ಬಾಳಿಗೊಂದು ಚಿಂತನೆ - 199

ಬಾಳಿಗೊಂದು ಚಿಂತನೆ - 199

ಹಸಿದು ಮನೆ ಬಾಗಿಲಿಗೆ ಬಂದು ನಿಂತವನಿಗೆ ಒಂದು ತುತ್ತು ಅನ್ನ ನೀಡುವುದು ಮಾನವ ಧರ್ಮ. ಹೊಟ್ಟೆ ತುಂಬಿದವನಿಗೆ, ಕೇಳಿದ ತಕ್ಷಣ ಸಿಗುವವನಿಗೆ, ಕಾಲಮೇಲೆ ಕಾಲು ಹಾಕಿ ಕುಳಿತವನಿಗೆ, ಮೈಬಗ್ಗಿಸಿ ಬೆವರಿಳಿಸಿ ದುಡಿಯದವನಿಗೆ, ಹಿಡಿ ಅನ್ನದ ಬೆಲೆ ಗೊತ್ತಿರಲಾರದು. ಹೊಟ್ಟೆ ತುಂಬಿದವನಿಗೆ ಮತ್ತೂ ಮತ್ತೂ ತಿನ್ನು ಹೇಳುವುದರಲ್ಲಿ ಅರ್ಥವಿಲ್ಲ. ಹಾಗೆಂದು ಕೈಕಾಲು ಗಟ್ಟಿ ಇದ್ದವನಿಗೆ ಭಿಕ್ಷೆ ಹಾಕಲೂ ಬಾರದು.’ಬೆವರಿನ ಬೆಲೆ’ ಅರಿತಿರಬೇಕು. ದಾನ ಧರ್ಮ ಸರಿಯಾಗಿದ್ದವರಿಗೆ ಅಗತ್ಯವಿಲ್ಲ. ಏನೂ ಇಲ್ಲದವನಿಗೆ, ತೀರಾ ಕಷ್ಟ ಎಂದವನಿಗೆ ಕನಿಕರಿಸಬೇಕು. ಯಾಚಿಸುವವನ ಹಿಂದಿನ-ಮುಂದಿನ ಬದುಕಿನ ರೀತಿ-ನೀತಿ ಅರಿಯದೆ ದಾನ, ಸಹಕಾರ ಮಾಡಿದಲ್ಲಿ ನಮಗೆ ಹೊಂಡ ನಾವೇ ತೋಡಿದಂತೆ.

*ಧನೇನ ಭೋಗೇ ಭವತಿ* *ಮೇಧಾವಿ ವೃದ್ಧ ಸೇವಯಾ*/

*ಅಹಿಂಸಯಾ ಚ ದೀರ್ಘಾಯುಃ ಇತಿ* *ಪ್ರಾಹುರ್ಮನೀಷಿಣಃ//*

ಇಲ್ಲದ್ದವರಿಗೆ ದಾನ ಮಾಡುವ ಗುಣ ತುಂಬಾ ಒಳ್ಳೆಯದು. ಇದರಿಂದ ನಮಗೆ ಸಂತೋಷ, ಆತ್ಮತೃಪ್ತಿ ಸಿಗಲೂ ಬಹುದು. ಏನೂ ಇಲ್ಲದ್ದವರಿಗೆ ಒಂದು ತುತ್ತು ಅನ್ನಕೊಟ್ಟರೆ, ಅವರು ಅದನ್ನು ಉಣ್ಣುವಾಗ ನಮಗಾಗುವ ಆನಂದ ಅಸದಳ. ಅವನು ಅಷ್ಟೂ ತೃಪ್ತಿ ಪಡ್ತಾನೆ. ಯಾವ ಕೋಟಿ ರೂಪಾಯಿ ಕೊಟ್ಟರೂ ಆ ಸಂತೋಷ ಕಾಣಲು ಸಾಧ್ಯವಿಲ್ಲ. ಪ್ರಾಯದವರ, ಹಿರಿಯವರ, ಮಲಗಿದಲ್ಲೇ ಇರುವವರ ಚಾಕರಿ(ಸೇವೆ) ಮಾಡಿದವರು ಬುದ್ಧಿಶಾಲಿ, ಸಂಪನ್ನ ವ್ಯಕ್ತಿ ಎನ್ನಬಹುದು. ಅದಕ್ಕೂ ಪುಣ್ಯ ಬೇಕು. ಯಾರಿಗೂ ಮಾತಿನಲ್ಲಿ ಸಹ ಹಿಂಸೆ ಮಾಡುವ ಅಧಿಕಾರ ನಮಗಿಲ್ಲ. ಹಿಂಸೆ ಹೇಳಿದರೆ ಕೊಲ್ಲುವುದು, ಕಡಿಯುವುದು ಮಾತ್ರವಲ್ಲ, ಮಾತು, ವರ್ತನೆ, ವ್ಯವಹಾರ ಯಾವುದರಲ್ಲಿಯೂ ನೋವು ಕೊಡಬಾರದು. ಇದರಿಂದ ಆಯುಷ್ಯವೂ ಹೆಚ್ಚಾಗಬಹುದು. ನೋವು ಪಟ್ಟರೆ ನಾವು ಇಲ್ಲದ ಯೋಚನೆಗೆ ಬಿದ್ದು ಚಿಂತೆ ಮಾಡಬಹುದು. ಇದು ಆರೋಗ್ಯ ಕೆಡಲು ದಾರಿಯಾಗಬಹುದು. ಆಯುಷ್ಯ ತನ್ನಿಂತಾನೇ ಕಡಿಮೆ ಆಗಲು ಕಾರಣ ಆಗಬಹುದು. ತಿಳಿದವರು, ಬುದ್ಧಿವಂತರು ಹೀಗೆ ಹೇಳುವರು. ದೊಡ್ಡವರ ಮಾತಿನಲ್ಲಿ ತುಂಬಾ ತಿರುಳು ಇದೆಯಲ್ಲವೇ? ನಮ್ಮ ಬಾಳಹಾದಿಗೆ ದಾರಿದೀಪ ಹಿರಿಯರ ನುಡಿಗಳು. ನಾವು ಯಾವುದೇ ಕೆಲಸಗಳನ್ನು ಮಾಡಲಿ ‘ಆತ್ಮಸಾಕ್ಷಿ ಮತ್ತು ಆತ್ಮತೃಪ್ತಿ’ ಇರಲಿ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ಪಂಚತಂತ್ರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ