ಬಾಳಿಗೊಂದು ಚಿಂತನೆ -205

ಯಾವುದೇ ಕೈಕೊಂಡ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ, ಆಸಕ್ತಿ, ಶ್ರದ್ಧೆ, ಮುಗಿಸಬೇಕೆಂಬ ಹಂಬಲವಿರಬೇಕು. ಇಲ್ಲದಿದ್ದರೆ ಹೊತ್ತು ಕಳೆಯಲು ತೊಡಗಿದ್ದೇವೆ, ಟೈಂಪಾಸಿಗೆ ಎಂದೇ ಅರ್ಥ. ಕೆಲಸ ಅಥವಾ ಹಣ ಸಂಪಾದನೆಗಾಗಿ ಕೆಲಸಕ್ಕೆ ಹೋಗುತ್ತಿಲ್ಲ, ಸುಮ್ಮನೆ ಕುಳಿತುಕೊಳ್ಳುವ ಬದಲು ಟೈಂಪಾಸಿಗೆ ಹೋಗುವುದೆಂದು ಹೇಳುವವರನ್ನು ಕಂಡಿದ್ದೇವೆ. ಅದರ ಬದಲು ಅದೇ ಜಾಗಕ್ಕೆ ಓರ್ವ ಅಗತ್ಯವಿದ್ದವನಿಗೆ ಹೋಗಬಹುದಿತ್ತು ಎಂದು ನನಗೆ ಅನಿಸಿದ್ದಿದೆ. ಹೊತ್ತು ಕಳೆಯಲು ಮಾನವ ಸಂಪನ್ಮೂಲವನ್ನು ಹಾಳು ಮಾಡುವುದು ಬೇಕಿತ್ತೇ ಎಂದು ಆಲೋಚಿಸಿದ್ದೂ ಇದೆ. ಅಣ್ಣ ಬಸವಣ್ಣ ‘ಕಾಯಕವೇ ಕೈಲಾಸ’ ಎಂದು ಸಾರಿದವರು, ನಂಬಿದವರು. ನಾವು ಮಾಡುವ ಯಾವುದೇ ಕೆಲಸಕಾರ್ಯದಲ್ಲೂ ಶಿವನನ್ನು ಕಾಣು, ಕೆಲಸವೇ ಶಿವ ಎಂದವರು. ದುಡಿಮೆಯೇ ಶಕ್ತಿ ಮತ್ತು ಭಕ್ತಿ ಎಂದರವರು ತಮ್ಮ ನೂರಾರು ವಚನಗಳಲ್ಲಿ. ಶರಣರ ಮಹಿಮೆಯನ್ನು ವಚನಗಳಲ್ಲಿ ವಿಶ್ವಕ್ಕೆ ಸಾರಿದ ಮಹಾನುಭಾವರು. ಸರಳತೆ, ಕಾಯಕತತ್ವ, ಸರ್ವಸಮಾನತೆ, ದಾಸೋಹದ ಅಗತ್ಯ ಮತ್ತು ಮಹತ್ವ, ಗುರು ಲಿಂಗ ಜಂಗಮರ ಸೇವೆ ಇವೆಲ್ಲವನ್ನೂ ಬಹಳ ಸರಳವಾಗಿ ಜನಮಾನಸಕ್ಕೆ ತೋರಿಸಿಕೊಟ್ಟವರು. ಹೊಸಗನ್ನಡದಲ್ಲಿ ತಮ್ಮ ವಚನಗಳನ್ನು ರಚಿಸಿ, ವೇದ ಉಪನಿಷತ್ತುಗಳ ಶ್ರೇಷ್ಠ ಸಾರವನ್ನು ಉಣಬಡಿಸಿದರು. ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನೇ ಮಾಡಿದವರು.
*ವೇದವನೋದಿದಡೇನು?*ಶಾಸ್ತ್ರವ ಕೇಳಿದಡೇನಯ್ಯಾ?*
*ಜಪವ ಮಾಡಿದಡೇನು?ತಪವ* *ಮಾಡಿದಡೇನಯ್ಯಾ?*
*ಏನ ಮಾಡಿದಡೇನು ನಮ್ಮ ಕೂಡಲ ಸಂಗಯ್ಯನ* *ಮನಮುಟ್ಟದನ್ನಕ್ಕ?*
ನಾವು ಯಾವುದೇ ಕೆಲಸ ಕಾರ್ಯಗಳನ್ನು ಮನಮುಟ್ಟುವಂತೆ, ಸರಿಯಾಗಿ ಅರ್ಥವಾಗುವಂತೆ ಮಾಡಬೇಕು. ವೇದಗಳ ಅಧ್ಯಯನ ಅಂದರೆ ಮಕ್ಕಳಾಟಿಕೆಯಲ್ಲ .ಅದರ ಸಾರವನ್ನು ಓದಿ ಅರ್ಥೈಸಿಕೊಳ್ಳಬೇಕು. ಸುಮ್ಮನೆ ಓದಿದರೆ ಪ್ರಯೋಜನವಿಲ್ಲ. ಶಾಸ್ತ್ರಗಳನ್ನು ಮನಪೂರ್ವಕವಾಗಿ ಕಲಿತು, ಆಚರಣೆಯಲ್ಲಿ ತರಬೇಕು. ಇಲ್ಲದಿದ್ದರೆ ಓದಿಯೂ ನಿಷ್ಪಲ. ಶಾಸ್ತ್ರಗಳನ್ನು ಕೇಳಿ ಅಳವಡಿಸಿದರೆ, ಕೇಳಿದ್ದಕ್ಕೂ ಸಾರ್ಥಕ. ಜಪ-ತಪಗಳನ್ನು ನಿಷ್ಠೆಯಿಂದ ಮಾಡಬೇಕು. ಎಲ್ಲವನ್ನೂ ಕಲಿತು, ಓದಿ, ಶಿವಜ್ಞಾನವನ್ನು ಕಲಿಯದಿದ್ದರೆ ,ಶಿವನ ಅನುಗ್ರಹಕ್ಕೆ ಪಾತ್ರನಾಗದಿದ್ದರೆ, ಸಾಧಿಸಿದ್ದು, ಗಳಿಸಿದ್ದು, ಓದಿದ್ದು ಎಲ್ಲಾ ವ್ಯರ್ಥವಲ್ಲವೇ? ಎಂದರವರು.
*ವೇದಕ್ಕೆ ಒರೆಯ ಕಟ್ಟುವೆ*
*ಶಾಸ್ತ್ರಕ್ಕೆ ನಿಗಳನಿಕ್ಕುವೆ*
*ತರ್ಕದ ಬೆನ್ನು ಭಾರನೆತ್ತುವೆನು*
*ಆಗಮದ ಮೂಗು ಕೊಯ್ವೆ*
*ಮಾದಾರ ಚೆನ್ನಯ್ಯನ ಮನೆಯ ಮಗ ನಾನು* ಎಂದರು.
*ದೇವನೊಬ್ಬ ನಾಮ ಹಲವು* ಸಾರಿದರು. ಶ್ರದ್ಧೆ, ಏಕಾಗ್ರತೆ, ಸಾಧನೆಯ ಪಥದಲ್ಲಿರಲಿ. ಶಿವಾನುಗ್ರಹ ಪಡೆಯಲು ಇವೆಲ್ಲವೂ ದಾರಿದೀಪವಾಗಿ ನಮಗೆ ಸಹಕಾರಿಯಾಗಿರಲಿ. ಭಕ್ತಿ ಭಂಡಾರಿ ಅಣ್ಣ ಬಸವಣ್ಣ ‘ಆತ್ಮವೇ ಪರಮಾತ್ಮ’ ಬೇರ್ಯಾಕೆ ಬೇಕು? ಸಾಧನೆಯ ಹಾದಿಯಲಿ ವೈಭೋಗ, ಆಡಂಬರ ತ್ಯಜಿಸಿ, ಮೊದಲು ಬದುಕಲು ಕಲಿಯಿರಿ ಎಂದರು.
ತಾನು ಮಾತ್ರ ಶ್ರೇಷ್ಠನಾಗದೆ ,ತನ್ನೊಂದಿಗೆ ಇತರರ ಏಳಿಗೆಯನ್ನೂ ಬಯಸಿದವರು, ಗೌರವಿಸಿದವರು, ಪುರಸ್ಕರಿಸಿದವರು. ೧೨ನೆಯ ಶತಮಾನದಲ್ಲಿ ಶರಣರ ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸಿದ ಧೀಮಂತ ಶಿವಶರಣರು. ಎಲ್ಲಾ ಅಲ್ಲದಿದ್ದರು ಸ್ವಲ್ಪವಾದರೂ ನಮ್ಮ ಬದುಕಿನಲ್ಲಿ ಮಹಾನ್ ತತ್ವಗಳನ್ನು ಅಳವಡಿಸಿ, ನಮ್ಮ ಮಕ್ಕಳಿಗೂ ಹೇಳಿ ತಿದ್ದಿತೀಡುತ ಆಚರಣೆಯಲ್ಲಿ ತಂದು ಕೃತಾರ್ಥರಾಗೋಣ. ಇದೇ ನಮ್ಮ ಅಳಿಲ ಸೇವೆ.
-ರತ್ನಾ ಕೆ ಭಟ್ ತಲಂಜೇರಿ
(ಸಂಗ್ರಹ: ಬಸವಣ್ಣನವರ ವಚನ ಮಾಹಿತಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ