ಬಾಳಿಗೊಂದು ಚಿಂತನೆ - 198

ಬಾಳಿಗೊಂದು ಚಿಂತನೆ - 198

ತುಂಬಾ ಬಿಸಿಲು ಇದ್ದರೆ ಕೊಡೆ ರಕ್ಷಣೆ ಕೊಡಬಹುದು. ಉರಿವ ಬೆಂಕಿಯನ್ನು ನೀರು ಹಾಕಿ ನಂದಿಸಬಹುದು. ಮದ ಬಂದು ಸೊಕ್ಕಿದ ಆನೆಯನ್ನು ಅಂಕುಶದಿಂದ ತಿವಿದು ಸರಿಪಡಿಸಬಹುದು. ಯಾವುದೇ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಮದ್ದಿನಿಂದ ಶಮನ ಮಾಡಬಹುದು. ಆಯುಷ್ಯವಿದ್ದರೆ ಬದುಕಬಹುದು. ವಿಷ ಪ್ರಯೋಗವನ್ನು ಸಹ ಮಂತ್ರ ಶಕ್ತಿಯಿಂದ, ಔಷಧದಿಂದ ನಿವಾರಿಸಬಹುದು. ಆದರೆ ಮೂರ್ಖರ ಮೂರ್ಖತನವನ್ನು ಹೋಗಲಾಡಿಸಲು ಹುಟ್ಟಿಸಿದ ಬ್ರಹ್ಮನಿಗೂ ಸಾಧ್ಯವಿಲ್ಲ. ಅದಕ್ಕೆ ಯಾವುದೇ ರೀತಿಯ ಮದ್ದಿಲ್ಲ. ಎಷ್ಟು ಹೇಳಿದರೂ ಕಿವಿಗೆ ತೆಗೆದುಕೊಳ್ಳುವ ಸ್ವಭಾವ ಅವರಿಗಿಲ್ಲ. ಅವರಲ್ಲಿ ಒಂದು ರೀತಿಯ ಹಠ, ತರ್ಕ, ನಾನು ಹೇಳಿದ್ದೇ ಸರಿ ಎನ್ನುವ ಭಾವ ಹೃದಯದಲ್ಲಿ ಮನೆಮಾಡಿ ಕೂತಾಗಿದೆ. ಅದನ್ನು ಹೊರಗೆಳೆಯಲು ಬಹಳ ಕಷ್ಟವಿದೆ. ಸರ್ವಜ್ಞ ವಚನ ಶಾಲಾಪಠ್ಯದಲ್ಲಿ ಓದಿದ್ದು ನೆನಪಾಯಿತು.

*ಮೂರ್ಖರಿಂಗೆ ಬುದ್ಧಿ ನೂರ್ಕಾಲ ಹೇಳಿದರು ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ*

ಏನೂ ಪ್ರಯೋಜನವಾಗದು.ಹೇಳಿದವನ ಬಾಯಿಗೆ ಆಯಾಸವಾಗಬಹುದಷ್ಟೆ. ಸಹಿಸುವುದೊಂದೇ ದಾರಿ. ನನ್ನನ್ನು ನಾನು ತಿದ್ದಿಕೊಳ್ಳಬಹುದು. ಇತರರನ್ನು ತಿದ್ದಲು ಪ್ರಯತ್ನಿಸಬಹುದು. ತಿದ್ದಿ ನಡೆದರೆ ಸಾರ್ಥಕ. ತಿದ್ದುವುದೇ ಇಲ್ಲ ಎಂದಾದರೆ ದೂರವೇ ಉಳಿಯುವುದು ಕ್ಷೇಮ. ನನ್ನ ಪರಿಚಯದವರೊಬ್ಬರು ಒಳಗೊಳಗೆ ಮಸಲತ್ತು ಮಾಡಿ ಒಂದು ದಿನ ಸಿಕ್ಕಿಬಿದ್ದರು. ನೋಡುವಾಗ ಪಾಪದ ಪಶುವಿನಂಥ ಮನುಷ್ಯ. ಗೊತ್ತೇ ಆಗದು. ಎಲ್ಲಾ ಅವಗುಣಗಳು ಹೊರಬಿದ್ದಾಗ ಪಶುತನದ ಹಿಂದಿನ ಕರಾಳ ಸತ್ಯ ಗೊತ್ತಾಯಿತು. ಛೇ, ಹೀಗೂ ಇದೆಯೇ? ಅನಿಸಿತು. ಮಹಾಮೂರ್ಖ ಸ್ವಭಾವ ಎಂಬುದು ತಿಳಿದಾಗ ಮೋಸಹೋದೆ ಎಂದು ಗೊತ್ತಾಯಿತು. ನೋಡಿ ಯಾರನ್ನೂ ಯಾವ ತೀರ್ಮಾನಕ್ಕೂ ಬರಬಾರದೆಂದು ನಿರ್ಧರಿಸಿದೆ. ಯಾರ ಸ್ನೇಹ ಬೇಕಾದರೂ ಮಾಡಿ, ಮೂರ್ಖರ ಸ್ನೇಹಮಾತ್ರ ಹುಶಾರು.

-ರತ್ನಾ ಕೆ.ಭಟ್ ತಲಂಜೇರಿ

(ಆಧಾರ: ಚಾಣಕ್ಯ ನೀತಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ