ಬಾಳಿಗೊಂದು ಚಿಂತನೆ - 209

ಬಟ್ಟಲಿಗೆ ಬಡಿಸಿದ ಅನ್ನ ನೇರವಾಗಿ ಹೊಟ್ಟೆಗೆ ಹೋಗದಲ್ಲವೇ? ಅದನ್ನು ಬೆರೆಸಿ, ಕಲೆಸಿ, ಪದಾರ್ಥಗಳನ್ನು ಸೇರಿಸಿ ಮಿಶ್ರ ಮಾಡಿ ಉಣ್ಣಬೇಕು .ಅದೇ ರೀತಿ ಕಷ್ಟ ಪಡದೆ, ಮೇಲೆ ನೋಡಿಕೊಂಡು ಕುಳಿತರೆ, ದುಡಿಯದೆ ಇದ್ದರೆ ಬಟ್ಟಲಿಗೆ ಅನ್ನ ಎಲ್ಲಿಂದ ಬರಬೇಕು? ಅದೃಷ್ಟ ಬಲದಿಂದ ಅನ್ನವೇನೋ ನಿರಾಯಾಸವಾಗಿ ಸಿಕ್ಕಿತು, ಕೈಯ ಪ್ರಯತ್ನ ಬೇಕಲ್ಲ? ದುಡಿದು ಬೆವರಿಳಿಸಿ ಸಂಪಾದಿಸಿದ ಅನ್ನದ ಒಂದೊಂದು ಅಗುಳಿಗೂ ಮಹತ್ವವಿದೆ, ಬೆಲೆಯಿದೆ.
*ಪಶ್ಯ ಕರ್ಮವಶಾತ್ ಪ್ರಾಪ್ತಂ ಭೋಜ್ಯಕಾಲೇಪಿ ಭೋಜನಮ್/*
*ಹಸ್ತೋದ್ಯಮಂ ವಿನಾ ವಕ್ತ್ರೇ ಪ್ರವಿಶೇನ್ನ ಕದಾಚನ//*
ಪ್ರತಿಯೊಂದರಲ್ಲಿಯೂ ಪ್ರಯತ್ನ ಮುಖ್ಯ. ಅದುವೇ ಇಲ್ಲದವರಿಗೆ ಏನೂ ದಕ್ಕದು. ಉತ್ತಮನು, ಪ್ರಯತ್ನಶೀಲನು, ಬಿದ್ದರೂ ಮತ್ತೆದ್ದು ಕೆಲಸಗಳಲ್ಲಿ ತೊಡಗುವನು. ಆದರೆ ಯಾವುದೂ ಬೇಡ ಎಂಬ ಸೋಮಾರಿಯು ಬಿದ್ದರೆ ಏಳಲು ಪ್ರಯತ್ನವೇ ಮಾಡಲಾರನು. ಪ್ರಯತ್ನವೇ ಇಲ್ಲದವನಿಗೆ ಫಲ ಎಲ್ಲಿಯದು?
ಚಿಕ್ಕಮಕ್ಕಳಿಗಾದರೆ ಹೇಳಬಹುದು'ಯಾವುದು ಸರಿ, ಯಾವುದು ತಪ್ಪು,ಏನು ಮಾಡಿದರೆ ಒಳ್ಳೆಯದು'ಎಂಬ ವಿಚಾರ. ಬೆಳೆದು ನಿಂತ ದೊಡ್ಡವರಿಗೆ ಏನು ಹೇಳೋಣ? ನಾವು ಕೈಗೊಳ್ಳುವ ಕೆಲಸಕಾರ್ಯಗಳಲ್ಲಿ ಏನಾದರೂ ಲೋಪವಾಗಬಹುದು, ಪ್ರತಿಫಲ ದೊರೆಯಲಾರದು ಎಂಬ ಶಂಕೆ ಬೇಡ. ಅದು ನಂತರದ ವಿಚಾರ. ಬಾಹುಬಲ, ಮನೋಬಲದ ಮೇಲೆ ನಂಬಿಕೆ, ವಿಶ್ವಾಸವಿರಬೇಕು.
ಎಳೆಯ ವಯಸ್ಸಿನಲ್ಲಿ ಅಜ್ಞಾನ ಸಹಜ. ಹಾಗೆಂದು ಪ್ರಾಯಕ್ಕೆ ಬಂದು ಬೆಳೆದು ನಿಂತ ಮೇಲೆ ದುಡಿಯಲೇ ಬೇಕಲ್ಲವೇ? ಸಾಗರವು ಎಂದಾದರೂ ನೀರು ಬರಲಿ ತನ್ನೊಡಲಿಗೆ ಎಂದು ಬೇಡುವುದಿಲ್ಲ .ಆದರೂ ಅದು ಜಲಭರಿತ, ಜಲಪೂರಿತ. ವ್ಯಕ್ತಿ ತನ್ನಲ್ಲಿ ಅರ್ಹತೆ ಬೆಳೆಸಿಕೊಂಡಾಗ, ಸಾತ್ವಿಕತೆ ಮೆರೆದಾಗ, ನ್ಯಾಯವಾಗಿ ದುಡಿದಾಗ ಸಂಪದವು ತಾನಾಗಿಯೇ ಬರುತ್ತದೆ. ದೇವರಿತ್ತ ಈ ಜನ್ಮವನ್ನು ಉತ್ತಮ ಕೆಲಸಕಾರ್ಯಗಳಿಂದ ಸಾರ್ಥಕ್ಯಗೊಳಿಸೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ