ಬಾಳಿಗೊಂದು ಚಿಂತನೆ - 215
ನಮ್ಮ ಬದುಕಿನ ಹಾದಿಯುದ್ದಕ್ಕೂ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಜೀವನದುದ್ದಕ್ಕೂ ಸಂತೋಷವೇ ಸಿಗಬೇಕೆಂದರೆ ಹೇಗೆ? ನೇರವಾಗಿ ಪಡೆಯಲಾದೀತೇ? ಶ್ರಮಪಟ್ಟು, ಶೃದ್ಧೆಯಿಟ್ಟು ಕೆಲಸ ಕಾರ್ಯಗಳನ್ನು ಮಾಡಿದರೆ ಸಂತೋಷ ತಾನಾಗಿಯೇ ಬರುತ್ತದೆ. ಕೆಲಸವೇ ಮಾಡದಿದ್ದರೆ ಸಂತಸವೂ ಇಲ್ಲ, ಸಂಪಾದನೆಯೂ ಇಲ್ಲ. ಗಳಿಕೆಯಿಲ್ಲದ ಮೇಲೆ ಉಣ್ಣುವುದು ಏನನ್ನು ? ಉಳಿಕೆ, ದಾನಧರ್ಮಗಳ ಗೊಡವೆಯೂ ಇಲ್ಲ.
ಹಾಗಾದರೆ ನಮ್ಮ ಆಯ್ಕೆ ಯಾವುದಾಗಿರಬೇಕು? ನಮ್ಮನ್ನು ನೋಡಿಕೊಳ್ಳುವುದರ ಜೊತೆಗೆ ನಮ್ಮನ್ನೇ ನಂಬಿದವರನ್ನು ಸಾಕುವಂತಿರಬೇಕು ನಮ್ಮ ಆಲೋಚನೆಗಳು, ಕೈಗೊಳ್ಳುವ ಕಾರ್ಯಗಳು ಅಲ್ಲವೇ?
ಆಯ್ಕೆಗೆ ಈ ಸಮಾಜದಲ್ಲಿ ಹಲವಾರು ದಾರಿಗಳಿವೆ. ಉತ್ತಮವಾದುದನ್ನು ಆರಿಸುವುದು ನಮ್ಮ ಕೈಯಲ್ಲಿದೆ. ನಮ್ಮ ಹೆತ್ತವರು ಏನೋ ಒಂದು ನಿರೀಕ್ಷೆಯಿಂದ ನಮಗೆ ಅವರ ಕೈಲಾದಷ್ಟು ವಿದ್ಯಾಭ್ಯಾಸ ಕೊಡಿಸುವರು, ಬದುಕಿನ ಹಾದಿಗೆ ತೆರೆದುಕೊಳ್ಳಲು, ತನ್ನನ್ನು ತಾನೇ ತೊಡಗಿಸಿಕೊಳ್ಳಲು ಪ್ರೇರೇಪಿಸುವರು. ನಾವು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರಲ್ಲಿ ನಮ್ಮ ಜಾಣತನ ಅಡಗಿದೆ. ಅಡ್ಡದಾರಿಗಳ ನಿರ್ಲಕ್ಷಿಸಿ ಸರಿಯಾದ ಮಾರ್ಗದಲ್ಲಿ ಹೆಜ್ಜೆ ಹಾಕೋಣ. ಯಾವುದೇ ಹೆಜ್ಜೆ ಊರುವಾಗಲೂ ಹಿರಿಯರು, ಹೆತ್ತವರು, ಸಮಾಜ, ಮೇಲೊಬ್ಬ ಭಗವಂತ ಇದ್ದಾನೆಂಬ ಒಳಪ್ರಜ್ಞೆ ನಮ್ಮಲ್ಲಿರಬೇಕು. ಆತ್ಮಸಾಕ್ಷಿ ದೃಢವಾಗಿರಬೇಕು. ‘ಇಂಥವರ ಮಕ್ಕಳೆಂದು ಹೆಮ್ಮೆಯಿಂದ ಹೇಳುವಂತಿರಬೇಕು.’
‘ಅಯ್ಯೋ, ಇಂಥವರ ಹೊಟ್ಟೆಯಲ್ಲಿ ಹೀಗಿರುವ ಮಕ್ಕಳು ಹುಟ್ಟಿದರೇ’ ಎಂದು ಆಡಿಕೊಳ್ಳುವಂತೆ ಆಗಬಾರದು, ನಮ್ಮ ನಡೆನುಡಿ, ವ್ಯವಹಾರ ಇರಬಾರದು. ಜೀವನದ ದಾರಿ ಕ್ರಮಿಸುತ್ತಿರುವಾಗ ಬರುವ ಎಡರು ತೊಡರುಗಳನ್ನು ಬುದ್ಧಿವಂತಿಕೆಯಿಂದ ದಾಟಬೇಕು. ಆಗಲೇ ನಿಜವಾದ ಗೆಲುವು ಸಿಗಲು ಸಾಧ್ಯ. ಮಾತ್ರ ಆರೋಗ್ಯಕರವಾಗಿರಬೇಕು. ಎಲ್ಲವನ್ನು ಸಮಚಿತ್ತದಿಂದ ನೋಡುವುದು ಕ್ಷೇಮ.
*ಸುಖ-ದು:ಖೇ ಸಮೇ ಕೃತಾ ಲಾಭಾಲಾಭೌ ಜಯಾಜಯೌ*/
*ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪ-ಮವಾಪ್ಸ್ಯಪಿ//*
ಸುಖ-ದು:ಖ, ಲಾಭ-ನಷ್ಟ, ಜಯ-ಅಪಜಯ ಇವುಗಳನ್ನೆಲ್ಲ ಸಮಭಾವದಿಂದ ನೋಡಿ ಸ್ವೀಕರಿಸಬೇಕು. ಏನೇ ಆಗಲಿ, ಏನೇ ಹೋಗಲಿ ಕರ್ತವ್ಯವನ್ನು ಮಾಡುವುದು ಧರ್ಮ, ಮಾಡಬೇಕು ಸಹ. ಪಾಪಗಳ ಭಯಬೇಡ, ತಟ್ಟುವುದಿಲ್ಲ. ಕಾಲಾಯತಸ್ಮೈನಮ:, ಎಲ್ಲವನ್ನೂ ಕಾಲಕ್ಕೆ ಬಿಟ್ಟುಬಿಡಬೇಕು.ನ ಮ್ಮ ಆಯ್ಕೆ ನಮ್ಮ ಕೈಯಲ್ಲಿ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ಸಂಗ್ರಹ)
ಚಿತ್ರ ಕೃಪೆ : ಇಂಟರ್ನೆಟ್ ತಾಣ