ಬಾಳಿಗೊಂದು ಚಿಂತನೆ - 208

ನಾವು ‘ಮೂಢ’ ಎಂದರೆ ಏನೂ ತಿಳುವಳಿಕೆಯಿಲ್ಲದವರಿಗೆ ಸಾಮಾನ್ಯವಾಗಿ ಹೇಳುತ್ತೇವೆ. ಹಳ್ಳಿಯಲ್ಲಿ ದಡ್ಡ, ದಡ್ಡಿ ಹೀಗೆ ಹೇಳುವುದೂ ಇದೆ. ಮಂದಬುದ್ಧಿಯೂ ಸ್ವಲ್ಪವಿರಬಹುದು. ಮತ್ತೆ ಕೆಲವು ಜನ ಬೇಕು ಬೇಕೆಂದೇ ವರ್ತಿಸುವುದನ್ನು ಸಹ ಕಾಣುತ್ತೇವೆ. ಜವಾಬ್ದಾರಿಯಿಂದ ಜಾರಿಕೊಳ್ಳಲು ನೋಡುವ ಒಂದು ವರ್ಗ ಇದೆ. ಮೂಢನ ಕೈಯಲ್ಲಿ ಆಡಳಿತ ಕೊಟ್ಟರೇ ದೇವರೇ ಗತಿ. ಅವನಿಗೆ ಸ್ಥಿರ ಇಲ್ಲ. ಬೇರೆ ಯಾರೋ ಹೇಳಿದಂತೆ ಇವನ ವ್ಯವಹಾರ. ಅದೇ ಮೂಢನಾದವನಿಗೆ ಸಂಸ್ಕೃತ, ವೇದ, ವೇದಾಂತ, ಶಾಸ್ತ್ರ ಪುರಾಣಗಳು, ವ್ಯಾಕರಣ ಯಾವುದರ ಜ್ಞಾನವೂ ಇಲ್ಲದಿರಬಹುದು. ಪಾಂಡಿತ್ಯ, ಲಲಿತಕಲೆಗಳು ಲವಲೇಶವೂ ಇಲ್ಲ. ಆದರೆ ಮನೆಯ ದಿನ ನಿತ್ಯದ ವ್ಯವಹಾರವನ್ನು ಹೇಗೋ ನಿಭಾಯಿಸಿಯಾನು. ಅತ್ಯಂತ ಸರಳ ಸಜ್ಜನಿಕೆಯವನಾಗಿರಬಹುದು. ಅಹಂ ಅವನ ಹತ್ತಿರವೇ ಸುಳಿಯದು. ಆದರೆ ಗುರುಭಕ್ತಿ ಅಪಾರವಿರಬಹುದು, ಅದೇ ಅವನ ಒಳ್ಳೆಯತನಕ್ಕೆ ಕಾರಣವಿರಬಹುದು.
*ನಮಾಮಿ ಶಂಕರಾಚಾರ್ಯಗುರುಪಾದಸರೋರುಹಮ್/*
*ಯಸ್ಯ ಪ್ರಸಾದಾನ್ಮೂಢೋಪಿ ಸರ್ವಜ್ಞತ್ವಂ ಪ್ರಪದ್ಯತೇ//*
ಯಾವಾತನು ಶ್ರದ್ಧಾಭಕ್ತಿಗಳಿಂದ ಶ್ರೀ ಭಗವತ್ಪಾದರ ಆರಾಧನೆ ಮಾಡುವನೋ, ಭಗವಂತನ ಸೇವೆಯೊಂದಿಗೆ ಸದ್ಗುರು ಭಕ್ತಿ, ಸದ್ಗುರು ಶಕ್ತಿ ಎರಡೂ ಅವನದಾಗಬಹುದು. ಪರಶಿವನ ಸ್ವರೂಪಿಯಾದ ಆಚಾರ್ಯರ ಬೋಧನೆಗಳಲ್ಲಿ ಸ್ವಲ್ಪಾಂಶವನ್ನಾದರೂ ಅರ್ಥೈಸಿಕೊಂಡವ ಜ್ಞಾನಿಯಾಗಲು ಸಾಧ್ಯವಿದೆ. ಸರ್ವಜ್ಞ ಕಲ್ಪತರುವಾದ ಶ್ರೀಶಂಕರರು ಸರಸ್ವತೀಸ್ವರೂಪರು ’ಯಥಾ ಗುರು ತಥಾ ಶಿಷ್ಯ’ ಎಂಬ ಹಾಗೆ ಗುರುಗಳಂತೆ ಶಿಷ್ಯ. ಇವರ ಆರಾಧನೆಯಿಂದ ನಮಗೂ ಆ ಜ್ಞಾನವುಂಟಾಗುತ್ತದೆ .ಆದರ್ಶ ಸದ್ಗುರುಗಳೂ, ಶಿಷ್ಯ ಕಲ್ಪದ್ರುಮರೂ, ಭಕ್ತಕರುಣಾಳುಗಳೂ, ಯತಿಪುಂಗವರೂ, ವೇದಾಂತಭಾಷ್ಯಕಾರರೂ ಆದ ಶ್ರೀ ಶಂಕರರಿಗೆ ನಮೋ ನಮ:
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ : ವಂದೇ ಶಂಕರ ಸದ್ಗುರುಂ)
ಚಿತ್ರ ಕೃಪೆ: ಇಂಟರ್ನೆಟ್ ತಾಣ