ಬಾಳಿಗೊಂದು ಚಿಂತನೆ - 217
‘ಇರುವುದೆಲ್ಲವ ಬಿಟ್ಟು’ ಇಲ್ಲದ್ದಕ್ಕೆ ಆಸೆ ಪಟ್ಟರೆ, ಬೇಕೆಂದು ಬಯಸಿದರೆ ಏನಾಗಬಹುದು ಯೋಚಿಸಿ. ‘ಎಟುಕದ ದ್ರಾಕ್ಷಿಯನ್ನು ಠಕ್ಕ ನರಿ ಹುಳಿ’ ಎಂದ ಹಾಗಾಯಿತು. ಬಯಕೆ ಸಹಜ. ಆದರೆ ಅದಕ್ಕೊಂದು ಲಕ್ಷ್ಮಣ ರೇಖೆಯನ್ನು ನಾವೇ ಎಳೆಯಬೇಕು. ಇಲ್ಲದಿದ್ದರೆ ಇರುವುದೂ ಕರಗಬಹುದು. ಇತರರ ಹತ್ತಿರ ಇರುವುದೆಲ್ಲವೂ ತನ್ನ ಹತ್ತಿರ ಇರಬೇಕೆಂದು ಬಯಸುವುದು ತಪ್ಪು. ನಮ್ಮ ನಮ್ಮ ಯೋಗ್ಯತೆ , ಯೋಗ ಇದ್ದಂತಾಗುವುದೆಂಬ ಅರಿವಿರಬೇಕು. ಎಲ್ಲರಿಗೂ ಬಾಯಿಯಲ್ಲಿ ಚಿನ್ನದ ಚಮಚ ಇಟ್ಟುಕೊಂಡೇ ಜನಿಸಲು ಸಾಧ್ಯವೇ? ಉತ್ತಮ ವಿದ್ಯೆ ಕಲಿಯಬಹುದು. ಅದು ಅವರವರ ಸಾಮರ್ಥ್ಯ. ಅದೊಂದು ಕದಿಯಲಾರದ ಸೊತ್ತು . ಮೂರ್ಖರಂತೆ ವರ್ತಿಸಿ ಕಡೆಗೆ ನೆಲಕಚ್ಚುವುದು ಹಿತವಲ್ಲ.
*ನಿರ್ಧನಶ್ಚಾಪಿ ಕಾಮಾರ್ಥೀ ದುರ್ಬಲ: ಕಲಹಪ್ರಿಯ:/*
*ಮಂದಶಾಸ್ತ್ರೋ ವಿವಾದಾರ್ಥೀ ತ್ರಿವಿಧಂ ಮೂರ್ಖಲಕ್ಷಣಮ್//*
ಕೈಯಲ್ಲಿ ಬಿಡಿಗಾಸಿಗೂ ಗತಿಯಿಲ್ಲದವರು ಸುಖಭೋಗಗಳನ್ನು , ಐಷಾರಾಮಿ ಬದುಕನ್ನು ಬಯಸಬಾರದು. ತಾನು ದುರ್ಬಲನೆಂದು ಗೊತ್ತಿದ್ದರೂ ಎದುರಾಳಿಯ ಹತ್ತಿರ ಕಾಳಗಕ್ಕೆ ಮುಂದಾಗುವುದು ಸಲ್ಲದು. ಯಾವ ವಿದ್ಯೆ ಶಾಸ್ತ್ರಗಳು ಕಲಿಯದಿದ್ದರೂ , ತಿಳುವಳಿಕೆ ಜ್ಞಾನವಿಲ್ಲದಿದ್ದರೂ, ತಿಳುವಳಿಕೆ ಜ್ಞಾನವಿಲ್ಲದಿದ್ದರೂ ವಾದಕ್ಕೆ ನಿಲ್ಲಬಾರದು .ಹೀಗೆ ಮಾಡುವುದು ಮೂರ್ಖರ ಲಕ್ಷಣಗಳು.
ಸಾಧ್ಯವಿರುವುದನ್ನು ಮಾತ್ರ ಬಯಸಬೇಕು. ಹಾಸಿಗೆಯಿದ್ದಷ್ಟೇ ಕಾಲು ಚಾಚಬೇಕು ಅಲ್ಲವೇ? ಇಲ್ಲದಿದ್ದರೆ ಪಾದಗಳನ್ನು ನೆಲದಲ್ಲಿಡಬೇಕಾಗಬಹುದು ಅಥವಾ ಮುದುಡಿಯೇ ಮಲಗಬೇಕಾಗಬಹುದು. ಇನ್ನೂ ಬೇಕೆಂಬಾಸೆಯಿಂದ ಮನುಷ್ಯ ಸ್ವಾರ್ಥಿಯಾಗಿ ಮಾಡಬಾರದ ಕೆಲಸಗಳಿಗೆ ಕೈಹಾಕಿ ಕೆಟ್ಟವನಾಗುತ್ತಾನೆ. ಸಮಾಜದಲ್ಲಿ ಎಲ್ಲರೂ ಬೆರಳು ತೋರಿಸಿ, ಕೆಟ್ಟವರಾಗಿ ಬದುಕುವುದು ಬೇಡ.ಯಾವುದು ಬೇಕಾದರೂ ಧರ್ಮದ ಹಾದಿಯಿಂದ ಮಾತ್ರ ಗಳಿಸುವುದು ನಮಗೂ, ಮನೆಗೂ, ಊರಿಗೂ, ನಮ್ಮನ್ನೇ ನಂಬಿ ಬಂದವರಿಗೂ ಕ್ಷೇಮ. ಪಾಪಕ್ಕೆ ಮೂಲವಾದ ಲೋಭ ನಮಗೆ ಬೇಡ. ರುಚಿಯನ್ನೇ ಬಯಸಿದರೆ ಒಂದು ಹಂತದವರೆಗೆ ತೊಂದರೆಯಾಗದು, ಅನಾರೋಗ್ಯವಿರುವಾಗ ರುಚಿಯ ಬೆನ್ನು ಹತ್ತಿದರೆ ಭಗವಂತ ಸಹ ಕಾಪಾಡಲಾರನು. ‘ಕೆಟ್ಟ ಯೋಚನೆಗಳು ಕಾಲಿಗೆ ಚುಚ್ಚಿದ ಮುಳ್ಳಿನಂತೆ’ ಅದನ್ನು ದೂರಕ್ಕೆಸೆಯುವುದೇ ದಾರಿ. ನಮ್ಮಲ್ಲಿ ಎಷ್ಟಿದೆಯೋ ಅಷ್ಟರಲ್ಲಿ ತೃಪ್ತಿ ಪಡೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ಸಂಗ್ರಹ)