ಬಾಳಿಗೊಂದು ಚಿಂತನೆ - 201

ಬಾಳಿಗೊಂದು ಚಿಂತನೆ - 201

‘ಹಣವೇ ಮುಖ್ಯ' ಎನ್ನುವವರಿಗೆ ಗುಣ ನಗಣ್ಯ. ‘ಹಣವನ್ನು ಕಂಡರೆ ಹೆಣ ಸಹ ಬಾಯಿ ಬಿಡಬಹುದು’ ಹಿರಿಯರ ನುಡಿ. ಹಣವೆಂಬ ಮಾಯೆ ಸುತ್ತಿಹುದು ಮಾನವನ ನುಂಗಿಹುದು ಮಾನವತೆಯ. ಹಣ ಕೊಡುತ್ತೇನೆ ಎಂದು ಆಸೆ ತೋರಿಸಿ ಮಾಡಬಾರದ ಕೆಲಸಗಳನ್ನು ಮಾಡಿಸುವುದನ್ನು ದಿನನಿತ್ಯ ಪತ್ರಿಕೆ, ಮಾಧ್ಯಮಗಳಲ್ಲಿ, ಸಮಾಜದಲ್ಲಿ ನೋಡುತ್ತಿದ್ದೇವೆ. ಹಣ ಬೇಕು, ನಮ್ಮ ಅಗತ್ಯ ಎಷ್ಟಿದೆಯೋ ಅಷ್ಟು. ಹಾಗೆಂದು ವಾಮಮಾರ್ಗ ಸಲ್ಲದು. ಆ ರೀತಿಯ ಸಂಪಾದನೆಯು ಮತ್ತೊಬ್ಬರ ಕಣ್ಣೀರಿನದಾಗಿರಬಹುದು. ಯಾರಾದರೂ ಲಂಚದ ಹಣವನ್ನು ಮನಪೂರ್ವಕ ಕೊಡಲಾರರು. ಅದೊಂದು ಪಾಪದ ಶಾಪದ ಗಳಿಕೆ. ಮುಂದೊಂದು ದಿನ ತೆಗೆದುಕೊಂಡವನಿಗೆ ಮಾಡಿದ ಕರ್ಮ ಕಟ್ಟಿಟ್ಟ ಬುತ್ತಿ ಖಂಡಿತಾ. ಆಗ ಅದನ್ನು ಅನುಭವಿಸಲು ಅವನು ಮಾತ್ರ. ಯಾರೂ ಬರಲಾರರು. ಖರ್ಚು ಮಾಡಲು ಎಲ್ಲರೂ ಇರಬಹುದು. ಹೆಚ್ಚಿನವರ ಮಾತು ‘ಹೆಂಡತಿ ಮಕ್ಕಳಿಗಾಗಿ, ಗಂಡ ಮಕ್ಕಳಿಗಾಗಿ, ತಂದೆ ತಾಯಿಗಾಗಿ (ಕಡಿಮೆ ಇರಬಹುದು)’. ನಾಳೆ ಮಾಧ್ಯಮಗಳಲ್ಲಿ ಇಡೀ ದಿನ ಬಂದಾಗ, ಪತ್ರಿಕೆ ಮುಖಪುಟದಲ್ಲಿ ಹಾಕಿದಾಗ ಮರ್ಯಾದೆ ಹೋದಾಗ ಈತ ಒಬ್ಬಂಟಿ. ಮತ್ಯಾಕೆ ಹಣಕ್ಕಾಗಿ ಕೈಚಾಚುವ ಕೆಲಸ? ಆದರೂ ಈ ಮನುಷ್ಯ ಅನಿಸಿಕೊಂಡು, ಹಣದ ಹಿಂದೆ ಹೆಜ್ಜೆ ಹಾಕಿದವಗೆ ಬುದ್ಧಿ ಬಾರದು.

*ಅರ್ಥಾತುರಾಣಾಂ ನ ಗುರುರ್ನ ಬಂಧು:/*

*ಕಾಮಾತುರಾಣಾಂ ನ ಭಯಂ ನ ಲಜ್ಜಾ//*

*ಕ್ಷುದಾತುರಾಣಾಂ ನ ರುಚಿರ್ನ ಪಕ್ವಂ/*

*ಚಿಂತಾತುರಾಣಾಂ ನ ಸುಖಂ ನ ನಿದ್ರಾ//*

ಹಣದ ವ್ಯಾಮೋಹದೆದುರು ಯಾರ ಮಾತುಗಳೂ ಪಥ್ಯವಾಗದು, ಹಿರಿಯರೆಂಬ ಭಾವನೆಯೂ ಇರದು. ಅವನ ಚರ್ಮ ದಪ್ಪ, ಕಿವಿ ಮಂದವಾಗಿರುತ್ತದೆ. ಇತರರ ಬಗ್ಗೆ ಅಸಡ್ಡೆ ಮನೋಭಾವ, ಅಹಂನ ಕಿರೀಟ ಇಡೀ ಶರೀರವನ್ನು ವ್ಯಾಪಿಸಿ ಶಿರದ ಮೇಲೆ ಕುಳಿತುಕೊಂಡು ಬಿಡುತ್ತದೆ. ಕಾಮದ ಹುಚ್ಚು ಹಿಡಿದವನಿಗೆ ನಾಚಿಕೆ ಮಾನ ಮರ್ಯಾದೆಯಿಲ್ಲ, ಹೆದರಿಕೆ ಮೊದಲೇ ಇಲ್ಲ. ವಿಪರೀತ ಹಸಿವೆ ಆದಾಗ ಯಾವ ರುಚಿಗಳೂ ಬೇಡ, ಹೊಟ್ಟೆ ತುಂಬಿದರೆ ಸಾಕೆಂಬ ಧೋರಣೆ. ಚಿಂತೆಯಲ್ಲಿ ಮುಳುಗಿದವನಿಗೆ ಸುಖವಿಲ್ಲ, ನಿದ್ರೆಯೂ ಬಾರದು. ಹಾಗಾದರೆ ಇಂಥ ಪರಿಸ್ಥಿತಿಯಲ್ಲಿ ನಮಗ್ಯಾಕೆ ಈ ಆಲೋಚನೆಗಳು ಅಲ್ಲವೇ? ಸ್ನೇಹಿತರೇ, ಕಷ್ಟಪಟ್ಟು ದುಡಿದು ಗಳಿಸೋಣ, ಬೇರೆಯವರ ಸಂಪತ್ತು ಬೇಡ, ಇರುವುದರಲ್ಲಿಯೇ ತಿಂದುಂಡು ಜೀವಿಸೋಣ.

-ರತ್ನಾ ಕೆ.ಭಟ್, ತಲಂಜೇರಿ

(ಶ್ಲೋಕ: ಸುಭಾಷಿತ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ