ಬಾಳಿಗೊಂದು ಚಿಂತನೆ - 195
‘ಆದಿ ಅಂತ್ಯವಿಲ್ಲದವ ಪರಮಾತ್ಮ. ಜನನ ಮರಣವೂ ಇಲ್ಲದವ, ಆದ್ಯಂತ ರಹಿತನು. ದಿವ್ಯಾತ್ಮನಾತ’. ಭೌತಿಕವಾದ, ಪ್ರಾಪಂಚಿಕ ವಿಷಯಾಸಕ್ತಿಗಳಿಂದ ಮುಳುಗಿದ, ದೇಶ, ಕಾಲ,ಸ್ಥಿತಿಗತಿಗಳಿಗನುಗುಣವಾಗಿ ಬಂಧಿಸಲ್ಪಟ್ಟ ಮಾನವನಿಗೆ ಇದರರಿವು ಮೂಡಲು ಸ್ವಲ್ಪ ಕಷ್ಟವೇ ಸರಿ. ‘ಏಕಾತ್ಮ ಸರ್ವ ಭೂತಾಂತರಾತ್ಮ’ ಒಂದೇ ಆತ್ಮ ಸಕಲರಲ್ಲಿಯೂ ಅಡಗಿರುವಾಗ ಹುಟ್ಟು ಸಾವುಗಳೆಲ್ಲಿಯದು?
ಭಗವಂತನಿತ್ತ ಕಣ್ಣಿನಿಂದ ಸುತ್ತಲೂ ನೋಡುತ್ತೇವೆ. ಆದರೆ ನಮ್ಮ ಕಣ್ಣನ್ನು ನಾವೇ ನೋಡಲಾಗದು. ಕನ್ನಡಿಯಲ್ಲಿ ನೋಡಬೇಕಷ್ಟೆ. ಇದೇ ಸೃಷ್ಟಿಯ ರಹಸ್ಯ. ಇದೇ ರೀತಿ ಆತ್ಮ ಎಂಬುದು ಭೌತಿಕವಾಗಿ ಎಲ್ಲಾ ವಸ್ತುಗಳಲ್ಲೂ ಅಗೋಚರವಾಗಿದೆ. ಆತ್ಮತತ್ವ ಅರಿಯಲಾರೆವು. ಕಣ್ಣು ಕಿವಿಯಿಂದ ನೋಡಲು, ಕೇಳಲು ಆಗದ ಈ ಆತ್ಮದ ಅರಿವನ್ನು ಮೂಡಿಸುವುದಾದರೂ ಹೇಗೆ?
ಭಗವತ್ಪಾದರು ಒಂದೆಡೆ
*ಮನೋ ಬುದ್ಧಿ ಅಹಂಕಾರ*
*ಚಿತ್ತಾನಿ ನಾಹಂ,ನಾ*
*ಚ,ಶ್ರೋತಾ ಜೀವೇ ನ ಚ*
*ಘ್ರಾಣನೇತ್ರೇ, ನ ಚ ವ್ಯೋಮ*
*ಭೂಮಿ,ರ್ನ ತೇಜೋ ನ* *ವಾಯು:
ಸಚ್ಚಿದಾನಂದ* *ಸ್ವರೂಪಮ್ ಶಿವೋಹಂ,* *ಶಿವೋಹಂ"*
ತಮ್ಮ ಅನುಭವಗಳ ಸಾರವನ್ನು ಹೇಳುವುದನ್ನು ಕಾಣಬಹುದು. ನಾನು ಎಂಬುದು ಮನಸ್ಸು, ಬುದ್ಧಿ, ಅಹಂಕಾರ, ಚಿತ್ತಾದಿಗಳಲ್ಲ. ಇಂದ್ರಿಯಗಳಂತೂ ಖಂಡಿತಾ ಅಲ್ಲ. ಪಂಚಭೂತಗಳಲ್ಲ.ನಾನು ಎಂಬುದು ಸಚ್ಚಿದಾನಂದ ಸ್ವರೂಪ, ಶಿವ ಸತ್ಯ ಸ್ವರೂಪ.
ಪ್ರತಿಯೊಂದು ಅವರವರ ತಿಳುವಳಿಕೆಯ ಜ್ಞಾನದಲ್ಲಿ ಅಡಗಿದೆ. ‘ಸತ್ ಚಿತ್ ಆನಂದ’ ಇವೇ ಆತ್ಮ ಎಂಬುದರ ಲಕ್ಷಣಗಳು. ಸತ್ಯ, ಜ್ಞಾನ, ಪ್ರಜ್ಞೆ, ಆನಂದ ಇವುಗಳೇ ಆತ್ಮಜ್ಞಾನ ಮೂಡಿಸಿ, ಆತ್ಮ ಎಂಬುದರ ಅರಿವನ್ನು ತಿಳಿಯುವಂತೆ ಮಾಡಬಹುದು. ಆದರೆ ಆತ್ಮದ ಅನುಭವವಾಗಲು ನಮ್ಮಲ್ಲೇ ತಡೆಯೊಡ್ಡುವ ಸಾಧನ ದೇಹದೊಳಗೆ ಮನೆಮಾಡಿ ಕುಳಿತ ಮಾಲಿನ್ಯತೆ. ಈ ಮಾಲಿನ್ಯವನ್ನು ಕಡೆಗಣಿಸುವುದೇ ನಾವು ಮಾಡಬೇಕಾದ ಮೊದಲ ಕೆಲಸ. ಮನಸ್ಸನ್ನು ಚಂಚಲತೆಯಿಂದ ಸ್ಥಿರದತ್ತ ತರುವುದು.ಯಾವುದೇ ರೀತಿಯ ಅತಿರೇಕಗಳಿಗೆ ಮನಸ್ಸಿನೊಳಗೆ ಸ್ಥಳಕೊಡಬಾರದು. ಮನಸ್ಸು ಶರೀರದ ಹಿಡಿತದಲ್ಲಿರುವಂತೆ ವ್ಯವಹಾರಗಳಿರಬೇಕು. ಆಚಾರ, ವಿಚಾರಗಳಲ್ಲಿ ಸಂಯಮವಿರಬೇಕು. ಎಲ್ಲಾ ಯೋಚನೆಗಳನ್ನು ಒಟ್ಟಾಗಿಸಿ ಏಕತ್ರಗೊಳಿಸಿ ಪರಿಹಾರವನ್ನು ಶಾಂತವಾಗಿ ಕಂಡುಹಿಡಿಯುವ ಮನೋಭಾವವಿರಲಿ. ಒಟ್ಟಿನಲ್ಲಿ ಬದುಕಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಬೇಕು. ಇತರರಿಗೆ ತೊಂದರೆ ಕೊಡದೆ ಬಾಳುವುದೇ ನಮ್ಮ ಸಾಧನೆ. ‘ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ’.ಅಲ್ಲವೇ? ಸಾಧ್ಯವಾದರೆ ಸಮಾಜಕ್ಕೆ ಏನಾದರೂ ಕೊಡೋಣ, ಇಲ್ಲವಾದಲ್ಲಿ ಸುಮ್ಮನಿರೋಣ.
-ರತ್ನಾ ಕೆ.ಭಟ್ ತಲಂಜೇರಿ
(ಆಕರ: ಉಪದೇಶಾಮೃತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ