ಬಾಳಿಗೊಂದು ಚಿಂತನೆ - 202

ಬಾಳಿಗೊಂದು ಚಿಂತನೆ - 202

ಗುಣವಂತರಿಗೆ, ಸಚ್ಚಾರಿತ್ರ್ಯದವರಿಗೆ, ಸಜ್ಜನರಿಗೆ, ದಾನ ಮಾಡಿದರೆ ಪುಣ್ಯ ಸಿಗುವುದು. ಆಪತ್ಕಾಲದಲ್ಲಿ ಒದಗದ ಸಹಾಯ ಇದ್ದರೂ ಪ್ರಯೋಜನವಿಲ್ಲ. ಕುಡುಕರಿಗೆ, ಜೂಜುಕೋರರಿಗೆ, ಕೆಟ್ಟಚಟಗಳಲ್ಲಿಯೇ ಮುಳುಗಿಕೊಂಡಿರುವವರಿಗೆ, ಅವರ ಹೊಗಳಿಕೆಗೆ ಮರುಳಾಗಿ ಹಣನೀಡಿದರೆ, ನೀರಿನ ಮೇಲೆ ಹೋಮ ಮಾಡಿದಂತೆಯೇ ಸರಿ. ‘ಮುಖ ನೋಡಿ ಮಣೆ ಹಾಕುವವರಿಗೆ’ ಏನೂ ಕೊಡಬಾರದು. ಒಮ್ಮೆಯ ಅವರ ಮಾತಿಗೆ ಮರುಳಾದರೆ, ನಾವು ಗುಂಡಿಗೆ ಬಿದ್ದಂತೆಯೇ ಸರಿ. ಪದೇಪದೇ ಕೇಳುವುದೇ ಚಟವಾಗಿಬಿಡುತ್ತದೆ. ಅಂಥವರಿಗೆ ಕೊಟ್ಟವನೂ ದಿವಾಳಿಯೇ ಸರಿ.

ದಾನಧರ್ಮ ಬೇಕು. ಯೋಗ್ಯತೆಯರಿತು ದಾನ ಮಾಡಬೇಕು. ತಾವಾಗಿ ಹೃನ್ಮನಗಳಲ್ಲಿ ಮೂಡುವ ಗುಣಗಳು ಒಬ್ಬರು ಕಲಿಸಿ ಬರುವುದಲ್ಲ. ಕಷ್ಟಕಾಲದಲ್ಲಿ ಎದೆಗುಂದದೆ ಇರುವುದು, ಮನೆಗೆ ಬಂದವರನ್ನು ಪ್ರೀತಿ, ವಿಶ್ವಾಸ, ಆದರದಿಂದ ಮಾತನಾಡಿಸಿ ಉಪಚರಿಸುವುದು ಇವೆಲ್ಲವೂ ಪೂರ್ವ ಸಂಸ್ಕಾರದಿಂದ ಬರುವುದು. ದಾನಧರ್ಮ ಸ್ವರ್ಗದ ಮೆಟ್ಟಿಲುಗಳು. ಅನ್ನದಾನ ಮಾಡದೆ ಮಾಡುವ ಯಾವ ಉತ್ತಮ ಕಾರ್ಯಕ್ರಮಗಳು ಸಂಪನ್ನಗೊಳ್ಳದು. ನಮ್ಮ ಯಾವುದೇ ಸಮಾರಂಭಗಳಲ್ಲಿ ಅನ್ನ ನೀಡುವುದು, ಬಂದ ಬಂಧುಬಳಗದವರ ಜೊತೆ ಕುಳಿತು ಉಣ್ಣುವುದು ಸಂಪ್ರದಾಯ. ಅನ್ನದಾನಕ್ಕೆ ಅಷ್ಟೂ ಮಹತ್ವವಿದೆ. ಹಿರಿಯರು ಹಾಕಿಕೊಟ್ಟ, ಬಿಟ್ಟು ಹೋದ ಬದುಕಿನ ಹಾದಿಯ ತಳಪಾಯವಿದು. ಹಸಿದವನ ಹೊಟ್ಟೆ ತುಂಬಿಸುವ ಕೆಲಸ ಪುಣ್ಯವಂತೆ. ಮನವರಿತು, ಕಷ್ಟವರಿತು, ಅವಶ್ಯಕತೆಯರಿತು ದಾನಧರ್ಮಾದಿಗಳನ್ನು ಮಾಡಿ ಕೃತಾರ್ಥರಾಗೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರಕೃಪೆ: ಇಂಟರ್ನೆಟ್ ತಾಣ