ಬಾಳಿಗೊಂದು ಚಿಂತನೆ - 203

ಬಾಳಿಗೊಂದು ಚಿಂತನೆ - 203

ಕೆಲವು ಜನರಿಗೆ ಯಾವುದರಲ್ಲೂ ಆಸಕ್ತಿ ಇಲ್ಲ. ಹಾಗೆಂದು ಉಣ್ಣುವುದು, ತಿನ್ನುವುದು, ನಿದ್ದೆ ಅದರಲ್ಲಿ ಮುಂದು. ಪ್ರಾಥಮಿಕ ಶಾಲೆಗಳಲ್ಲಿ ಕಲಿತ ‘ಸೌದೆ ತಾರೋ ಮಲ್ಲ, ಕತ್ತಿ ತಾಗಿತಲ್ಲ’ ಎಂದ ಹಾಗೆ. ಮಂದ ಗಂಜಿ ತೆಳಿಯಲ್ಲಿ ಬಿದ್ದ ನೊಣಗಳ ಹಾಗೆ. ಈಜಲೂ ಬಾರದು, ಮೇಲೇಳಲೂ ಆಗದು. ಸ್ವಪ್ರಯತ್ನ ಸೊನ್ನೆ. ಇತರರು ಹೇಳಿದ್ದನ್ನು ಸಹ ಕೇಳಲಾರರು. ಒಂದು ರೀತಿಯ ತರ್ಕದ ಮನಸ್ಸಿನವರು. ಯಾವುದಕ್ಕೂ ಬಗ್ಗದವರು.

 *ಅನವಸ್ಥಿತಚಿತ್ತಸ್ಯ ಸದ್ಧರ್ಮಮವಿಜಾನತಃ/*

*ಪರಿಪ್ಲವ ಪ್ರಸಾದಸ್ಯ ಪ್ರಜ್ಞಾನ* *ಪರಿಪೂರ್ಯತೇ//* 

ಸರಿಯಾದ ವ್ಯವಸ್ಥೆ ಇದ್ದೂ ಇಲ್ಲದವರ ಹಾಗಿರುವವ, ಮನಸ್ಸೇ ಇಲ್ಲದವ, ಸದ್ಧರ್ಮವ ತಿಳಿಯದವ, ಇರುವ ಕ್ಷಣಿಕ ಸುಖದಲ್ಲಿ ಆನಂದ ಹೊಂದುವವ, ಏನೂ ಪ್ರಯತ್ನ ಮಾಡದೆ ಇರುವವನ ಜ್ಞಾನ ಪರಿಪೂರ್ಣ ಆಗಲಾರದು. ಎಲ್ಲದಕ್ಕೂ ರೀತಿ -ನೀತಿಯಿದೆ. ಹೊಂದಾಣಿಕೆಯಿದೆ. ಆಸಕ್ತಿ ಮುಖ್ಯ. ನಿರಾಸಕ್ತಿ ತಾಳಿದರೆ ಹೊಸತರ ಅರಸುವಿಕೆ ಹೇಗೆ? ಯಾವುದಕ್ಕೂ ಮನಸ್ಸು ಮಾಡಿದರೆ ಮಾತ್ರ ಸಾಧ್ಯ. ಸತತ ಪ್ರಯತ್ನ ಬೇಕು. ಅದುವೇ ಇಲ್ಲದಿದ್ದರೆ ಎಲ್ಲವೂ ಶೂನ್ಯ, ಲೆಕ್ಕಭರ್ತಿ. ಪ್ರಯತ್ನ ನಿರಂತರವಾಗಿರಲಿ. ಇರುವ ಒಂದು ಮನುಷ್ಯ ಜನ್ಮದ ಸಾರ್ಥಕತೆ ನಾವೇ ಕಂಡುಕೊಳ್ಳಬೇಕು. ನಮಗ್ಯಾರು ಬಾಯಿಗೆ ಬಂದು ತುತ್ತ ನೀಡರು. ನಾವೇ ಅನ್ನ ಸಂಪಾದನೆಯ ದಾರಿಯನ್ನು ಹಿರಿಯರ ಮಾರ್ಗದರ್ಶನದೊಂದಿಗೆ ಕಂಡುಕೊಳ್ಳಬೇಕು.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ಸರಳ ಸುಭಾಷಿತ)

ಚಿತ್ರ ಕೃಪೆ: ಇಂಟರ್ನೆಟ್ ತಾಣ