ಬಾಳಿಗೊಂದು ಚಿಂತನೆ - 219
ಭಗವದ್ಗೀತೆಯಲ್ಲಿ ಅರ್ಜುನನ ಅನೇಕ ಸಂಶಯಗಳಿಗೆ ಭಗವಂತ ಸಮಾಧಾನದಿಂದ ಉತ್ತರಿಸುವುದನ್ನು ನಾವು ಓದುತ್ತೇವೆ. ವಿಶ್ವಮಾನ್ಯ, ಲೋಕವಿಖ್ಯಾತ, ಸಾರ್ವಕಾಲಿಕ ಸತ್ಯ ಭಗವದ್ಗೀತೆಯ ಸಾರ. ಒಂದೆಡೆ ಕೋಪದ ಬಗ್ಗೆ ಬರೆದ ಸಾಲುಗಳಿವು.
*ಕಾಮ ಏಷ ಕ್ರೋಧ ಏಷ ರಜೋಗುಣ ಸಮುದ್ಭವ:/*
*ಮಹಾಶನೋ ಮಹಾಪಾಪ್ಮಾ ವಿದ್ಯೇನಮಿಹವೈರಿಣಮ್//*
ಈ ಕೋಪವೆಂಬುದು ರಜೋಗುಣದ ಫಲಸ್ವರೂಪದಿಂದ ಹುಟ್ಟುವುದು. ಕಾಮ, ಕ್ರೋಧ, ಮದ, ಮತ್ಸರ, ಕೋಪ, ಸಿಟ್ಟು ಎಲ್ಲವೂ ನಮ್ಮ ವೈರಿಗಳಂತೆ. ಇವು ಶರೀರದಲ್ಲಿ ಸೇರಿಕೊಂಡಾಗ ದಯೆ, ಕರುಣೆಗೆ ಜಾಗವಿಲ್ಲ. ನಮ್ಮ ಒಳ್ಳೆಯತನವನ್ನು ನುಂಗಿಹಾಕುವುದು. ನಮ್ಮೊಳಗಿರುವ ಈ ವೈರಿಗಳಿಂದ ನಮಗೆ ಮಾನಹಾನಿಯಾಗಬಹುದು. ಎದುರು ಸಿಕ್ಕಿದವನ ಉಸಿರನ್ನೇ ನಿಲ್ಲಿಸಬಹುದು. ಕೋಪದಿಂದ ಹೊಡೆದಾಡಿ ಆಗುವ ಅನಾಹುತಗಳನ್ನು ಮಾಧ್ಯಮಗಳಲ್ಲಿ ದಿನನಿತ್ಯ ನೋಡ್ತೇವೆ, ಓದುತ್ತೇವೆ. ಇದರಿಂದಾಗಿ ಜೀವಮಾನವಿಡೀ ಜೈಲುಕಂಬಿಯೊಳಗೆ ಇರಬೇಕಾದ ಪರಿಸ್ಥಿತಿ ಸಹ ಇದೆ. ಒಂದು ಕ್ಷಣ ಸಿಟ್ಟು ನೆತ್ತಿಗೇರಿದಾಗ ಮೌನವೆಂಬ ಅಸ್ತ್ರದಿಂದ ಅದನ್ನು ಕಟ್ಟಿ ಹಾಕೋಣ. ಕೋಪವನ್ನು ಹಿಡಿತಕ್ಕೆ ತೆಗೆದುಕೊಂಡು ವ್ಯವಹರಿಸೋಣ. ಪಡಬಾರದ ಆಸೆಗಳು ಮೂಡಲು ಆರಂಭವಾಗುವುದು. ಇದರಿಂದ ಮಾಡಬಾರದ ಕೆಲಸಕ್ಕೆ ಪ್ರಚೋದನೆಯಾಗಿ ಮುಂದಡಿಯಿಟ್ಟರೆ ನಮ್ಮ ನಾಶ ಖಂಡಿತಾ. ಕಾಮಕ್ರೋಧಗಳ ಹತ್ತಿಕ್ಕೋಣ. ಕಾಮ ಮತ್ತು ಕ್ರೋಧ ನಮ್ಮ ಪ್ರಬಲ ಶತ್ರುಗಳು.ನಾವು ಜೀವಿತದ ಹಾದಿಯಲ್ಲಿ ಅವೆರಡನ್ನೂ ಗೆದ್ದರೆ,ಬದುಕನ್ನು ಗೆದ್ದಂತೆಯೇ ಸರಿ.ಈ ಅಲೆಯುವ ಮನಸ್ಸನ್ನು ಮೊದಲು ಕಟ್ಟಿ ಹಾಕಬೇಕು. ಅದೇ ಇಷ್ಟೆಲ್ಲ ಅನಾಹುತಗಳ ಸೃಷ್ಟಿಗೆ ಕಾರಣ. ಹಾಗಾದರೆ ಅದಕ್ಕೆ ದಾರಿ ಏಕಾಗ್ರತೆ. ಯಾವುದೇ ಕೆಲಸಕಾರ್ಯಗಳಲ್ಲಿ ಶ್ರದ್ಧೆ, ಏಕಾಗ್ರತೆ, ತಲ್ಲೀನತೆಯಿದ್ದಾಗ ಮನಸ್ಸಿನ ಚಂಚಲತೆಗೆ ಅವಕಾಶವಿಲ್ಲ. ಮನಸ್ಸಿನ ಶಿಸ್ತು ಇದ್ದಲ್ಲಿ ಎಲ್ಲವನ್ನೂ ಪಾಲಿಸಬಹುದು. ಕೋಪದ ಕೈಗೆ ಬುದ್ಧಿಯನ್ನು ಕೊಡದೆ, ಮನಸ್ಸಿನ ವಿಕಾರಗಳಿಗೆ ಬೆಲೆ ನೀಡದೆ ಯಾವುದು ಅಗತ್ಯವೋ ಅದಕ್ಕೆ ತಲೆ ಖರ್ಚು ಮಾಡಿ ನಮ್ಮತನವನ್ನು ಬೆಳೆಸೋಣ, ಬೆಳಗೋಣ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಉಪದೇಶಾಮೃತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ