ಬಾಳಿಗೊಂದು ಚಿಂತನೆ - 212
ಮನಸ್ಸು ನಿರ್ಮಲವಾಗಿ, ಶುದ್ಧತೆ ಮತ್ತು ಬದ್ಧತೆಯಿಂದ ಕೂಡಿಗೈದ ಯಾವ ಕಾರ್ಯವಾದರೂ ಜಯ ಸಿಗಬಹುದೆಂಬ ನಂಬಿಕೆ. ಭಗವಂತನ ನಾಮಸ್ಮರಣೆಯಾದರೂ ಅಷ್ಟೆ. ಮನದಲ್ಲೇನೋ ಗ್ರಹಿಸಿಕೊಂಡು ದೇವರ ಭಾವಚಿತ್ರದೆದುರು ಕುಳಿತು ಜಪ-ತಪ, ಪೂಜೆ-ಧ್ಯಾನದಿಂದ ಏನೂ ಪ್ರಯೋಜನವಿಲ್ಲ. ಕಾಣುವವರ ಕಣ್ಣಿಗೆ ಮಹಾ ದೈವಭಕ್ತ ಅನಿಸಿಕೊಳ್ಳಬಹುದು. ಭಕ್ತಿ ಕಡಿಮೆಯಾಗಿ ಆಡಂಬರ ಮೇಲಾಗಬಹುದು. ಆ ಕಣ್ಣಿಗೆ ಕಾಣಿಸದ ಮಹಾಶಕ್ತಿಯನ್ನು ಮನದಲ್ಲೇ ಕಲ್ಪಿಸಿ ಭಜಿಸಿದರೆ, ಆತನೇನು ಒಲಿಯುವುದಿಲ್ಲ ಎನ್ನುವನೇ? ವೈಭವದ ಪೂಜೆ ಮಾಡಿರೆಂದು ಹೇಳುವುದಿಲ್ಲ. ನಾವುಗಳು ನಮ್ಮ ಆತ್ಮತೃಪ್ತಿಗಾಗಿ ಮಾಡ್ತೇವೆ ಅಷ್ಟೆ. ಇನ್ನೊಂದು ಹಿರಿಯರಿಂದ ತಲೆತಲೆಮಾರುಗಳಿಂದ ಬಂದಂತಹ ಪದ್ಧತಿಯೋ, ಸಂಸ್ಕಾರವೋ, ಆಚರಣೆಯೋ ಇರಬಹುದು.
*ಅತಃ ಶ್ರೀ ಕೃಷ್ಣ ನಾಮಾದಿ ನ ಭವೇದ್ ಗ್ರಾಹ್ಯಮ್ ಇಂದ್ರಿಯೈಃ/*
*ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಮ್ ಏವ ಸ್ಫುರತ್ಯದಃ//*
ಮನಸ್ಸಿನಲ್ಲಿ ಕೆಟ್ಟದ್ದನ್ನೇ, ಬೇಡದ್ದನ್ನೇ ತುಂಬಿಕೊಂಡು, ಶ್ರೀ ಕೃಷ್ಣನ ದಿವ್ಯ ನಾಮಂಗಳ, ಮಹಿಮೆಯ, ಗುಣಂಗಳ, ಯಾವುದೇ ಲೀಲೆಗಳ, ಎಷ್ಟು ಓದಿದರೂ, ಜಪಿಸಿದರೂ ಪ್ರಯೋಜನವಿಲ್ಲ. ಇಂದ್ರಿಯಗಳ ಶುದ್ಧತೆ ಮುಖ್ಯವಾಗಿ ನಮಗೆ ಬೇಕು. ಅದು ನಾವು ಹೇಳಿದ ಹಾಗೆ ಕೇಳುವ ಮನೋಸ್ಥಿತಿಯಲ್ಲಿರಬೇಕು. ಆಗ ದೇವನ ಸೇವೆ ಪರಿಪೂರ್ಣ ಆಗಬಹುದೆಂಬ ವಿಶ್ವಾಸ. ‘ನಾನು ದೇವನ ದಾಸಾನುದಾಸ’ ಹೇಳಿಕೊಂಡು ಮನಸ್ಸಿಗೆ ಯಾವಾಗ ಬಂತೋ ಆಗ, ನಮ್ಮ ಸೇವೆ ಸಾರ್ಥಕತೆಯನ್ನು ಪಡೆಯಲೂ ಬಹುದು. ಉಪನಿಷತ್ತುಗಳು, ಪುರಾಣಗಳು, ವೇದಗಳು, ನಾರದ ಪಂಚರಾತ್ರದಂತಹ ವೈದಿಕ ಸಾಹಿತ್ಯಗಳನ್ನು ಯಾವುದನ್ನೂ ಓದದೆ ಮಂತ್ರ-ತಂತ್ರಗಳಿಂದ ಭಗವಂತನ ಪೂಜೆ ಮಾಡುವೆನೆಂದು ಹೊರಟರೆ ಸಮಾಜದಲ್ಲಿ ಕ್ಷೋಭೆಯೇ ಉಂಟಾಗಬಹುದು. ಓರ್ವ ಸಮರ್ಥ ಗುರುವಿನ ಮೂಲಕ ಇದನ್ನೆಲ್ಲ ಓದಿ ಕಲಿತು ತಿಳಿದು, ಸಮಾಜದಲ್ಲಿ ಪ್ರಚಾರ ಮಾಡುವುದರಿಂದ, ಪ್ರಯೋಗ ಮಾಡುವುದರಿಂದ ಲೋಕಕ್ಷೇಮ, ನಮಗೂ ನೆಮ್ಮದಿ. ಅರೆಬರೆ ಕಲಿತು ಇದನ್ನೆಲ್ಲ ಆಚರಣೆಗೆ ತರಬಾರದು. ವಿದ್ಯೆಯಲ್ಲಿ ಪರಿಪೂರ್ಣತೆ ಎಂಬುದು ಸಾಗರದಂತೆ ವಿಶಾಲವಾದ್ದು. ನಿಂತ ನೀರಲ್ಲ, ಹರಿಯುವ ನದಿಯ ನೀರಿನಂತೆ. ಕಲಿಯುವುದು ಉಸಿರಡಗುವ ತನಕವೂ ಇದೆ. ಉತ್ತಮತೆ ಕಲಿಯೋಣ, ಕಲಿಸೋಣ, ಬೆಳೆಸೋಣ, ಬೆಳಗೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ ಆಧಾರ: ಧರ್ಮ ಏಕೆ? ಹೇಗೆ?)
ಚಿತ್ರ ಕೃಪೆ: ಇಂಟರ್ನೆಟ್ ತಾಣ