ಬಾಳಿಗೊಂದು ಚಿಂತನೆ - 196

ಬಾಳಿಗೊಂದು ಚಿಂತನೆ - 196

ಹುಲುಮಾನವರಾದ ನಾವು ವಿಷಯಾಸಕ್ತಿಯಲ್ಲೇ ಮುಕ್ಕಾಲು ಆಯುಷ್ಯ ಕಳೆಯುತ್ತೇವೆ. ನಮಗೆ ಗೊತ್ತಾಗದ ಹಾಗೆ ದಿನಗಳು ಸರಿದು ಹೋಗುತ್ತಿದೆ. ನಾವು ಮಾತ್ರ ಇನ್ನೂ ನೂರು ವರ್ಷ ಇದೆಯೇನೋ ನಮ್ಮ ಬದುಕು ಎಂದು ಭ್ರಮಾಧೀನರಾಗುತ್ತೇವೆ. ಈ ಕ್ಷಣವೇ ಮುಗಿದು ಹೋಗಬಹುದೇನೋ ಎಂಬ ಸಣ್ಣ ಕಲ್ಪನೆ ಸಹ ನಮಗಿಲ್ಲ. ಎಷ್ಟು ವಿಚಿತ್ರ ಅಲ್ಲವೇ? ನಿನ್ನೆ ನಮ್ಮ ಬಂಧುವೊಬ್ಬರು ಹೇಳಿದ ವಿಷಯ 'ಓರ್ವ ಮಹಿಳೆ ಐವತ್ತರ ವಯಸ್ಸು ಬಡಿಸ್ತಾ ಇದ್ದವರು ಮನೆಯವರೆಲ್ಲ ಇದ್ದಂತೆ ಕುಸಿದು ಬಿದ್ದು ಬಿಟ್ಟರಂತೆ. ನೋಡಿದರೆ ಉಸಿರೇ ನಿಂತಿದೆಯಂತೆ'. ಭಗವಂತನ ಆಟ ನಮಗೆ ಗೊತ್ತಾಗುವುದೇ ಇಲ್ಲ. ಒಟ್ಟಿನಲ್ಲಿ ಮುಂಬರುವ ಎಲ್ಲವನ್ನೂ ಎದುರಿಸಲು ಎದೆ ಗಟ್ಟಿ ಮಾಡುವುದೇ ಇದಕ್ಕಿರುವ ದಾರಿ. ಸೂರ್ಯ ಚಂದ್ರರ ದಿನಚರಿ ನೋಡಿ ಕಲಿಯಬೇಕು ನಾವುಗಳು. ಯಾರೇ ಬರಲಿ, ಯಾರೇ ಹೋಗಲಿ, ಏನೇ ಆಗಲಿ ದಿನಚರಿಗಳು ಎಂದಿನಂತೆ. ಮಾನ್ಯ ಡಿ.ವಿ.ಜಿಯವರ ಕಗ್ಗವೊಂದು ನೆನಪಾಯಿತು.

*ರವಿ ನಿಲದೆ ಸುತ್ತುತಿರೆ ಕರಗು ಕಳವಳವೇಕೊ/*

*ಸವೆಯಿಸುತಲೆಲ್ಲವನು ಕಡೆಗೊಯ್ವನವನು//*

*ಕವಳಿಸುವುದೆಲ್ಲವನು ಮರೆವು;ಬಾಳೊಳ್ ಅದೊಂದು/*

*ಶಿವಕೃಪೆಯ ಲಕ್ಷಣವೊ--ಮಂಕುತಿಮ್ಮ//*

ಸೂರ್ಯ, ತನ್ನ ಪಥದಲ್ಲಿ ನಿಲ್ಲದೆ ಒಂದೇ ಸಮನೆ ಸುತ್ತುತ್ತಿರಲಾಗಿ, ವ್ಯಥೆಯೂ ಬೇಡ, ಕಳವಳವೂ ಬೇಡ. ಮರೆವು ಎನ್ನುವ ಅಸ್ತ್ರ ಎಲ್ಲವನ್ನೂ ನುಂಗಿ ಹಾಕುವುದು. ಈ ಪ್ರಪಂಚದಲ್ಲಿರುವ ಎಲ್ಲವನ್ನೂ ಸವೆಯಿಸಿ ಕಡೆಗೆ ಕೊಂಡುಹೋಗುವ ಕಾಯಕ ಆತನದು. ನಮ್ಮ ಬದುಕಿನಲ್ಲಿ ಮರೆವು ಎನ್ನುವುದು ದೊಡ್ಡ ಕೊಡುಗೆ. ದಿವಸವೆಂಬ ಪಾತ್ರೆಯಿಂದ ಆಯುಷ್ಯವನ್ನು ಸೂರ್ಯದೇವ ಅಳೆದರೆ, ಯಮಧರ್ಮ ಲೆಕ್ಕವನ್ನಿಟ್ಟು, ನಮಗೆ ಉಪಕಾರ ಮಾಡಿ, ದೇಹವೆಂಬ ಕೊಡವನ್ನು ಸವೆಯಿಸುತ್ತಾರೆ.

ಹಾಗಾಗಿ ಭವಿಷ್ಯದ ಬಗ್ಗೆ ಆಳವಾಗಿ ಚಿಂತಿ‌ಸುವುದು ಬೇಡ. ಆದ ಹಾಗೆ ಆಗುತ್ತದೆ. ಭಯದ ಬದುಕು ಬೇಡ. ಆಯಾಯ ಕಾಲ ಬಂದ ಹಾಗೆ ಕೋಲ ಕಟ್ಟಿ ಬಾಳೋಣ. ‘ಕಾಲಕ್ಕೆ ತಕ್ಕಂತೆ ಕೋಲ’ ಮಾತೇ ಇದೆಯಲ್ಲ? ಇಂದಿನ ಜೀವನ ಇಂದಿಗೆ. ಎಲ್ಲಾ ಅವನಾಟದಂತೆ ಎಂದು ಇದ್ದು ಬಿಡೋಣ.

-ರತ್ನಾ ಕೆ.ಭಟ್ ತಲಂಜೇರಿ

(ಆಧಾರ: ಮಂಕುತಿಮ್ಮನ ಕಗ್ಗ)

ಚಿತ್ರ ಕೃಪೆ: ಇಂಟರ್ನೆಟ್ ತಾಣ