ಬಾಳಿಗೊಂದು ಚಿಂತನೆ - 218
ಜ್ಞಾನಿಯಾದವನು ಇತರರ ಜ್ಞಾನವನ್ನು, ತಿಳುವಳಿಕೆಯನ್ನು, ಒಳ್ಳೆಯ ಗುಣಗಳನ್ನು ನೋಡಿ ಮೆಚ್ಚಿಕೊಳ್ಳುವನು. ಆದರೆ ಅಲ್ಪ ಜ್ಞಾನಿಗಳು, ಅರೆತಿಳುವಳಿಕೆಯುಳ್ಳವರು ಇದನ್ನು ಕೆಲವರು ಸಹಿಸಲಾರರು. ಅರ್ಧಂಬರ್ಧ ಕಲಿತ ಹೆಚ್ಚಿನವರಿಗೆ ತಾವೇ ಗೊತ್ತಿದ್ದವರೆಂಬ ಮನೋಭಾವ ಸಹಜ. ಇತರರ ಮಾತುಗಳು, ಹೇಳಿಕೆಗಳು ಅವರಿಗೆ ಒಗರು ಗುಳಿಗೆಗಳಂತೆ. ನಾವು ಎಷ್ಟೇ ಓದಿದರೂ, ತಿಳಿದವರಾದರೂ ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದರೆ, ಒಪ್ಪಿ ತಿದ್ದಿ ನಡೆಯುವ ಗುಣವಿರಬೇಕು. ಅದು ಶ್ರೇಯಸ್ಸು ಸಹ. ಬಾಗುವವರೆದುರು ಬಾಗೋಣ, ಅದರಲ್ಲಿ ಹಿಂಜರಿಕೆ ಯಾಕೆ? ಗುಣವಂತ ಬಾಗಲೆಂದೂ ಹಿಂಜರಿಯಬಾರದು. ಅನಾವಶ್ಯಕವಾಗಿ ಕಾಲೆಳೆದು ಬಾಗಿಸಲು ನೋಡಿದರೆ ಬಾಗಲೂ ಬಾರದು. ನ್ಯಾಯ ಸಮ್ಮತವಿದೆಯೇ ಒಪ್ಪಿ ಅಪ್ಪಿಕೊಂಡು ಅನುಸರಿಸುವುದರಲ್ಲಿ ಸುಖವಿದೆ, ಕ್ಷೇಮವಿದೆ. ಯಾರಲ್ಲಿ ಒಳ್ಳೆಯತನವಿದೆಯೋ ಅದನ್ನು ಸ್ವೀಕರಿಸೋಣ. ಕೆಟ್ಟವರ ಹಿಂದೆ ಹೋಗುವ ಒಂದು ವರ್ಗವಿದೆ. ಅವರ ಸಹವಾಸದಿಂದ ದೂರವಿರುವುದೇ ಜಾಣತನ. ಕೆಟ್ಟದ್ದಕ್ಕೆ ಮಣೆ ಹಾಕಬಾರದು. ಅವರು ಒಂದು ದಿನ ನೆಲಕಚ್ಚಿದಾಗ ಕಾಪಾಡಲು ಯಾರೂ ಬರಲಾರರು. ಬೇರೆಯವರ ಏಳಿಗೆಯಲ್ಲಿ ನಾವು ಸಾಧ್ಯವಾದರೆ ಪಾಲುದಾರರಾಗೋಣ, ಸಂತೋಷಪಡೋಣ, ಇಲ್ಲವಾದರೆ ದೂರದಿಂದಲೇ ನೋಡಿ ಸಮಾಧಾನಪಡೋಣ. ಮತ್ಸರಪಡುವುದು, ಹೊಟ್ಟೆಕಿಚ್ಚು ಪಡುವುದು ತರವಲ್ಲ. ‘ನವಿಲು ಕುಣಿಯುವುದೆಂದು ಕೆಂಬೂತ ನರ್ತಿಸಲು ಹೊರಟರೆ ಹೇಗಾಗಬಹುದು?’ ನೋಡಿ ಸಂತಸಪಡಬೇಕಷ್ಟೆ. ಅದರ ಹುಟ್ಟುಗುಣವದು. ಜಾಣ ಬೇರೆಯವರ ಜಾಣತನವನ್ನು ಗುರುತಿಸುವ, ಪ್ರೋತ್ಸಾಹಿಸುವ ಮನೋಭಾವದವನಾಗಿದ್ದಷ್ಟೂ ಸಮಾಜದಲ್ಲಿ ಸುಕ್ಷೇಮ.
*ಉಂಡಾತನುಣುತಿರುವರನು ಕಾಣ್ಬ ನಲವಿಂದ/*
*ಪಂಡಿತನು ವಿದ್ಯಾರ್ಥಿಗಳಿಗೊರೆವ ನಯದಿಂ//*
*ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ/*
*ಕಂಡೆಲ್ಲರೊಳು ತನ್ನ-ಮಂಕುತಿಮ್ಮ//*
ಹೊಟ್ಟೆ ತುಂಬಾ ಊಟ ಮಾಡಿದವನು ಊಟ ಮಾಡುವವರನ್ನು ನೋಡಿ ಸಂತೋಷಪಡುತ್ತಾನೆ. ಪಂಡಿತರು, ತಿಳುವಳಿಕೆ ಉಳ್ಳವರು, ಗುರುಸ್ಥಾನದಲ್ಲಿದ್ದವರು ತಮ್ಮ ಮಕ್ಕಳಿಗೆ ಬಹಳ ನಯನಾಜೂಕಿಂದ ತಿಳಿಸಿಕೊಡುವರು. ಅದೇ ರೀತಿ ಜ್ಞಾನಿ ಎನಿಸಿಕೊಂಡವರು ಈ ಜಗತ್ತಿನ ಎಲ್ಲರಲ್ಲೂ ತಮ್ಮನ್ನೇ ಕಾಣುತ್ತಾ ಸಂತೋಷಿಸುವರು, ಇತರರನ್ನು ಸಂತೈಸುವ ಗುಣ ಹೊಂದಿರುವರು. ನಾವುಗಳು ಪರಿಪೂರ್ಣರಾಗಲು ಸಾಧ್ಯವಿಲ್ಲ ಎಂದಾದರೆ ಸ್ವಲ್ಪವಾದರೂ ಪ್ರಯತ್ನಿಸೋಣ.
-ರತ್ನಾ ಕೆ.ಭಟ್ ತಲಂಜೇರಿ
(ಕಗ್ಗ: ಮಂಕುತಿಮ್ಮನ ಕಗ್ಗದಿಂದ)
ಚಿತ್ರ ಕೃಪೆ: ಇಂಟರ್ನೆಟ್ ತಾಣ