ಬಾಳಿಗೊಂದು ಚಿಂತನೆ - 21 (ಸುಭಾಷಿತ)

ಬಾಳಿಗೊಂದು ಚಿಂತನೆ - 21 (ಸುಭಾಷಿತ)

ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್/

ಉದಾರಚರಿತಾನಾಂ ತು  ವಸುದೈವ ಕುಟುಂಬ ಕಮ್//

ಈ ಸಂಸಾರ ಸಾಗರ ಬಹಳ ವಿಶಾಲವಾದದ್ದು. ಅನೇಕ ಜನ್ಮಗಳ ಪುಣ್ಯ ಫಲದಿಂದ ನಮಗೆಲ್ಲ ಮಾನವ ಜನ್ಮ ಬಂದಿದೆ. *ಇವ ನಮ್ಮವ, ಅವ ಪರಕೀಯ* ಎಂಬ ಮನೋಭಾವ ಯಾಕೆ? ಸಂಕುಚಿತ ಮನಸ್ಸು ಕೆಲವು ಜನರಲ್ಲಿ ಇದೆ. ಅದು ಬೇಡ. ಎಲ್ಲರ ಮೈಯಲ್ಲೂ ಹರಿಯುವುದು ಕೆಂಪು ಬಣ್ಣದ ರಕ್ತ. ಬಿಳಿ ಬಣ್ಣ ಹೆಚ್ಚಾದರೆ ಅಪಾಯ ಕಟ್ಟಿಟ್ಟ ಬುತ್ತಿ.*ಹೊಟ್ಟೆ ಹಸಿವಿಗೆ ಅನ್ನವ ಬಿಟ್ಟು ಚಿನ್ನವ ತಿನ್ನಲಾದೀತೇ?* ಉದಾರಿಗಳಿಗೆ ಲೋಕವೇ ತಮ್ಮ ಮನೆ ಎಂಬ ಮನಸ್ಸು ಇರುತ್ತದೆ. ಇನ್ನು ಹಲವು ಮಂದಿಗಳ ಮನಸ್ಸು ಬಹಳ ಸಣ್ಣದಿದ್ದು,*ಜಾತಿ, ಮೇಲು, ಕೀಳು, ದೇಶ, ಭಾಷೆ, ಬಣ್ಣ* ಎಂಬ ಭೂತ ತಲೆಗೆ ಹೊಕ್ಕಿರುತ್ತದೆ. ನಾವೆಲ್ಲ ದೇವರ ಇಚ್ಛೆಯಂತೆ ಬಂದವರು, ಮಾನವ ಜಾತಿ ಎಲ್ಲಾ ಒಂದೇ ಎನ್ನೋಣವೇ? ಇಲ್ಲಿ ಏನಿದ್ದರೂ ಅವನಿಚ್ಛೆಯಂತೆ ಎಲ್ಲಾ, ನಮ್ಮದೇನಿಲ್ಲ. ವಿಶ್ವ ಮಾನವತೆಯ ಸಂದೇಶವನ್ನು ಮನಸಲಿಟ್ಟು, ಎಲ್ಲರನ್ನೂ ಪ್ರೀತಿ,ವಿಶ್ವಾಸ, ಮಮಕಾರ, ಗೌರವದಿಂದಲೇ ಕಂಡರೆ *ವಸುದೈವ ಕುಟುಂಬ* ಕ್ಕೆ ಒಂದು ಅರ್ಥ ಬರುತ್ತದೆ. ನಮ್ಮ ಹೃದಯ ವೈಶಾಲ್ಯತೆಯನ್ನು, ಆಲದ ಮರದ ಕಾಂಡಗಳಂತೆ ಸುತ್ತಲೂ ಪಸರಿಸಿ ವಿಶಾಲವಾಗಿಸೋಣ.

(ಆಧಾರ:ಸರಳ ಸುಭಾಷಿತ)

-ರತ್ನಾ ಭಟ್ ತಲಂಜೇರಿ