ಬಾಳಿಗೊಂದು ಚಿಂತನೆ - 213
ನೋವು, ದು:ಖ, ಸಂಕಟ, ಕಷ್ಟಗಳು ,ಹೇಳಲಾರದ ಅನೇಕ ವಿಷಯಗಳು ಎದೆಯಲ್ಲಿ ಗೂಡುಕಟ್ಟಿದರೆ, ಮನಸ್ಸು ಹಿಂಡುವುದು ಸಹಜ. ನಮ್ಮವರೇ ಅನಿಸಿಕೊಂಡವರ ಹತ್ತಿರ ನೋವಿನ ಕಾರಣವನ್ನು ಮನಸ್ಸುಬಿಚ್ಚಿ ಹೇಳಿಕೊಂಡರೆ ಅದಕ್ಕಿಂತ ದೊಡ್ಡ ಔಷಧ ಮತ್ತೊಂದಿಲ್ಲ. ಮಡುಗಟ್ಟಿದ ಕಣ್ಣೀರು ಹೊರಬಂದಷ್ಟೂ ದು:ಖ ಕಡಿಮೆಯೆಂದು ಹಿರಿಯರ ಮಾತು. ಅದು ಹೌದು ಸಹ.
ಎಳೆಯ ಮಕ್ಕಳು, ಪ್ರಾಥಮಿಕ ಶಾಲಾ ಹಂತದವರನ್ನು ಅವಲೋಕಿಸಿದರೆ, ಒಬ್ಬರಿಗೊಬ್ಬರು ಜಗಳ ಮಾಡಿದಾಗ, ಎದುರಾಳಿ ಮಗುವನ್ನು ಗದರಿದಾಗ ಇವನ ನೋವೆಲ್ಲ ಮಾಯ. ಅಳುವುದು ಇಲ್ಲ .ಇದನ್ನು ಬಾಲಿಶ ಬುದ್ಧಿ ಎನ್ನಬಹುದು. ಆದರೆ ದೊಡ್ಡವರಾದ ಮೇಲೆ ಇದಾಗದು. ಆಗಿನ ನೋವಿನ ವಿಷಯಗಳೇ ಬೇರೆ.
ಹತ್ತಿರದ ಸ್ನೇಹಿತರು ನಾಲ್ಕಾರು ಸಾಂತ್ವನದ ಮಾತುಗಳನ್ನು ಹೇಳಿಯಾರು. ಸೋತರೆ ಸಾಧ್ಯವಾದರೆ ಆರ್ಥಿಕವಾಗಿ ಕೈಲಾದಷ್ಟು ಸಹಕರಿಸಿಯಾರು. ಯಾರ ಹತ್ತಿರವೂ ಹೇಳಿಕೊಳ್ಳದೆ ಕೊರಗಿದರೆ ‘ಮರದ ಹುಳ ಮರವನ್ನು ಕೊರೆದಂತೆ’ ಆಗಬಹುದು. ನಾಶವಾದ ಮೇಲೆ ಉಳಿದು ಏನು ಪ್ರಯೋಜನ? ಕೆಲವು ವಿಷಯಗಳಲ್ಲಿ ಸ್ವಾಭಿಮಾನ ಬದಿಗೊತ್ತಿ ವ್ಯವಹರಿಸಬೇಕಾಗುತ್ತದೆ. ಸ್ವಾಭಿಮಾನದ ಬದುಕು ಶ್ಲಾಘನೀಯ. ಹಾಗೆಂದು ಸಮಯ, ಸಂದರ್ಭ ಬೇಕು.
*ದು:ಖೇ ಮಿತ್ರಪರೀಕ್ಷಾ ಶೂರಪರೀಕ್ಷಾ ರಣಾಂಗಣೇ ಭವತಿ/*
*ವಿನಯೇ ಭೃತ್ಯಪರೀಕ್ಷಾ ದಾನಪರೀಕ್ಷಾ ಚ ದುರ್ಭಿಕ್ಷೇ//*
ಸಂಕಟ, ದು:ಖ, ನೋವಿನ ಸಮಯದಲ್ಲಿ ಗೆಳೆಯನ ಸ್ನೇಹಿತನ ನಿಜಪ್ರೀತಿ, ಗೆಳೆತನದ ಮೌಲ್ಯ ಹೊರಬರುವುದು. ವೀರಶೂರತನಗಳ ಪರೀಕ್ಷೆ ಯುದ್ಧರಂಗದಲ್ಲಿ .ಕೆಲಸ ಮಾಡಲು ಬಂದವನ ಪರೀಕ್ಷೆ ಆತನ ವಿನಯ ವಿಧೇಯತೆಯ ಗುಣದಲ್ಲಿ, ದಾನದ ಪರೀಕ್ಷೆ ಕ್ಷಾಮದ ಸಮಯದಲ್ಲಿ ತಿಳಿಯುವುದಂತೆ. ಎಷ್ಟುಸತ್ಯವಾದ ಮಾತಲ್ಲವೇ?
ಗೆಳೆಯನನ್ನು ನಂಬುವಾಗ ಆಲೋಚನೆ ಮಾಡಬೇಕು. ಒಬ್ಬ ಗೆಳೆಯ ‘ಅಳಿಯ ಮನೆ ತೊಳೆದ’ ಎಂಬ ಹಾಗೆ ಇರಬಹುದು ಇವನ ಹತ್ತಿರ ಇದ್ದದ್ದನ್ನು ಪೂರ್ತಿ ದೋಚಿ ಕೈ ಖಾಲಿ ಮಾಡಿಸಿ ಬೀದಿಗೆ ತಂದು ನಿಲ್ಲಿಸಿಯಾನು.ಮತ್ತೋರ್ವ ಎಲ್ಲದರಲ್ಲೂ ಹೆಗಲಿಗೆ ಹೆಗಲಾಗಬಹುದು, ಜೀವಕ್ಕೆ ಜೀವ, ಎದೆಗೆ ಎದೆ ಕೊಡಬಹುದು. ಈ ವಿಷಯದಲ್ಲಿ ಜಾಗ್ರತೆ ಬೇಕು. ಎಲ್ಲದರಲ್ಲೂ, ಎಲ್ಲವರಲ್ಲೂ ಒಳ್ಳೆಯದು-ಕೆಟ್ಟದ್ದು ಸಾಮಾನ್ಯ .ಪಾಪದ ಹಸು ಹುಲ್ಲು ಮೇದು ಹಾಲು ಕೊಡುತ್ತದೆ. ಹಾವು ಅದೇ ಹಾಲು ಕುಡಿದು ವಿಷ ಕಕ್ಕುವುದು ಲೋಕಾರೂಢಿ. ನಾವೇ ಆಲೋಚನೆ ಮಾಡಿ ಮುಂದಕ್ಕೆ ಹೆಜ್ಜೆ ಇಡಬೇಕು. ಸಹಕರಿಸುವವರು ಸಂದರ್ಭ ನೋಡಿ ಸಹಕರಿಸಬೇಕು. ಒಟ್ಟಾರೆ ದಾನ ಮಾಡಿದೆಯೆಂದು ಹೇಳಿಕೊಂಡು ತಿರುಗಬಾರದು. ನೀಡಿದ ದಾನದಿಂದ ನೋವು, ಕಷ್ಟ ಪರಿಹಾರವಾಗಿದೆಯೇ ನೋಡಬೇಕು. ಇತರರ ನೋವಿಗೆ ಕಿಂಚಿತ್ ಸ್ಪಂದಿಸುವ ಗುಣವನ್ನು ಮೈಗೂಡಿಸಿಕೊಳ್ಳೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ನಿತ್ಯನೀತಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ