ಬಾಳಿಗೊಂದು ಚಿಂತನೆ - 222

ಬಾಳಿಗೊಂದು ಚಿಂತನೆ - 222

ಹಿತೋಪದೇಶ ಸಂಗ್ರಹದಲ್ಲಿ ಒಂದೆಡೆ ಓದಿದ ನೆನಪು.

*ಶರೀರಸ್ಯ ಗುಣಾನಾಂ ಚ ದೂರಮತ್ಯಂತಮಂತರಂ/*

*ಶರೀರಂ ಕ್ಷಣವಿಧ್ವಂಸಿ ಕಲ್ಪಾಂತಸ್ಥಾಯಿನೋ ಗುಣಾ://*

ಈ ಶರೀರವು ಇವತ್ತಿರಬಹುದು ನಾಳೆ ಹೋಗಬಹುದು. ಬಂದು ಹೋಗುವ ನಡುವಿನಲ್ಲಿ ನಾವೇನು ಮಾಡಿದ್ದೇವೆ ಎಂಬುದೇ ಶಾಶ್ವತ. ದೇಹ ಯಾವತ್ತೂ ಶಾಶ್ವತವಲ್ಲ. ಆದರೆ ನಾವೆಸಗಿದ ಕೆಲಸಕಾರ್ಯಗಳು, ನಮ್ಮ ಗುಣನಡತೆಗಳು, ನಮ್ಮ ವ್ಯವಹಾರಗಳು ಶಾಶ್ವತ .ಆ ಅರಿವು ನಮ್ಮಲ್ಲಬೇಕು. 'ನಾವೇ, ನಾನೇ' ಎಂದು ಮೆರೆದಾಡುವುದು ನಮಗೆ ನಾವೇ ಮಾಡಿಕೊಂಡ ಹಿನ್ನೆಡೆ, ಕಪ್ಪುಚುಕ್ಕಿಗಳಾಗಿ ನಿಲ್ಲಬಹುದು. ನಾಶವಿರುವುದರ ಬಗ್ಗೆ ಚಿಂತಿಸದೆ, ನಾಶವಿಲ್ಲದ ವಿಷಯಗಳ ಬಗ್ಗೆ ಚಿಂತಿಸೋಣ, ಆಲೋಚಿಸೋಣ, ಹೆಜ್ಜೆ ಹಾಕೋಣ. ಐಶ್ವರ್ಯವಂತನಿಗೆ ಮಣೆ ಹಾಕಿಯಾರು ಶ್ರೀಮಂತಿಕೆ ನೋಡಿ, ಆದರೆ ಸದ್ಗುಣವಂತನಿಗೆ ಎಲ್ಲಿ ಹೋದರೂ ರಾಜಮರ್ಯಾದೆಯಿದೆ. ಜನಮನ್ನಣೆಗೆ ಪಾತ್ರನಾಗುತ್ತಾನೆ. ಸದ್ಗುಣಗಳ ಕಣಜ ಯಾರಲ್ಲಿದೆಯೋ ಆತ ಸಮಾಜದಲ್ಲಿ ಪರಿಮಳ ಬೀರುವ ಪುಷ್ಪದಂತೆ. ಮುಚ್ಚಿಡಲಾಗದು. ಕಸ್ತೂರಿಯ ಸುವಾಸನೆಯನ್ನು ಬಚ್ಚಿಡಲು ಸಾಧ್ಯವೇ? ಅದು ಎಲ್ಲಿದ್ದರೂ ಎಲ್ಲರಿಗೂ ತಿಳಿಯುವುದು. ಹೊಳೆಯುವ ಮಣಿಗಳನ್ನು ಅಲಂಕಾರಕ್ಕೆ ಬಳಸಿದಾಗ, ದೇಹದ ತಲೆ, ತೋಳು, ಕೊರಳು ಎಲ್ಲಿ ಕಟ್ಟಿದರೂ ಶೋಭೆ. ಅಂತೆಯೇ ಗುಣವಂತನಿಗೆ ಮನ್ನಣೆ. ಗುಣವಂತನ ಸ್ನೇಹದಿಂದ ಸ್ವಲ್ಪವಾದರೂ ಆ ಗಾಳಿ ನಮಗೂ ಬೀಸಬಹುದು. ಕೆಟ್ಟವರ ಜೊತೆ ಸೇರಿ ಆ ಹಾದಿಯಲ್ಲಿ ನಡೆದು ಊರಿಗೆ ಮನೆಗೆ ಮಾರಿಯಾಗುವ ಬದಲು ಒಳ್ಳೆಯವರ ಹಿಂದೆ ಸಾಗಿ ಉತ್ತಮರಾಗಲು ಪ್ರಯತ್ನಿಸಬಹುದು. ಪ್ರಯತ್ನ ಮುಖ್ಯ.

*ಒಳ್ಳಿದರೊಡನಾಡಿ ಕಳ್ಳ ಒಳ್ಳಿದನಕ್ಕು*

*ಒಳ್ಳಿದ ಕಳ್ಳರೊಡನಾಡಿ ಅವ ಶುದ್ಧ ಕಳ್ಳ ತಾನಕ್ಕು ಸರ್ವಜ್ಞ//* ಎಷ್ಟು ಸತ್ಯವಲ್ಲವೇ?

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ : ಹಿತೋಪದೇಶ, ವಚನ: ಸರ್ವಜ್ಞನ ವಚನಗಳ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ