ಬಾಳಿಗೊಂದು ಚಿಂತನೆ - 210

ಬಾಳಿಗೊಂದು ಚಿಂತನೆ - 210

ಭಗವಂತನ ಮೇಲೆ ಭಾರಹಾಕಿ, ನೀನೇ ಎಲ್ಲಾ ನೋಡಿಕೊಂಡು ಏನು ಬೇಕಾದರೂ ಮಾಡು ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಲು ಸಾಧ್ಯವೇ? ನಾವು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಡವೇ? ಕೆಲಸ ಮಾಡದಿದ್ದರೆ ಗಳಿಕೆ ಎಲ್ಲಿಯದು? ಜನ್ಮವೆತ್ತಿದ ಮೇಲೆ ಬದುಕು ಸಾಗಿಸಬೇಕು. ಒಂದು ಹಂತದವರೆಗೆ ಹೆತ್ತವರು ನೋಡಿಯಾರು. ನಂತರ ಅವರವರ ಕಾಲಮೇಲೆ ಅವರೇ ನಿಲ್ಲಲು ಶಕ್ತರಾಗಬೇಕು. ಕಾರ್ಯವೇ ಇಲ್ಲದೊಡೆ ಪ್ರಗತಿಯಾಗಲಿ, ಯಶಸ್ಸಾಗಲಿ ಎಲ್ಲಿಯದು? ಬರಿದೆ ಆಸೆ-ಆಕಾಂಕ್ಷೆಯಿಂದ ಫಲ ಸಿಗದು. ಆಹಾರಕ್ಕಾಗಿ ಸೂಕ್ಷ್ಮ ಜೀವಿ ಸಹ ಹೋರಾಟ ನಡೆಸುವುದು. ಸೊಳ್ಳೆಯೊಂದು ಎಷ್ಟು ಓಡಿಸಿದರೂ ಪುನ: ಪುನ: ಹತ್ತಿರ ಬರುವಂತೆ . ದೇವರ ರಥ ಸುಮ್ಮನೆ ಸಾಗದು. ಹತ್ತಾರು ಜನ ಸೇರಿ ಎಳೆದಾಗ ಮುಂದೆ ಮುಂದೆ ಸಾಗುವುದು. ಅದೇ ರೀತಿ ಪ್ರಯತ್ನ ಬೇಕು. ಸುರಾಸುರರು ಸೇರಿ ಸಮುದ್ರಮಥನ ಮಾಡಿದ ಕಾರಣ ಅಮೃತ ದೊರೆಯಿತಲ್ಲವೇ?

*ನ ದೈವಮಿತಿ ಸಂಚಿಂತ್ಯ ತ್ಯಜೇದುದ್ಯೋಗಮಾತ್ಮನಃ/*

*ಅನುದ್ಯಮೇನ ಕಸ್ತ್ಯೆಲಂ ತಿಲೇಭ್ಯಃ ಪ್ರಾಪ್ತುಮರ್ಹತಿ//*

ದೈವದೇವರುಗಳ ಮೇಲೆ ಭಾರಹಾಕಿ ಮನುಷ್ಯ ತನ್ನ ಉದ್ಯೋಗವನ್ನು ಬಿಡಕೂಡದು. ಕಷ್ಟ ಬಂದು ಸಂಪಾದಿಸಿದ್ದರಲ್ಲಿ  ಉಣ್ಣುವಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ಕೈಯಿಂದ ಕೆಲಸ ಮಾಡದೆ ಎಳ್ಳಿನಿಂದ ಎಣ್ಣೆ ತೆಗೆಯಬಲ್ಲೆ ಎಂದರೆ ಹೇಗೆ? ದುಡಿಮೆ ಎನ್ನುವುದು ಯಾವ ವ್ಯಕ್ತಿಯನ್ನೂ ವಂಚಿಸಲಾರದು. ಆದರೆ ವ್ಯಕ್ತಿಯೇ ದುಡಿಮೆಗೆ ವಂಚಿಸಬಲ್ಲ. ಕಷ್ಟಪಟ್ಟರೆ ದೈವದೇವರುಗಳ ಸಹಕಾರ ತನ್ನಿಂದ ತಾನೆ ಸಿಗಬಹುದು. ದುಡಿಮೆಯಲ್ಲಿಯೇ ಭಗವಂತನನ್ನು ಕಾಣಬೇಕು. ಶಕ್ತಿ, ಶೃದ್ಧೆ, ಮನಸ್ಸು, ಛಲ ಇದ್ದರೆ ಬದುಕು ನಿರಾಳ. ಆಲಸ್ಯವೆಂಬ ಶತ್ರುವನ್ನು ಹೊಡೆದೋಡಿಸಬೇಕು. ಉದ್ಯೋಗಶೀಲನಾದ ಮನುಜನನ್ನು ಎಲ್ಲರೂ ಮೆಚ್ಚುವರು. ಕೆಲಸ, ಸಾಹಸ, ಧೈರ್ಯ, ಬುದ್ಧಿಶಕ್ತಿ, ಪರಾಕ್ರಮ, ಹಂಬಲ, ಏಕಾಗ್ರತೆ ಎಲ್ಲಿದೆಯೋ ಅಲ್ಲಿಗೆ ದೈವ ಸಹಕಾರವೂ ಇರುವುದು. ದುಡಿಯೋಣ ಹಂಚೋಣ ಉಣ್ಣೋಣ ತೃಪ್ತಿ, ನೆಮ್ಮದಿಯಲಿರೋಣ.

-ರತ್ನಾ ಕೆ ಭಟ್ ತಲಂಜೇರಿ

(ಶ್ಲೋಕ: ಸುಭಾಷಿತ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ