ಬಾಳಿಗೊಂದು ಚಿಂತನೆ - 223
ಇತರರಿಂದ ನಾನು ಹಾಳಾದೆ. ಮೊನ್ನೆ ಮೊನ್ನೆಯವರೆಗೂ ನಮ್ಮ ಮಗ ಚೆನ್ನಾಗಿದ್ದ. ಈಗ ಸರಿಯಿಲ್ಲ, ಅವಳು ಹೀಗೆ ಮಾಡಲು ಅವಳ ಸ್ವಬುದ್ಧಿ ಅಲ್ಲ, ಬೇರೆಯವರು ಕೆಡಿಸಿದ್ದು -ಇಂಥ ಮಾತುಗಳನ್ನು ಎಷ್ಟೋ ಆಲಿಸಿದವರು ನಾವೆಲ್ಲ. ತನ್ನದೇ ಸ್ವವಿವೇಚನೆ, ತಿಳುವಳಿಕೆ, ಬುದ್ಧಿ ಉಪಯೋಗಿಸಿದ್ದರೆ ಯಾವುದೇ ಮಾತುಗಳಿಗೆ ಅವಕಾಶವಿಲ್ಲ.
ತನ್ನ ಪ್ರಯತ್ನ ಬೇಕಲ್ಲವೇ? ಬೇರೆಯವರತ್ತ ಬೆರಳು ತೋರಿಸುವುದು ಸಮಂಜಸವಲ್ಲ. ಒಬ್ಬರಿಗೊಬ್ಬರು ಬೆರಳು ತೋರಿಸಿ ಮಾತನಾಡುವುದರಿಂದ ಅನಾಹುತ, ಅನರ್ಥ, ವಿನಾಕಾರಣ ದ್ವೇಷ ಆಗುವುದೇ ಹೊರತು ಬೇರೇನಿಲ್ಲ. ಕಾರಣವನ್ನು ನಮ್ಮಲ್ಲೇ ತರ್ಕಿಸಿ ಕಂಡುಕೊಂಡರೆ ಒಳ್ಳೆಯದಲ್ಲವೇ?
*ವೃಥಾ ವೈರಂ ವಿವಾದಂ ಚ ನ ಕುರ್ಯಾತ್ ಕೇನಚಿತ್ಸಹ/*
*ಅರ್ಥಭಾವೇಪಿ ತತ್ ಪುಂಸಾ ಅನರ್ಥಾ ಏವ ಕಲ್ಪತೇ//*
ವೃಥಾ ವಾದ ಮಾಡುವುದರಿಂದ ವೈರತ್ವ ಹೆಚ್ಚುವುದಲ್ಲದೆ ಪ್ರಯೋಜನವಿಲ್ಲ. ಮನಸ್ಸೂ ಹಾಳಾಗುವುದು. ಆರೋಗ್ಯದಲ್ಲಿ ಏರುಪೇರಾಗಬಹುದು. ಲಾಭವಾದರೂ ಇದೆಯೇ? ಅದೂ ಇಲ್ಲ. ಅದರಿಂದಾಗುವ ಅನರ್ಥ ತಪ್ಪಿಸಲು ಸಾಧ್ಯವಿಲ್ಲ. ಕೋಪ-ದ್ವೇಷಗಳು ಭುಗಿಲೇಳಬಹುದು. ತಾಳ್ಮೆಯೇ ಮದ್ದು ಇದಕ್ಕೆ. ಕಾಲವೇ ಎಲ್ಲದಕ್ಕೂ ಉತ್ತರಿಸಬಹುದು. ಅದಕ್ಕಾಗಿ ಕಾಯಬೇಕು. ನಮ್ಮ ಮಕ್ಕಳ ಮೇಲೆ ನಮ್ಮ ದೃಷ್ಟಿಯಿರಬೇಕು. ನಾವೇನು ಮಾಡುತ್ತೇವೆ ಬೇರೆಯವರ ಮಕ್ಕಳ ಮೇಲೆ ಗಮನಹರಿಸುತ್ತೇವೆ, ಅದೇ ನಾವೆಸಗುವ ತಪ್ಪು. ಒಂದು ಕಣ್ಣು ನಮ್ಮ ಮಕ್ಕಳ ಮೇಲೂ ಹರಿಸಿದರೆ ಮೂಲದಲ್ಲೇ ಎಲ್ಲವನ್ನೂ ತಿಳಿಯಬಹುದಲ್ಲವೇ? ಮೊದಲು ನಮ್ಮ ಮನೆ ಮನಸ್ಸು ಸ್ವಚ್ಛ ಮಾಡೋಣ, ಅನಂತರ ಇತರರ ಮನೆಯತ್ತ ದೃಷ್ಟಿ ಹರಿಸೋಣ. ವೃಥಾ ಆರೋಪ ಬಂತೆಂದು ಹ್ಯೊಕೈ ಮಾಡಿದರೆ ವೈಮನಸ್ಸು ಉಂಟಾಗಬಹುದು. ಎಲ್ಲವನ್ನೂ ಸಮಾಧಾನದಲ್ಲಿ ಕೇಳಿ, ಸತ್ಯಾಸತ್ಯತೆಗಳನ್ನು ವಿವೇಚಿಸಿ, ಯೋಚಿಸಿ, ತೀರ್ಮಾನಕ್ಕೆ ಬರುವುದೇ ಇದಕ್ಕಿರುವ ದಾರಿ.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ:ಸುಭಾಷಿತ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ