ಬಾಳಿಗೊಂದು ಚಿಂತನೆ - 197

ಬಾಳಿಗೊಂದು ಚಿಂತನೆ - 197

ಒಂದು ಮನೆಯಲ್ಲಿ, ಕುಟುಂಬದಲ್ಲಿ, ಕಛೇರಿಯಲ್ಲಿ ಹೇಗೆ ಎಲ್ಲರೂ ಒಂದಾಗಿ ವ್ಯವಹಾರ ನಡೆಸುವರೆಂದು ನಾವು ಯೋಚಿಸಿದರೆ ಪರಸ್ಪರ ಹೊಂದಾಣಿಕೆ ಕಾಣಬಹುದು. ಅನುಕರಣೆ ಇರಲೂಬಹುದು. ಹಿರಿಯರಿಗೆ ವಿಧೇಯತೆ ತೋರುವುದು ನಮ್ಮ ಸಂಸ್ಕಾರ. ಅವರು ನಮ್ಮನ್ನು ಸರಿಯಾದ ಮಾರ್ಗದರ್ಶನ ನೀಡಿ ಬೇಕಾದಂತೆ ಜೀವನದ ದಾರಿಯನ್ನು ತೋರಿಸಿಕೊಡುವರೆಂಬ ನಂಬಿಕೆ, ವಿಶ್ವಾಸವಿರಬಹುದು. ಕಛೇರಿಯಲ್ಲಿ ಓರ್ವ ಮುಖ್ಯಸ್ಥನ ಕೈಕೆಳಗೆ ಹಲವಾರು ಜನ ಇರಬಹುದು. ಅವರವರ ಸ್ಥಾನಮಾನಕ್ಕನುಸಾರವಾಗಿ ನಡೆ‌ಸಿಕೊಂಡು ಹೋಗುವುದು ಮುಖ್ಯಸ್ಥನ ಜವಾಬ್ದಾರಿ ಮತ್ತು ಕರ್ತವ್ಯ ಸಹ. ಮನೆಯಲ್ಲಿ ಮನೆಯ ಯಜಮಾನ ಅನಿಸಿಕೊಂಡವನ ಹೊಣೆಗಾರಿಕೆ ಬಹು ಗುರುತರವಾದುದು. ಸಂಸ್ಕಾರ, ಸಂಪ್ರದಾಯ, ಆಚಾರ-ವಿಚಾರಗಳ ಆಡೊಂಬಲವೇ ಮನೆಯ ತಳಪಾಯ.

*ಏಕಂ ವಿಷರಸೋ ಹಂತಿ ಶಸ್ತ್ರೇಣೈಕಶ್ಚ ಬಾಧ್ಯತೇ/*

*ಸರಾಷ್ಟ್ರಂ ಸಪ್ರಜಾಂ ಹಂತಿ ರಾಜಾನಂ ಮಂತ್ರವಿಸ್ರವಃ//*

ವಿಷ ಎನ್ನುವುದು ಕುಡಿದವನನ್ನು ಮಾತ್ರ ಕೊಲ್ಲಬಹುದು. ಶಸ್ತ್ರದಿಂದ ಒಮ್ಮೆಗೆ ಒಬ್ಬ ಸಾಯಬಹುದು. ಆದರೆ ತಲೆಬುಡವಿಲ್ಲದ ಆಡಳಿತ, ತಪ್ಪು ನಿರ್ಧಾರಗಳು, ಉಪಯೋಗವಿಲ್ಲದ ಸಲಹೆಗಳು, ಒಂದು ರಾಜ್ಯ ಅಥವಾ ದೇಶದಲ್ಲಿದ್ದರೆ, ಇಡೀ ಸಮೂಹವನ್ನೇ ತೆಗೆಯಬಹುದು. ಇಲ್ಲಿ ರಾಷ್ಟ್ರ, ರಾಜ್ಯ, ಪ್ರಜೆಗಳು ಜೊತೆಗೆ ಎಲ್ಲರ ಮಾತು ಕೇಳಿದ ನಾಯಕ ಸಹ ಹೋದ ಅಂತಲೇ ಲೆಕ್ಕ.

ಅದನ್ನೇ ಹೇಳುವುದು ಮನೆಯ ಯಜಮಾನ ಸರಿ ಇದ್ದರೆ ಮಾತ್ರ ಅದೊಂದು ಮನೆ ಎಂಬುದಾಗಿ. ಎಲ್ಲರೂ ಯಜಮಾನ ಆಗಲು ಹೊರಟರೆ ಅದು ಮನೆ ಹೋಗಿ ಮಸಣ ಆಗಬಹುದು. ಮುಖ್ಯಸ್ಥಾನದಲ್ಲಿ ಕುಳಿತವನ ಹೊಣೆ ಸಾಮಾನ್ಯ ವಾದುದಲ್ಲ. ಎಲ್ಲರೂ ಹೇಳಿದ್ದನ್ನು ಕೇಳಬೇಕು, ಎಲ್ಲರೂ ಒಪ್ಪುವ ಹಾಗೆ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದೇ ಇದ್ದಲ್ಲಿ ಬಂದದ್ದನ್ನು ಅನುಭವಿಸಬೇಕು. ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿ. ಹೊಂದಾಣಿಕೆಯೆಂಬ ಇಟ್ಟಿಗೆಗಳಿಂದ ಮನೆ ಮತ್ತು ಮನವನ್ನು ಕಟ್ಟೋಣ. ಅನುಸರಿಸಿಕೊಂಡು ಹೋಗೋಣ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ನಗಣ್ಯ. ಅದನ್ನು ಅಲ್ಲಲ್ಲೇ ಶಮನ ಮಾಡುವ ಕಲೆಗಾರಿಕೆ ಮುಖ್ಯ. ಮರದ ಹುಳದಂತೆ ಬದುಕನ್ನೇ ನಾಶಮಾಡಬಹುದು. ಅದು ನಮ್ಮೆಲ್ಲರ ಕೈಯಲ್ಲಿದೆ. ನಾವು ನೆಮ್ಮದಿಯಿಂದ ಇದ್ದು, ನಮ್ಮ ಸುತ್ತಮುತ್ತವಿರುವವರಿಗೂ ನೆಮ್ಮದಿ, ಶಾಂತಿ ನೀಡೋಣ.

-ರತ್ನಾಕೆ ಭಟ್ ತಲಂಜೇರಿ

(ಶ್ಲೋಕ ಆಧಾರ: ಸರಳ ಸುಭಾಷಿತ)

ಚಿತ್ರ ಕೃಪೆ: ಇಂಟರ್ನೆಟ್ ತಾಣ