ಬಾಳಿಗೊಂದು ಚಿಂತನೆ - 221
ನಮ್ಮ ಬದುಕಿನ ಹಾದಿಯಲ್ಲಿ 'ಶೋಧನೆ' ಎಂಬುದು ಮುಖ್ಯವಾದ್ದು, ಅಮೂಲ್ಯವಾದ್ದು. ಯಾವುದೇ ವಸ್ತು, ವಿಷಯವನ್ನು ತುಲನೆಮಾಡಿ, ಶೋಧಿಸಿಯೇ ನಾವೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಲ್ಲಿ ಬದುಕನ್ನು ಗೆದ್ದಂತೆಯೇ ಸರಿ. ಎಲ್ಲರೂ ಹೇಳಿದ್ದನ್ನು ಈ ಕಾಲಘಟ್ಟದಲ್ಲಿ ಕೇಳಿ ಅಳವಡಿಸಲು ಹೊರಟರೆ ಬಾಳು ಮೂರಾಬಟ್ಟೆ ಆಗಬಹುದು. ಎರಡೂ ಕಿವಿಗಳಿಂದ ಆಲಿಸೋಣ, ಶೋಧಿಸೋಣ, ಸರಿಯಾದ್ದನ್ನು ಆಯ್ಕೆ ಮಾಡೋಣ, ಉಳಿದದ್ದನ್ನು ತಲೆಯಿಂದ ಹೊರಗೆ ಹಾಕೋಣ. ಯಾವುದೋ ಒಂದು ವಿಚಾರ ಹೇಳಿದ ತಕ್ಷಣ ಅವರು ಹೇಳಿದ್ದೇ ವೇದವಾಕ್ಯವಲ್ಲ, ನಮ್ಮ ಆಲೋಚನೆಯ ಪರಿಧಿಯೊಳಗೆ ಯೋಚಿಸಿ ನಿರ್ಧರಿಸೋಣ.
ವಿವೇಚನೆಯಿಲ್ಲದ ನಿರ್ಧಾರಗಳಿಂದ ಬಹಳಷ್ಟು ಅನಾಹುತಗಳು ಸಂಭವಿಸುವುದನ್ನು ಸುತ್ತಮುತ್ತ ನೋಡುತ್ತಿದ್ದೇವೆ. ನಮ್ಮ ಪರಿಚಯದ ಹುಡುಗನೊಬ್ಬ ದೂರದ ಗಲ್ಫ್ ಲ್ಲಿದ್ದು ಬಂದವ ಪುನ:ಹೋಗಿಲ್ಲ. ಒಂದಷ್ಟು ದಿನ ಹೋಗುವುದು ಕಾಣದಿದ್ದಾಗ ಬಾಯಿಗೆ ಬಂದ ಹಾಗೆ ಮಾತನಾಡುವುದು ಸುರುವಾಯಿತು. ಅವನ ಕಷ್ಟ ಅವನಿಗೇ ಗೊತ್ತು. ವಯಸ್ಸಾದ ಹೆತ್ತವರು, ಅನಾರೋಗ್ಯದ ಸಹೋದರಿ ಹೇಗೆ ಹೋಗುವುದೆಂದು ಏನೋ ಸಣ್ಣ ಕೆಲಸ ಮಾಡಿಕೊಂಡಿದ್ದ. ಕಡೆಗೆ ಅವನಿಗೆ ಯಾವುದೋ ರೋಗವಂತೆ, ಅಲ್ಲಿಂದ ತಂದದ್ದಂತೆ ಎಂದು ಹಬ್ಬಿಸಿ, ಊರೆಲ್ಲಾ ಸುದ್ಧಿಯಾಯಿತು. ಅದಕ್ಕೆ ಸರಿಯಾಗಿ ಅವನಿಗೂ ಅನಾರೋಗ್ಯವಾಗಿ ಆಸ್ಪತ್ರೆಗೆ ಆಗಾಗ ಹೋಗತೊಡಗಿದ. ಆದರೆ ಜನರ ಮಾತು ಒಂದೆಡೆ, ಕಾಡುತ್ತಿರುವ ರೋಗ ಒಂದೆಡೆ ಅವನ ಬದುಕನ್ನೇ ನಾಶಮಾಡಿ, ಹೆತ್ತವರು ಅನಾಥರಾಗುವಂತೆ ಮಾಡಿತು. ಈ ಮನುಷ್ಯರ ಬಾಯಿ ಏನು ಬೇಕಾದರೂ ಮಾಡಬಹುದು ಅಲ್ಲವೇ? ನಿಜವಾಗಿ ಆ ಹುಡುಗನಿಗೆ ಮೂತ್ರಪಿಂಡಗಳ ದುರ್ಬಲತೆ ಆದದ್ದು .ಜನರ ಸೃಷ್ಟಿಯೇ ಬೇರೆ. ನಮ್ಮ ವಿವೇಚನೆ, ಒಳಗಣ್ಣ ತೆರೆದು ನೋಡುವುದು ಮುಖ್ಯವಾಗಬೇಕು.
*ದೃಷ್ಟಿಪೂತಂ ನ್ಯಸೇತ್ ಪಾದಂ ವಸ್ತ್ರಪೂತಂ ಪಿಬೇಜ್ಜಲಮ್/*
*ಶಾಸ್ತ್ರಪೂತಂ ವದೇದ್ವಾಕ್ಯಂ ಮನ:ಪೂತಂ ಸಮಾಚರೇತ್//*
ಯಾವುದೇ ದಾರಿಯನ್ನು ಕ್ರಮಿಸುವಾಗ ಕಣ್ಣಿನಿಂದ ನೋಡಿ ಕಾಲುಗಳನ್ನು ಊರಬೇಕು, ಒಟ್ಟಾರೆ ಹೆಜ್ಜೆಯಿಟ್ಟರೆ ಅಪಾಯವಾದೀತು. ನೀರನ್ನು ಶೋಧಿಸಿ ಕುಡಿಯಬೇಕು, ಇಲ್ಲದಿದ್ದರೆ ಕಸ ಕ್ರಿಮಿ ಕೀಟ ದೇಹದೊಳಗೆ ಸೇರಿ ಏನು ಬೇಕಾದರೂ ಆಗಬಹುದು. ಶಾಸ್ತ್ರ ಏನು ಹೇಳ್ತದೋ ಅದನ್ನು ಪರಿಷ್ಕರಿಸಿ ಮಾತುಗಳಿರಬೇಕು, ಒಟ್ಟಾರೆಯಾದ ಮಾತು ಮನೆಹಾಳು, ಕುಲನಾಶ, ಮನಸ್ಸೂ ಹಾಳು. ಮಾತು ಮುತ್ತಿನಂತಿರಲಿ. ವಿವೇಚನೆಯ ಮಾತು ಸುಂದರವಾದ ಆಭರಣವಿದ್ದಂತೆ. ಶೋಭೆಯಿಂದ ಕೂಡಿದ, ಸತ್ವ ಮತ್ತು ಸತ್ಯಯುತವಾದ ಮಾತೆಷ್ಟು ಚಂದ? ಮನಸ್ಸಿಗೊಪ್ಪುವ ನಡವಳಿಕೆ ಆರೋಗ್ಯ. ನಾಲ್ಕು ಜನ ಒಪ್ಪುವ ನಡೆನುಡಿ ಕ್ಷೇಮವಲ್ಲವೇ? ಜೀವದ ರಕ್ಷಣೆ ಮತ್ತು ಆರೋಗ್ಯ, ನೆಮ್ಮದಿ ಜೀವನದ ದಾರಿಯಲ್ಲಿ ಶೋಧನೆ, ವಿವೇಚನೆ, ಸ್ವಂತಿಕೆಯಿಂದ ಕೂಡಿ ಹಸನಾಗಿರಲಿ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಮನುಸ್ಮೃತಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ