ಬಾಳಿಗೊಂದು ಚಿಂತನೆ - 200
ಬಹಳಷ್ಟು ಓದಿದವರು ನಮ್ಮ ಸುತ್ತಮುತ್ತ,ಪರಿಚಯಸ್ಥರಲ್ಲಿರಬಹುದು. ಮೂರು ಮೂರು ಸ್ನಾತಕೋತ್ತರ ಪದವಿಗಳನ್ನು, ಗೌರವ ಡಾಕ್ಟರೇಟ್, ಇನ್ನಿತರ ಕಲಿಕಾ ಪತ್ರಗಳನ್ನು ಪಡೆದವರು ಇರುವರು. ಮಹಾಜ್ಞಾನಿಗಳೆನಿಸಿಕೊಂಡವರೂ ಸಿಗಬಹುದು. ಆದರೆ ಏನಾದರೂ ಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಂದಾಗ ಅವರಲ್ಲಿ ಅದನ್ನು ಕೇಳಿದಾಗ ಪರಿಹಾರ ಸಿಗುವುದು ಕೆಲವರಿಂದ ಮಾತ್ರ.
ಹಾಗಾದರೆ ಜ್ಞಾನಕ್ಕೂ, ತಿಳುವಳಿಕೆಗೂ, ಕಲಿಯುವಿಕೆಗೂ, ಪ್ರಶಸ್ತಿಗಳಿಗೂ, ದಾಖಲೆಗಳಿಗೂ ಒಂದಕ್ಕೊಂದು ಸಂಬಂಧವಿಲ್ಲವೇ ಎಂಬ ಸಂಶಯ ಒಮ್ಮೊಮ್ಮೆ ಕಾಡುತ್ತದೆ. ವಿವೇಕವಿಲ್ಲದ ವಿದ್ಯೆಯಿಂದ, ಅಲ್ಪಜ್ಞಾನದಿಂದ ಅನಾಹುತಗಳೇ ಸರಿ. ನಮ್ಮ ಹಿರಿಯರು ಶಾಲೆಯ ಮೆಟ್ಟಿಲೇ ಹತ್ತದವರು ಇದ್ದಾರೆ. ಹಾಗಾದರೆ ಅವರುಗಳೆಲ್ಲ ಬದುಕಿಲ್ಲವೇ? ಜೀವನ ನಡೆಸಿಲ್ಲವೇ? ಕಂಡದ್ದು, ನೋಡಿದ್ದು, ಕೇಳಿದ್ದು, ಅನುಕರಣೆ, ಹಿರಿಯರ ನಡೆನುಡಿ ಸಂಸ್ಕಾರ, ಅನುಭವಗಳೇ ಅವರ ಜ್ಞಾನ.
*ಯಸ್ಯನಾಸ್ತಿ ವಿವೇಕಸ್ತು ಕೇವಲಂ ಯೋ ಬಹುಶ್ರುತ:/*
*ನ ಸ ಜಾನಾತಿ ಶಾಸ್ತ್ರಾರ್ಥಾನ್ ದರ್ವೀ ಪಾಕರಸಾನ್ನಿವ//*
ಸಕಲ ಶಾಸ್ತ್ರ ವೇದ ಪಾರಂಗತನಾದರೂ ಅದರ ಅರ್ಥವನ್ನು ಗ್ರಹಿಸದೆ ಓದಿದರೆ ಏನು ಪ್ರಯೋಜನ? ತಿಳುವಳಿಕೆ, ಜ್ಞಾನ, ಸರಿ-ತಪ್ಪುಗಳ ವಿವೇಕವಿಲ್ಲದ ಪಾಂಡಿತ್ಯ ನಿಷ್ಪ್ರಯೋಜಕ. ಹಲವಾರು ಬಗೆಯ ಪಕ್ವಾನ್ನಗಳ ಪಾತ್ರೆಯಲ್ಲಿ ಹಾಕಿಟ್ಟ ಸವುಟಿಗೇನು ಗೊತ್ತು ಅವುಗಳ ಸ್ವಾದ? ಅಂತೆಯೇ ಹೀಗಿರುವ ಘನಪಂಡಿತರ ವಿದ್ಯೆ ಸಹ. ಹಾಗಾಗಿ ಕಲಿಯುವಿಕೆ ತಲೆಯೊಳಗೆ ತೆಗೆದುಕೊಳ್ಳುವಂತಿರಲಿ. ಕಲಿತ ವಿದ್ಯೆ ಉಪಯೋಗಕ್ಕೆ ಬರಲಿ. ಸಿಕ್ಕಿದ ಪ್ರಶಸ್ತಿಗಳಿಗೆ ಅರ್ಥವಿರಲಿ. ಜ್ಞಾನಸಹಿತವಾದ ವಿದ್ಯೆ ಇರಲಿ. ಜ್ಞಾನದ ಹರಿವು ಹರಿಯುವ ಸಲಿಲ (ತೊರೆಯಲ್ಲಿ ಹರಿಯುವ ನೀರು)ದ ಹಾಗಿರಬೇಕಂತೆ. ಕಲಿತಷ್ಟೂ ಮತ್ತೂ ಇರುತ್ತದೆ. ಜೀವಮಾನವಿಡೀ ಕಲಿಯುವುದಿದೆ. ಶಾಲಾ ವಿದ್ಯೆ ಮಾತ್ರ ವಿದ್ಯೆಯಲ್ಲ. ಸಮಾಜದಿಂದಲೂ ಸಾಕಷ್ಟು ಕಲಿಯುತ್ತೇವೆ. ಪ್ರಕೃತಿ, ಆಕಾಶಕಾಯಗಳು, ಮಳೆ ಬಿಸಿಲು ಚಳಿ, ಖಗಮಿಗಗಳಿಂದಲೂ ನಾವು ತಿಳುವಳಿಕೆ ಪಡೆಯುವುದು ಬಹಳಷ್ಟಿದೆ. ಆದರೆ ಆಸಕ್ತಿ ಮುಖ್ಯ. ನಮ್ಮ ವಿದ್ಯೆಯ ಮೇಲೆ ನಮಗೇ ಜಿಗುಪ್ಸೆ ಬರದಂತೆ, ಇತರರು ಬೊಟ್ಟು ಮಾಡಿ ತೋರಿಸದಂತೆ ಕಲಿಕೆ ಇರಲಿ. ಅದುವೇ ಇಲ್ಲದವಗೆ ‘ಹೊಟ್ಟೆ ತುಂಬಿದವನಿಗೆ ಪುನಃ ಮೃಷ್ಟಾನ್ನ ಬಡಿಸಿ ತಿನ್ನು’ ಎಂದಂತಾದೀತು. ಪ್ರತಿಯೊಂದು ಕೆಲಸದಲ್ಲಿ ಸಹ ಸ್ವಯಂ ಆಸಕ್ತಿ ಇದ್ದರೆ ಮಾತ್ರ ಏನಾದರೂ ಸಾಧಿಸಬಹುದು. ‘ಹೊಸ ಹೊಸತು ಕಲಿಯೋಣ, ಜ್ಞಾನ ಹಂಚೋಣ’.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ಸಂಗ್ರಹ)