ಬಾಳಿಗೊಂದು ಚಿಂತನೆ - 229

ಪುಟ್ಟ ಮಕ್ಕಳು ಹಸಿವೆಯಾದಾಗ ಅಮ್ಮನನ್ನೋ, ಅಜ್ಜಿಯನ್ನೋ ಏನಾದರು ತಿನ್ನಲು ಕೊಡೆಂದು ಪೀಡಿಸುವುದು, ಕೇಳುವುದು ಸಹಜ. ನಮ್ಮ ನಿಮ್ಮ ಮನೆಗಳಲ್ಲಿ ನಡೆಯುವ ವಿಷಯವೇ ಇದು. ಆಗ ಏನೂ ಇಲ್ಲದಿದ್ದರೆ ಸ್ವಲ್ಪ ಅವಲಕ್ಕಿಗೆ ಬೆಲ್ಲ, ಸಕ್ಕರೆ, ಮೊಸರು ಮಿಶ್ರ ಮಾಡಿ ತಿನ್ನಲು ಕೊಡ್ತೇವೆ. ಆ ಮಕ್ಕಳು ಅದನ್ನು ಸಂಭ್ರಮಿಸಿಕೊಂಡು ತಿನ್ನುವ ಆನಂದವನ್ನು ವರ್ಣಿಸಲಾಗದು. ಮನೆಯ ಹಿರಿಯರು ಸಹ ಖುಷಿ ಪಡುವರು. ಆದರೆ ಅದನ್ನು ತಾವು ತಿನ್ನಬೇಕೆಂಬ ಆಸಕ್ತಿ ಅವರಿಗಿಲ್ಲ. ಅದು ಅವರ ಜಾಣತನ, ಜಾಣ್ಮೆಯನ್ನು ತೋರಿಸಿಕೊಡುತ್ತದೆ. ಜ್ಞಾನಿಯಾದವನು ಯಾವತ್ತೂ ಹೀಗೆಯೇ. ಅನ್ಯರ ಸುಖವೇ ತನ್ನ ಸುಖವೆನ್ನುವವ.
*ಉಂಡಾತನುಣುತಿರುವರನು ಕಾಣ್ಬ ನಲವಿಂದ/*
*ಪಂಡಿತನು ವಿದ್ಯಾರ್ಥಿಗಳಿಗೊರೆವ ನಯದಿಂ//*
*ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ/*
*ಕಂಡೆಲ್ಲರೊಳು ತನ್ನ--ಮಂಕುತಿಮ್ಮ//*
ನಾವು ಹಸಿದವನಿಗೆ ಬಡಿಸಿದಾಗ ಸಂತೋಷದಿಂದ ಆತ ಉಣ್ಣುವನು. ಊಟ ಮಾಡಿದವನು, ಊಟ ಮಾಡುತ್ತಿರುವನನ್ನು ನೋಡಿ ಸಂತಸ ಪಡುವಂತೆ, ಪಂಡಿತನು ವಿದ್ಯಾರ್ಥಿಗಳಿಗೆ ನಾಜೂಕಾಗಿ ಕಲಿಸಿಕೊಡುವಂತೆ, ಜ್ಞಾನಿಯಾದವನು, ಈ ಪ್ರಪಂಚವನ್ನು ನೋಡಿ, ಎಲ್ಲರಲ್ಲೂ ತನ್ನನ್ನೇ ಕಾಣುತ್ತಾ, ಸಮಾಧಾನ ಪಡಿಸುತ್ತಿರುತ್ತಾನೆ, ತೃಪ್ತಿಯ ಮನೋಭಾವ ಹೊಂದಿರುತ್ತಾನೆ. ಅನ್ಯರ ಸುಖ ಸಂತೋಷ, ನೋವು ತನ್ನದೇ ಎಂದು ತಿಳಿಯುವ, ಸ್ವೀಕರಿಸುವ ಮನೋಭಾವ ವಿಶಾಲಹೃದಯ ಹೊಂದಿದ ಒಳ್ಳೆಯವನಲ್ಲಿ ಮಾತ್ರ ಕಾಣಬಹುದು.
-ರತ್ನಾ ಕೆ.ಭಟ್ ತಲಂಜೇರಿ
(ಆಕರ ಪುಸ್ತಕ: ಮಂಕುತಿಮ್ಮನ ಕಗ್ಗ)
ಚಿತ್ರ ಕೃಪೆ: ಇಂಟರ್ನೆಟ್ ತಾಣ