ಬಾಳಿಗೊಂದು ಚಿಂತನೆ - 227

ನಾವು ಮನುಷ್ಯರಲ್ಲಿ ಹಲವಾರು ಸ್ವಭಾವದವರನ್ನು ನೋಡಬಹುದು. ಹೇಗೆ ನಮ್ಮ ಒಂದೊಂದು ಬೆರಳು ಆಕಾರ, ಗಾತ್ರದಲ್ಲಿ ಭಿನ್ನವಾಗಿರುವುದೋ ಹಾಗೆ. ಹಾಗೆಂದು ಎಲ್ಲಾ ಬೆರಳುಗಳ ಸಹಾಯ ನಮಗೆ ಬೇಕು. ನಾವು ಸಹ ಪರಸ್ಪರ ಸಹಕರಿಸಬೇಕಾಗುತ್ತದೆ. ನಾನೊಬ್ಬನೇ ಜೀವಿಸಬಲ್ಲೆ, ಕೆಲಸವನ್ನು ಓರ್ವನೇ ಮಾಡಬಲ್ಲೆ ಎಂಬ ಹುಂಬತನ ಬೇಡ.
ಸಮಾಜ ಎಂದ ಮೇಲೆ ಅವರ ಮಧ್ಯೆಯೇ ನಮ್ಮ ಜೀವನ. ಒಬ್ಬರಿಗೊಬ್ಬರು ತೆಗಳುವುದು, ಹ್ಯೊಕೈ ಮಾಡುವುದರಿಂದ ಮನಸ್ಸು ಮತ್ತಷ್ಟೂ ಹಾಳು. ಕಷ್ಟಗಳನ್ನು ಮೈ ಮೇಲೆ ಎಳೆದು ಹಾಕಿಕೊಳ್ಳುವುದು ಸರಿಯಲ್ಲ. ನಮ್ಮ ಹತ್ತಿರ ಏನಾದರೂ ಉತ್ತಮವಾದ ಅಂಶಗಳಿದ್ದರೆ ಬೇರೆಯವರಿಗೆ ಅದು ಸೂರ್ಯ ರಶ್ಮಿಯಾದರೆ ಹುಟ್ಟಿದ್ದಕ್ಕೂ ಸಾರ್ಥಕವಾಗಬಹುದು. ಈ ಬುವಿಗೆ ಬಂದ ಮೇಲೆ ನಮ್ಮದೇ ಆದ ಕೆಲವು ಜವಾಬ್ದಾರಿಗಳು, ಕರ್ತವ್ಯಗಳು ನಮಗಿವೆ. ಉತ್ತಮರ ಅರಿತು ವ್ಯವಹರಿಸೋಣ. ಬೇರೆಯವರ ನೋಯಿಸುವ ಅಧಿಕಾರ ನಮಗೆ ಕೊಟ್ಟವರಾರು? ಹೃದಯಕ್ಕೆ ಮತ್ತಷ್ಟೂ ,ಇನ್ನಷ್ಟೂ ಚುಚ್ಚುವುದರಲ್ಲಿಯೇ ಕೆಲವು ಜನರಿಗೆ ಸಂತಸವು ಸಿಗುವುದು. ಎಷ್ಟೋ ಜನ ಹೀಗೆ ಹೇಳುವಾಗ ಹೇಳುವುದಿದೆ 'ಅವನನ್ನು ನೆಮ್ಮದಿಯಲ್ಲಿ ಕೂರಲು, ಉಸಿರಾಡಲು ಬಿಡೆ' ಎಂಬುದಾಗಿ. ಆ ವರ್ಗದವರಿಗೆ 'ವಿಘ್ನ ಸಂತೋಷಿಗಳು' ಎನ್ನುವರು. ನಾವು ಕಷ್ಟಪಡುವುದು ಯಾರಿಗಾಗಿ? ನಮ್ಮ ಮನೆಯ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದಕ್ಕಾಗಿ ಅಲ್ಲವೇ? ಹಾಗಾಗಿ ನೆಮ್ಮದಿ ಮುಖ್ಯ ನಮಗೆ. ಅದುವೇ ಇಲ್ಲದ ಬದುಕು ಬದುಕೇ ಹೇಳಿ? ಇರುವುದರಲ್ಲಿ ತೃಪ್ತಿ ಮುಖ್ಯ. ಬೇರೆಯವರ ಉಸಾಬರಿಯಲ್ಲಿಯೇ ಕಾಲಕಳೆಯುವುದು ಸರಿಯಲ್ಲ. ಸುಭಾಷಿತವೊಂದರ ಸಾರಾಂಶವನ್ನು ನೋಡೋಣ.
*ಪರನಿಂದಾಸು ಪಾಂಡಿತ್ಯಂ ಸ್ವೇಷು* *ಕಾರ್ಯೇಷ್ವನುದ್ಯಮಃ/*
*ಪ್ರದ್ವೇಷಶ್ಚ ಗುಣಜ್ಞೇಷು* *ಪಂಥಾನೋ ಹ್ಯಾಪದಾಂ ತ್ರಯಃ//*
ಯಾರು ಯಾವಾಗಲೂ ಬೇರೆಯವರ ನಿಂದನೆ ಮಾಡುವುದರಲ್ಲಿಯೇ ಪಾಂಡಿತ್ಯವನ್ನು ತೋರುಸುತ್ತಾರೋ, ತನ್ನ ಕರ್ತವ್ಯದಲ್ಲಿ ಅಸಡ್ಡೆ, ಸೋಮಾರಿತನ ವ್ಯಕ್ತಪಡಿಸುತ್ತಾರೋ, ಉತ್ತಮರ ಹೃದಯವಂತರ ಸದಾ ನೋಯಿಸುತ್ತಾರೋ, ದ್ವೇಷ ಮಾಡುತ್ತಾರೋ ಅವರು ಜೀವನದಲ್ಲಿ ಎಂದೂ ಮೇಲೆ ಬಾರದೆ ಕಷ್ಟ ಅನುಭವಿಸುತ್ತಾ ಇರುತ್ತಾರೆ .ಇದು ಸತ್ಯವಿರಬಹುದು. ನಮ್ಮ ಕಣ್ಣ ಮುಂದೆ ಬಹಳ ಜನ ಈ ವರ್ಗದವರಿದ್ದಾರೆ. ಅವರು ತಮ್ಮ ಜೀವನವನ್ನು ಸಹ ಸರಿಯಾದ ರೀತಿಯಲ್ಲಿ ನಿಭಾಯಿಸುವುದಿಲ್ಲ. ಆದರೂ ತಮ್ಮ ತಪ್ಪನ್ನು, ನಡತೆಯನ್ನು ತಿದ್ದಿಕೊಳ್ಳಲು ಒಪ್ಪುವುದಿಲ್ಲ. ತನ್ನದೇ ಸರಿಯೆಂಬ ವಾದ ಮಾಡುತ್ತಾರೆ. ಇತರರ ಬಗ್ಗೆ ಇಲ್ಲಸಲ್ಲದ ಪ್ರಚಾರ ಮಾಡುವುದರಲ್ಲಿಯೇ ಕಾಲಹರಣ ಮಾಡುವ ಸ್ವಭಾವವಿರುವ ಮನುಷ್ಯರಿಂದ ದೂರವೇ ಇರಬೇಕು. ಇಲ್ಲದಿದ್ದರೆ ತಾಳೆ ಮರದಡಿಯಲ್ಲಿ ಕುಳಿತು ಮಜ್ಜಿಗೆ ಕುಡಿದ ಕತೆಯಾಗಬಹುದು. ಕತ್ತಿಯ ಅಲಗಿನ ಮೇಲೆ ನಡೆದಾಡುವುದು ಎಷ್ಟು ಸರಿ? ನಮ್ಮನ್ನೇ ನಾವೇ ತರ್ಕಕ್ಕೆ ಒಡ್ಡಿಕೊಂಡು ಬದುಕೋಣ.
(ಶ್ಲೋಕ: ಸರಳ ಸುಭಾಷಿತ)
-ರತ್ನಾಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ