ಬಾಳಿಗೊಂದು ಚಿಂತನೆ - 226

'ಪ್ರಾರ್ಥಿಸುವ ತುಟಿಗಳಿಗಿಂತಲೂ ನೆರವಾಗುವ ಕೈ ಶ್ರೇಷ್ಠವಂತೆ' ದೊಡ್ಡವರ ಮಾತೊಂದಿದೆ. ಎಷ್ಟು ಸತ್ಯ ಅಲ್ಲವೇ? ಇದರಲ್ಲಿ ಬದುಕಿನ ಸಂದೇಶವೂ ಅಡಗಿದೆ. ಕೈಲಾಗದವರಿಗೆ ಸಹಕರಿಸುವುದೇ ಭಗವಂತನ ಸೇವೆ. ಮತ್ತೆ ಪುನ:ಪ್ರಾರ್ಥನೆ ಯಾಕೆ? ನಮ್ಮ ಮನಸ್ಸಿನ ಸಂತೋಷಕ್ಕೆ ಅಥವಾ ಯಾಂತ್ರಿಕತೆಯೋ, ಅಭ್ಯಾಸಬಲವೋ, ಅಂಜಿಕೆಯೋ(ಎಲ್ಲರಿಗಲ್ಲ, ಕೆಲವರಿಗೆ) ದೇವರೆದುರು ಕಣ್ಣುಮುಚ್ಚಿ, ಕೈಮುಗಿದು ನಿಲ್ಲುತ್ತೇವೆ. ಈ ಲೋಕವೇ ಆ ಭಗವಂತನ ಮನೆ ಎಂದ ಮೇಲೆ ಪ್ರತ್ಯೇಕ ಬೇಡ. ಅದೇ ಸಮಯವನ್ನು ದೀನರ ಸೇವೆಗೆ ವಿನಿಯೋಗಿಸಬಹುದು.
ನಾವು ಫ್ಲಾರೆನ್ಸ ನೈಟಿಂಗೇಲ್, ಮದರ್ ತೆರೇಸಾ, ಮೇಡಂ ಮೇರಿ ಕ್ಯೂರಿಯವರ ಬಗ್ಗೆ ಓದಿದಾಗ ದೀನರ, ಬಡವರ, ಕಷ್ಟದಲ್ಲಿದ್ದವರ ಸೇವೆಗಾಗಿ ತಮ್ಮ ಜೀವನವನ್ನೇ ಸವೆಸಿದರು. ಯಾವ ದೇವರಿಗೂ ಕಡಿಮೆಯಿಲ್ಲ. ಸಾಲು ಮರದ ತಿಮ್ಮಕ್ಕ ಅದ್ಭುತ ಸಾಧನೆಗೈದ ಕಣ್ಣೆದುರೇ ಇರುವ ವೃಕ್ಷದೇವತೆ.
ಕಷ್ಟಕ್ಕೆ ಏನು ಕಾರಣ, ರೋಗ ಹೇಗೆ ಬಂತು ಎಂಬುದಾಗಿ, ಕಾಯಿಲೆಯ ಮೂಲ ಕಂಡುಹಿಡಿಯುವ ವಿಜ್ಞಾನಿಗಳಿಗೆ, ಸಾಧಕರಿಗೆ ಕೈ ಮುಗಿಯೋಣ.ಅವರ ಶ್ರಮ ಬೆಲೆಕಟ್ಟಲಾಗದ್ದು. ದಾನಧರ್ಮಗಳಲ್ಲೂ ದೇವತ್ವ ಅಡಗಿದೆ. ಆದರೆ ಸತ್ಪಾತ್ರರಿಗೆ ಮಾತ್ರ ದಾನ ನೀಡಬೇಕು. ಇಲ್ಲದಿದ್ದರೆ ಕಷ್ಟ. ನೀಡಿದ ದಾನಕ್ಕೆ ಬೆಲೆಯೂ ಇಲ್ಲ. ಮೃಷ್ಟಾನ್ನ ಉಂಡವನಿಗೆ ತಿಳಿಸಾರು ಬಡಿಸಿದಂತಾಗುವುದು.ಒಂದು ಹಿಡಿ ಅನ್ನದ ಮುಂದೆ ಎಲ್ಲವೂ ನಗಣ್ಯ.
*ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ?*
*ಅನ್ನವಿರುವನಕ ಪ್ರಾಣವು;ಜಗದೊಳ*
*ಗನ್ನವೇ ದೈವ! ಸರ್ವಜ್ಞ//*
ಅನ್ನವಿಲ್ಲದವನಿಗೆ ಯಾವ ಶಾಸ್ತ್ರ, ಜಪ, ತಪ, ಪೂಜೆ ಹಿಡಿಸಲಾರದು, ರುಚಿಸಲಾರದು ಹಾಗೆಂದು ಪುರಾಣಗಳಲ್ಲಿ ನೀರು ಕುಡಿಯದೆ ಸಹ ತಪವನ್ನು ಆಚರಿಸಿದ್ದಾರೆ, ಘೊಂಡಾರಣ್ಯದಲ್ಲಿ ಕುಳಿತು ಧ್ಯಾನಿಸಿದ್ದಾರೆಂದು ಓದಿದ್ದೇವೆ. ಈ ಕಲಿಯುಗದಲ್ಲಂತೂ ಇರಲಾರದು. ಕವಿ ದಿನಕರ ದೇಸಾಯಿಯವರ ಕವನದ ಸಾಲುಗಳಲ್ಲಿ ಓದಿದ ನೆನಪು 'ದೇವಗೆಂದು ಗುಡಿಯನೊಂದು ಕಟ್ಟುತಿರುವೆಯಾ? ದೀನಗಿಂತ ದೇವ ಬಡವನೆಂದು ಬಗೆವೆಯಾ?' ಎಂತಹ ಮಾರ್ಮಿಕವಾಗಿದೆಯಲ್ಲವೇ?
ಅಸಂಖ್ಯಾತ ಮಕ್ಕಳನ್ನು ಸೃಷ್ಟಿಸಿ ಅನಾಥರೆಂಬ ಹಣೆಪಟ್ಟಿ ಹಾಕಿದ ಈ ಕ್ರೂರ ಮಾನವತೆಯಿಲ್ಲದ ಮನುಜನಿಗೇನೆನ್ನಬೇಕು? ಅವರಿಗೊಂದು ನೆಲೆ-ಬೆಲೆ ಮಾಡಿದವಗೆ ಕೋಟಿ ಪುಣ್ಯ ಬರಬಹುದು, ಅದುವೇ ಭಗವಂತನ ಸೇವೆ, ಆರಾಧನೆ. ನಮ್ಮಿಂದ ಆದಷ್ಟು ಅಳಿಲ ಸೇವೆ ಕೈಚಾಚಿ ಮಾಡೋಣ, ಧನ್ಯರಾಗೋಣ.
-ರತ್ನಾ ಕೆ.ಭಟ್ ತಲಂಜೇರಿ
(ವಚನ: ಸರ್ವಜ್ಞನ ವಚನ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ