ಬಾಳಿಗೊಂದು ಚಿಂತನೆ - 224
‘ಪ್ರಕೃತಿ’ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವೇನು ಕೊಟ್ಟಿದ್ದೇವೆಂದರೆ ಸ್ವಲ್ಪ ತಡವರಿಸಿದ ಉತ್ತರ ಬರಬಹುದೇನೋ. ದೇವನಿತ್ತ ಕಾಲಂಶ ಸಹ ನಾವು ನೀಡಿಲ್ಲ. ಉಪಕಾರ ಮಾಡಿದವನಿಗೆ ಅಪಕಾರ, ಅಪಚಾರವೆಸಗದೆ ಇದ್ದರೆ ಅದೇ ನಾವು ಸಲ್ಲಿಸುವ ಕೃತಜ್ಞತೆ.
*ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ?/*
*ಸ್ವಕೃತಿಯೆಂದವನೆನುವುದವಳಿರದೊಡಿರದು*//
*ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ/*
*ವಿಕೃತಿಗೆಡೆಯಾಗದಿರೊ--ಮಂಕುತಿಮ್ಮ//*
ನಾವೆಂದೂ ಪ್ರಕೃತಿಯ ತ್ಯಜಿಸಿ ಬಾಳಲುಂಟೇ? ಸಾಧ್ಯವಿಲ್ಲದ ಮಾತು. ಪ್ರಕೃತಿಯ ಜೊತೆ ಮಾನವನ ಬದುಕು ಹಾಸುಹೊಕ್ಕಾಗಿದೆ. ಪ್ರಕೃತಿಯ ಅವಿಭಾಜ್ಯ ಅಂಗ ಆತ. ತಾನೇ ಮಾಡಿದ್ದೆಂದು ಹೇಳುವ ಹಾಗಿಲ್ಲ. ದೈವೀದತ್ತವಾದ್ದು, ಅನಂತರ ಒಂದಷ್ಟು ಸೇರಿಸಬಹುದಷ್ಟೆ. ಯಾವುದನ್ನೂ ವಿಕೃತಿ ಮಾಡದೆ, ಅದಕ್ಕೆ ಆಸ್ಪದ ಕೊಡದ ಕಾರ್ಯಗಳನ್ನು ಮಾಡಬೇಕು. ಆದರೆ ನಾವೇನು ಮಾಡುತ್ತೇವೆ. ಸಿಕ್ಕಾಪಟ್ಟೆ ಬೃಹತ್ ಮರಗಳ ನಾಶ, ಹಸಿರು ಹುಲ್ಲು ತೋಟ, ವನರಾಶಿಗಳ ನೆಲಸಮ ಮಾಡಿ, ಮಹಡಿ ಮೇಲೆ ಮಹಡಿ ಏರಿಸ್ತೇವೆ. ಉಸಿರಾಟಕ್ಕೆ ಕುತ್ತು ತರುವವರು ನಾವೇ. ಇದೆಲ್ಲ ದುರಾಸೆಯೋ, ಸ್ವಾರ್ಥವೋ, ಇನ್ನಾವುದೋ, ಒಟ್ಟಿನಲ್ಲಿ ವನರಾಶಿಯ ನಾಶ. ಇತ್ತೀಚೆಗೆ ಇದರ ಫಲ ಉಂಡರೂ ನಮಗೆ ಬುದ್ಧಿ ಬರುತ್ತಿಲ್ಲ. ಹಾಗಾದರೆ ನಾವು ಉಪಕಾರಿಗಳಾಗುವುದು ಬಿಟ್ಟು ವಕ್ರಹಾದಿಯಲ್ಲಿ ಕ್ರಮಿಸಿದಂತಾಯಿತಲ್ಲವೇ? ಒಂದು ಗಿಡ ನಾಶ ಮಾಡಿದಲ್ಲಿ ಎರಡು ಗಿಡ ನೆಟ್ಟರಾದೀತು. ಕಟ್ಟಡಗಳ ಭರಾಟೆಯಲ್ಲಿ ಹಸಿರು ಬೆಳೆಸಲು ಜಾಗವಾದರೂ ಎಲ್ಲಿದೆ? ಮೂಕಪ್ರಾಣಿಗಳು ಮಾಡುವ ಕೆಲಸವನ್ನು ಸಹ ಮಾಡದವರು ಮನುಜರು. ನಮ್ಮ ನಮ್ಮ ಮನೆಯೋ, ಕಛೇರಿಯೋ ಸ್ಥಳಾವಕಾಶವಿದ್ದಲ್ಲಿ ಒಂದಷ್ಟು ಹಸಿರು ವಾತಾವರಣ ನಿರ್ಮಿಸಿ ಪ್ರಕೃತಿಗೆ ಕೊಡುಗೆ ಸಲ್ಲಿಸಿ, ಉಪಕಾರ ಸ್ಮರಣೆ ಮಾಡೋಣ. ಶಾಲಾಮಕ್ಕಳಲ್ಲಿ ಪರಿಸರ, ಹಸಿರು, ಶುದ್ಧಗಾಳಿ, ಗಿಡಮರಗಳ ಅಗತ್ಯ ಮತ್ತು ಮಹತ್ವ, ಅಲಂಕಾರ, ಕಣ್ಣಿಗೆ ಹಬ್ಬ , ತಂಪು ಎಂಬಿತ್ಯಾದಿ ಪರಿಸರ ಪ್ರೀತಿ ಮೂಡಿಸುವಂಥ ಕಾರ್ಯಕ್ರಮ ಹಮ್ಮಿಕೊಂಡು ತಿಳುವಳಿಕೆಯ ಕೆಲಸಗಳಾಗಬೇಕು. ಆ ನಿಟ್ಟಿನಲ್ಲಿ ಶಾಲೆ, ಸಂಘಸಂಸ್ಥೆ, ಸಮಾಜ, ಹೆತ್ತವರು ಎಲ್ಲರೂ ಕಾರ್ಯಪ್ರವೃತ್ತರಾಗಿ ನಮ್ಮಿಂದಾದ ಅಳಿಲಸೇವೆ ಮಾಡೋಣ.
-ರತ್ನಾ ಕೆ.ಭಟ್ ತಲಂಜೇರಿ
(ಕಗ್ಗ : ಮಂಕುತಿಮ್ಮನ ಕಗ್ಗ)
ಚಿತ್ರ ಕೃಪೆ: ಇಂಟರ್ನೆಟ್ ತಾಣ