ಬಾಳಿಗೊಂದು ಚಿಂತನೆ - 214

ಬಾಳಿಗೊಂದು ಚಿಂತನೆ - 214

ಒಂದು ಹೊತ್ತು ಊಟ ಮಾಡದಿದ್ದರೂ, ಉಪವಾಸ ಬಿದ್ದರೂ ತೊಂದರೆಯಿಲ್ಲ. ಮಾನವಂತರ ಸಂಗದಲಿ ಇರಬೇಕು. ಮಾನಹೀನರ ಜೊತೆ ಕ್ಷಣಹೊತ್ತು ಸಹ ಇರಬಾರದಂತೆ. ಒಂದು ವೇಳೆ  ಇದ್ದರೆ ಮನೆಯ ಮಜ್ಜಿಗೆಯನ್ನು ತಾಳೆ ಮರದಡಿ ಕುಳಿತು ಕುಡಿದಂತೆ ಆಗಬಹುದು. ನಮ್ಮ ತಲೆಯ ಮೇಲೆ ಕಲ್ಲು ಚಪ್ಪಡಿ ನಾವೇ ಹಾಕಿಕೊಂಡಂತಾಗಬಹುದು. ಮಾನ ಎನ್ನುವುದು ಶೀಲದ ಮತ್ತೊಂದು ಮುಖ. ಅದು ನಮ್ಮ ನೆತ್ತರಿನ ಪ್ರತಿ  ಹನಿಯಲ್ಲೂ ಹರಿಯುತ್ತಿರಬೇಕು. ನಮ್ಮ ಮನೆಯ ಪುಟ್ಟ ಕಂದಮ್ಮಗಳಿಗೆ ಸಣ್ಣವರಿರುವಾಗಲೇ ಇದರ ಮಹತ್ವವನ್ನು ಕಲಿಸುವುದು ಹೆತ್ತವರು, ಹಿರಿಯರಾದವರ ಕರ್ತವ್ಯ ಸಹ. ಸರ್ವಜ್ಞನ ವಚನವೊಂದರಲ್ಲಿ ಓದಿದ್ದು ಸಾಲುಗಳು ಎಷ್ಟೊಂದು ಅರ್ಥಪೂರ್ಣ?

*ಮಾನಹೀನರ ಸಂಗವೇನು ಕೊಟ್ಟರು ಬೇಡ*

*ಮಾನವುಳ್ಳವರ ಸಂಗ ತಾ ಸಕ್ಕರೆಯು*

*ಜೇನು ಸವಿದಂತೆ ಸರ್ವಜ್ಞ//*

ಸತ್ಯವಾದ ಮಾತುಗಳು. ನಮ್ಮ ಹಿರಿಯರು ನಡೆದು ಬಂದ ದಾರಿಯಲ್ಲಿ ನಾವು ಸಾಗಿದರೂ, ನಮ್ಮದೇ ಆದ ಜೀವನ ಮೌಲ್ಯಗಳಿರಲಿ. ಉತ್ತಮತೆ ಎಂಬುದು ನಮ್ಮ ಗಳಿಕೆ. ಹಣ ಕೊಟ್ಟರೂ ಸಿಗದು. ನಮ್ಮ ವ್ಯವಹಾರದಲ್ಲಿ, ನಡೆ-ನುಡಿಯಲ್ಲಿ, ಕೊಟ್ಟು-ತೆಗೆದುಕೊಳ್ಳುವುದರಲ್ಲಿ, ಮಾತಿನ ಓಘದಲ್ಲಿ, ಕೆಲಸ ಕಾರ್ಯಗಳಲ್ಲಿ ಮಾತ್ರ ಕಾಣಬಹುದಷ್ಟೆ. ಎಷ್ಟು ದೇಶಗಳ ಸುತ್ತಿದರೂ ಫಲವೇನಿಲ್ಲ, ಆತನ ಹತ್ತಿರ ತನ್ನತನವಿಲ್ಲದಿದ್ದರೆ. ಆಚಾರ-ವಿಚಾರಗಳು, ಕೈಬಾಯಿ ಶುದ್ಧವಿದ್ದರೆ ಯೋಚಿಸುವ ಪ್ರಶ್ನೆಯೇ ಬಾರದು.

*ಆಚಾರ: ಪರಮೋ ಧರ್ಮ: ಆಚಾರ: ಪರಮಂ ತಪ:/*

*ಆಚಾರ: ಪರಮಂ ಜ್ಞಾನಮಾಚಾರಾತ್ಕಿಂ ನ ಶಕ್ಯತೇ//*

ಆಚಾರವೇ ಪರಮ ಧರ್ಮ, ಅದೊಂದು ತಪಸ್ಸು, ಜ್ಞಾನವಿದ್ದಂತೆ. ಆಚಾರಕ್ಕೆ ಅಶಕ್ಯವಾದುದು ಯಾವುದೂ ಇಲ್ಲ. ಆಚಾರ-ವಿಚಾರವಿದ್ದವರು ನೂರ್ಕಾಲ ಮನದಲ್ಲಿ ಉಳಿಯುತ್ತಾರೆ, ಉಳಿದರೂ ಅಳಿದರೂ ಶಾಶ್ವತರು. ಮಾನವಂತರಾಗಿ ಬಾಳಿ ನಮ್ಮೊಂದಿಗೆ, ನಮ್ಮ ಪರಿಸರ, ನಮ್ಮ ಮನೆ ಮನಗಳನ್ನು ಬೆಳಗೋಣ.

-ರತ್ನಾ ಕೆ.ಭಟ್, ತಲಂಜೇರಿ

(ವಚನ: ಸರ್ವಜ್ಞನ ತ್ರಿಪದಿಗಳು, ಶ್ಲೋಕ: ಮನುಸ್ಮೃತಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ