಾಳಿಗೊಂದು ಚಿಂತನೆ - 194
‘ಸರ್ವಜ್ಞ’ ಎಂದರೆ ಸರ್ವವನ್ನೂ ಬಲ್ಲವನು ಎಂಬ ಅರ್ಥವೆಂದೋ, ಆತನ ಹೆಸರಿರಬಹುದೇನೋ ಎಂದು ನಾವು ಅರ್ಥೈಸಿರಬಹುದು. ಖಂಡಿತಾ ಅಲ್ಲ. ಪ್ರತಿಯೊಬ್ಬರ ಮನದಾಳದಲ್ಲಿರುವ ಒಳಿತು-ಕೆಡುಕುಗಳನ್ನು ಹುಡುಕಿ ತೆಗೆದು ತ್ರಿಪದಿಗಳಲ್ಲಿ ಉಣಬಡಿಸಿದ ಮಹಾನುಭಾವರು. ಕೆಲವು ಹೆಸರುಗಳಲ್ಲಿಯೇ ಅವರ ಸಜ್ಜನಿಕೆ ಅಡಗಿರುತ್ತದೆಯಂತೆ.
*ಸರ್ವಜ್ನನೆಂಬವನು ಗರ್ವದಿಂದಾದವನೆ*
*ಸರ್ವರೊಳೊಂದೊಂದು ನುಡಿಗಲಿತು ವಿದ್ಯೆಯಾ ಪರ್ವತವೆ ಆದ ಸರ್ವಜ್ಞ*//
‘ಶ್ರೀರಾಮಚಂದ್ರ’ ಎಷ್ಟೊಂದು ನವಿರಾದ,ತಂಪಾದ,ಲೋಕವಿಖ್ಯಾತನಾದ, ಮರ್ಯಾದಾ ಪುರುಷೋತ್ತಮನೆನಿಸಿದ, ಪಿತೃವಾಕ್ಯ ಪರಿಪಾಲಿಸಿದ, ಸಜ್ಜನಿಕೆಯ ಸಾಕಾರ ಮೂರುತಿಯಾದ ಎಲ್ಲಾ ಉತ್ತಮ ಗುಣಗಳನ್ನು ಹೊಂದಿದ ಹೆಸರೆಂದು ಓದಿ ತಿಳಿದವರು.
ಇಲ್ಲಿ ಸಣ್ಣವ ದೊಡ್ಡವ ಎಂಬ ಪ್ರಶ್ನೆಯಿಲ್ಲ. ಜ್ಞಾನ ಎಂಬುದನ್ನು ಯಾರು ಬೇಕಾದರೂ ಗಳಿಸಿಕೊಳ್ಳಬಹುದು. ಅದಕ್ಕೆ ಹೆಣ್ಣುಗಂಡೆಂಬ ಭೇದವಿಲ್ಲ.
‘ಶ್ರೀಕೃಷ್ಣ’ ಎಂದಾಗ ಬಾಲಲೀಲೆಗಳು, ತುಂಟಾಟಗಳು, ದುಷ್ಟರ ಹರಣ ಅಪಹರಣಗಳು, ಅಣ್ಣ ಬಲರಾಮನೊಂದಿಗಿನ ಸ್ನೇಹ, ಹಾಸ್ಯ, ವಿಡಂಬನೆಗಳು, ಪಾಂಡವರು, ಧರ್ಮದ ಬೋಧನೆ, ಸಂಧಾನ, ಕುರುಕ್ಷೇತ್ರ ಯುದ್ಧ, ಗೋಪಿಕೆಯರ ಒಡನಾಟ, ರಾಧಾ ಮಾಧವ ಈ ಎಲ್ಲ ಮನದಲ್ಲಿ ಮೂಡುತ್ತದೆ. ಅದೇ ರೀತಿ ಯಾರೊಬ್ಬರ ಬಗ್ಗೆ ಮಾತನಾಡುವಾಗಲೂ ಅವರಲ್ಲಿರುವ ವಿಶೇಷ ಗುಣಗಳೇ ಕಣ್ಣೆದುರಿಗೆ ಹಾದುಹೋಗುವುದು, ಹಾಗಾದರೆ ಅವರಂತಾಗಲು ಅಸಾಧ್ಯವಾದರೂ ಕೆಲವು ಆದರ್ಶಗಳನ್ನಾದರೂ ಅಳವಡಿಸಿಕೊಳ್ಳಬಹುದಲ್ಲವೇ?
ಕಷ್ಟಸಹಿಷ್ಣುತೆ ಎಂಬುದನ್ನು ಪ್ರತಿ ಮಗುವಿಗೂ ಕಲಿಸಬೇಕು. ಇದು ಮುಂದಿನ ಜೀವನದ ಹಾದಿಯಲ್ಲಿ ಮುಖ್ಯ. ಇಲ್ಲದಿದ್ದರೆ ಏನೋ ಕಷ್ಟ ಬಂತೆಂದು ಇನ್ನು ಏನೋ ಮಾಡಿಕೊಳ್ಳುವ ಕೆಟ್ಟ ಆಲೋಚನೆಗಳು ಮನಸ್ಸಿಗೆ ಬರಬಹುದು. ನಮ್ಮ ಸುತ್ತಮುತ್ತಲಿನ ಹಲವಾರು ಘಟನೆಗಳನ್ನು ಅವಲೋಕಿಸಿದರೆ ಇದು ಸತ್ಯವಿಚಾರ. ಬರಿಯ ಬಾಯಿ ಮಾತಿನಲ್ಲಿ ಏನೂ ಸಾಧಿಸಲಾಗದು. ಕೃತಿಯಲ್ಲಿ ಹೊರಹೊಮ್ಮಿದಾಗ ನೈಜತೆಯನ್ನು ಕಾಣಬಹುದು. ವಿದ್ಯೆ ಕಲಿಯುವುದೇ ಅದಕ್ಕಾಗಿ.
*ವಿದ್ಯಾದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ/*
*ಪಾತ್ರತ್ವಾದ್ಧನ ಮಾಪ್ನೋತಿ ಧನಾಧ್ದರ್ಮಂ ತತ: ಸುಖಮ್//*
ವಿದ್ಯೆ ವಿನಯಕ್ಕೆ ದಾರಿ. ವಿನಯದಿಂದ ಅರ್ಹತೆ, ಇದರಿಂದ ಜ್ಞಾನ, ಹಣ ಸಂಪಾದನೆ, ಹಣದಿಂದ ಧರ್ಮ ಮತ್ತು ಸುಖವುಂಟಾಗುವುದು. ಹಣ ಬಂತೆಂದು ಅಹಂಕಾರ ಬರಬಾರದು, ಅದಕ್ಕೆ ಜ್ಞಾನ, ತಿಳುವಳಿಕೆ ಬೇಕು. ಉತ್ತಮ ಜೀವನ ಮೌಲ್ಯಗಳನ್ನು ನಮ್ಮ ಮಕ್ಕಳಿಗೆ ತಿಳಿ ಹೇಳೋಣ. ಆದರ್ಶ ವ್ಯಕ್ತಿತ್ವ ಹೊಂದಿದವರ ಜೀವನ ಚರಿತ್ರೆಗಳನ್ನು ಓದಿ ಮನನ ಮಾಡುವಂತೆ ಪ್ರೇರೇಪಿಸೋಣ. ಅವರೇ ಸ್ವಯಂ ಕಲಿವಂತೆ ಸನ್ನಿವೇಶಗಳನ್ನು ನಿರ್ಮಿಸೋಣ. ಮಾನವೀಯ ಸಂಬಂಧಗಳ ಬಂಧ ಸಡಿಲಿಕೆಯಾಗಿ ಬಿರುಕು ಬಿಡುತ್ತಿರುವುದು ಸ್ಪಷ್ಟ. ಅದಿನ್ನು ಹೆಚ್ಚಾಗದಂತೆ ಜಾಗ್ರತೆ ಮಾಡಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಸ್ವಯಂಕೃತ ಅಪರಾಧಗಳಿಗೆ ಕಡಿವಾಣ ಹಾಕದಿದ್ದರೆ ಪಶ್ಚಾತ್ತಾಪ ಪಡಬೇಕಾದ ಕಾಲ ದೂರವಿಲ್ಲ. ಚರಿತ್ರೆಯಲ್ಲಿ ಆಗಿಹೋದವರ, ಹಿರಿಯರ, ಸಾಹಿತಿಗಳ, ರಾಷ್ಟ್ರನಾಯಕರ ಉತ್ತಮ ಗುಣಗಳನ್ನು ಸ್ವೀಕರಿಸಿ ಮುನ್ನಡೆಯೋಣ. ಭಗವಂತ ಎಲ್ಲರಿಗೂ ಸದ್ಬುದ್ಧಿ ನೀಡಲಿ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಜ್ಞಾನಬಂಧು ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ