ಬಾಳಿಗೊಂದು ಚಿಂತನೆ - 220
‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ದಾಸರ ಪದ ಹಾಡಿದವರು, ಕೇಳಿದವರು ನಾವುಗಳು. ಭಗವಂತನನ್ನು ಸಹ ಮಾಯೆ ಎಂಬುದು ಬಿಟ್ಟಿಲ್ಲ. 'ಮಾಯೆ' ಗೆ ಸಿಲುಕದವರಾರೂ ಇಲ್ಲ. ಬಿಟ್ಟರೂ ಬಿಡದೀ ಮಾಯೆ. ಮಾಯೆ ಅಗೋಚರ. ಆದರೆ ಸೇರಿ ಆಟ ಆಡಿಸ್ತದೆ.ದೇವರನ್ನೇ ಕಿರು ಬೆರಳಿನಲ್ಲಿ ಕುಣಿಸುವ ಇದು ಮನುಜರನ್ನು ಬಿಟ್ಟಿತೇ?
*ಉತ್ಪತ್ತಿಂಚ ವಿನಾಶಂಚ* *ಭೂತಾನಮಾಗತಿಂ ಗತಿಮ್/*
*ವೇತ್ತಿವಿದ್ಯಾಮವಿದ್ಯಾಂಚ ಸವಾಚ್ಯೋ ಭಗವಾನಿತಿ//*
ಯಾರು ಉತ್ಪತ್ತಿ ಮತ್ತು ವಿನಾಶ ಮಾಡುವರೋ ಹೋಗುವ ಮತ್ತು ಬರುವ ಸಾಮರ್ಥ್ಯವಿದೆಯೋ, ವಿದ್ಯೆ ಮತ್ತು ಅವಿದ್ಯೆ ಇದರ ಜ್ಞಾನವನ್ನು ಸಂಪೂರ್ಣವಾಗಿ ತಿಳಿದವರೋ ಅವರನ್ನೇ ; ಭಗವಂತ, ದೇವರು, ಕಣ್ಣಿಗೆ ಗೋಚರವಾಗದ ಮನಸ್ಸಿಗೆ ಮಾತ್ರ ಕಾಣುವ ಬಲವಾದ ಶಕ್ತಿ' ಎಂಬ ನಂಬಿಕೆ.
'ಭಗವಾನ್' ಎಂದರೆ ಈಶ್ವರ ದೇವರನ್ನು ಇಲ್ಲಿ ಸೂಚಿಸಲಾಗುತ್ತದೆ. ಮಾಯೆಯನ್ನು ತನ್ನ ಶಕ್ತಿಯನ್ನಾಗಿಸಿ ಯಾರು ಇರುವನೋ ಅವನೇ ದೇವನಾದ, ಸಕಲವನ್ನೂ ಬಲ್ಲವನಾದ, ಲಯಾಧಿಕಾರಿಯಾದ ಈಶ್ವರ. ಆತ ಏನು ಬೇಕಾದರೂ ಮಾಡಬಲ್ಲ. ಅವರವರ ಕರ್ಮಾನುಸಾರ ಅನುಭವಿಸಲೇ ಬೇಕು. ಬೆನ್ನ ಹಿಂದೆ ಬಂದದ್ದನ್ನು ಬೇಡವೆಂದು ದೂರಕ್ಕೆ ತಳ್ಳಲಾಗದು. ಮಾಯೆಯ ಮೋಡಿಯೇ ಹಾಗಿದೆ. ನಮ್ಮಲ್ಲಿ ಅಜ್ಞಾನ ಹೇಗೆ ಉಂಟಾಗುವುದೋ, ಹಾಗೆ ಈಶ್ವರನಲ್ಲಿಯೂ ಅಜ್ಞಾನವನ್ನು ಮಾಯೆ ಎನ್ನುವುದು ಮೂಡಿಸುತ್ತದೆ. ಮಾಯೆಯ ಪ್ರಭಾವಕ್ಕೆ ಒಳಗಾದ ನಾವುಗಳು ಮಾತ್ರ ಅಜ್ಞಾನಕ್ಕೆ ಒಳಪಡ್ತೇವೆ ಎಂದು ಗ್ರಹಿಸುವುದು ತಪ್ಪು. ದೇವರನ್ನು ಸಹ ಮಾಯೆ ಬಿಡುವುದಿಲ್ಲ ಎಂಬುದನ್ನು ಪುರಾಣ ಪ್ರಸಂಗಗಳಲ್ಲಿ, ಕಥೆಗಳಲ್ಲಿ ನಾವು ಓದಿದವರಿದ್ದೇವೆ. ಭಗವಂತನಿಗೂ ಕಷ್ಟ ಬರುವುದೇ ಎಂದು ಒಮ್ಮೊಮ್ಮೆ ಅನಿಸುವುದಿದೆ. ಅದೆಲ್ಲಾ ಮಾಯಾಜಾಲ, ವಿಧಿಲಿಖಿತ. ಅನುಭವಿಸಲೇಬೇಕು. ಮತ್ತೆ ನಮ್ಮನ್ನು ಬಿಡಲು ಸಾಧ್ಯವೇ? ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ ಸಾಗೋಣ.ಎಲ್ಲಾ ಆತನ ಪ್ರೇರಣೆಯೆನ್ನೋಣ.
-ರತ್ನಾ ಕೆ ಭಟ್ ತಲಂಜೇರಿ
(ಶ್ಲೋಕ : ಉಪದೇಶ ಸುಧಾ)
ಚಿತ್ರ ಕೃಪೆ: ಇಂಟರ್ನೆಟ್ ತಾಣ