ಬಾಳಿಗೊಂದು ಚಿಂತನೆ - 230
ನಮ್ಮೆಲ್ಲರ ಬದುಕಲ್ಲೂ ಆಸೆಗಳಿರುತ್ತದೆ, ಜೊತೆಗೆ ಒಂದಷ್ಟು ಅವಶ್ಯಕತೆ ಸಹ ಇರುತ್ತದೆ. ಈ ಅವಶ್ಯಕತೆಗಳೇ ಆಸೆಗಳಾದರೆ ಬದುಕು ತುಂಬಾ ಸುಂದರ. ಆದರೆ ಆಸೆ ಎಲ್ಲಿಯಾದರೂ ಅವಶ್ಯಕತೆ ಆಯಿತಾ ನಮ್ಮ ಬಾಳು ಗಾಳಿಗೆ ಸಿಲುಕಿದ ತರಗೆಲೆಯಂತೆ. ಎಲ್ಲೆಂದರಲ್ಲಿ ಹಾರಾಡಿ, ಹೋರಾಟವಾಗಬಹುದು. ಬಾಳು ದುಸ್ತರವಾಗಬಹುದು. ಪತ್ರಿಕೆಯಲ್ಲಿ ಓದಿದ ಒಂದು ವಿಚಾರ - ೮೫ ಲಕ್ಷದ ಮನೆ ಕಟ್ಟಿ ಬಂಧುಗಳು, ಸ್ನೇಹಿತರನ್ನೆಲ್ಲ ಸೇರಿಸಿ ವಿಜೃಂಭಣೆಯಿಂದ ಮನೆ ಒಕ್ಕಲು ಮಾಡಿಸಿದ ಮಹಾನುಭಾವ, ಎಲ್ಲರೂ ಹೊಗಳುವಾಗ ಆಕಾಶವೇ ಸಿಕ್ಕಿದಷ್ಟು ಸಂತಸಪಟ್ಟ. ಒಂದೆರಡು ತಿಂಗಳು ಕಳೆದಾಗ ಕೊರೊನಾದಲ್ಲಿ ಕೆಲಸ ಹೋಯಿತು. ಕಂತು ಕಟ್ಟಲು ಹಣವಿಲ್ಲ. ಸಾಲ ಏರುತ್ತಾ ಹೋಯಿತು. ಊಟಕ್ಕೆ ಪರದಾಡುವ ಸ್ಥಿತಿ. ಸ್ನೇಹಿತರು, ಬಂಧುಗಳು ಕೈಬಿಟ್ಟರು. ಎಲ್ಲರ ಪರಿಸ್ಥಿತಿಯೂ ಬುಡ ಮೇಲಾಗುತ್ತಲ್ಲವೇ? ಪತ್ನಿಮಕ್ಕಳಿಗೆ ವಿಷವಿಕ್ಕಿ ತನ್ನೊಂದಿಗೆ ಉಸಿರು ನಿಲ್ಲಿಸಿದ. ಒಂದು ಸಣ್ಣ ಮನೆ ಕಟ್ಟುತ್ತಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಜೀವಕ್ಕೆ ಕುತ್ತು ತರುವಂಥ ಕೆಲಸಕ್ಕೆ ಯಾಕಾದರೂ ಈ ರೀತಿ ಮನಸ್ಸು ಮಾಡುತ್ತಾರೋ? ದೇವನಿತ್ತ ಜೀವವನ್ನು ಜೋಪಾನವಾಗಿ ನೋಡಿ ಕೊಳ್ಳುವುದು ಜವಾಬ್ದಾರಿ ನಮ್ಮೆಲ್ಲರದು. ಹೊರಲಾರದ ಆಸೆಗಳೇಕೆ? ಯಾವುದೇ ಕೆಲಸಕ್ಕೆ ಕೈಹಾಕುವ ಮೊದಲು ಮೂಲ ಎಷ್ಟಿದೆ ಎಂದು ವಿವೇಚಿಸಬೇಡವೇ? ತನ್ನಿಂದ ಎಷ್ಟು ಸಾಧ್ಯವಿದೆಯೋ ಅಷ್ಟೇ ಕಾಲುಚಾಚಿ ವ್ಯವಹಾರಮಾಡಬೇಕು. ಇಲ್ಲದ ಯೋಚನೆಗಳು ಬದುಕಿಗೆ ಮಾರಕ.
ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಆಚೀಚಿನ ಮನೆಯ ವ್ಯವಸ್ಥೆಗಳು, ಆಗುಹೋಗುಗಳು ನಮಗ್ಯಾಕೆ? ನಾವು ನಮ್ಮ ಜೀವನ. ಸಾಗುವ ಹಾದಿಯಲ್ಲಿ ಅಡಚಣೆಗಳು ಸಾಮಾನ್ಯ. ಈ ಜೀವನವೇ ಒಂದು ಯುದ್ಧವಿದ್ದಂತೆ. ಅಲ್ಲಿ ವೈವಿಧ್ಯ ಅಸ್ತ್ರ -ಶಸ್ತ್ರಗಳನ್ನು ಬಳಸುವ ನೈಪುಣ್ಯತೆ ನಮಗಿರಬೇಕು.
*ಬದುಕು ಕದನದ ತೆರನೆ;ನೋಡೆ ಲೀಲೆಯ ಕದನ/*
*ಮೊದಲುಮುಗಿವುಗಳಿರದ ಚಿತ್ರಲೀಲೆಯದು//*
*ಇದರೊಳೆಂದಿಗುಮಿರದು ಸೋಲ್ಗೆಲವು ಕಡೆಯೆಣಿಕೆ/*
*ಸದರದಾಟವೆ ಮುಖ್ಯ-ಮಂಕುತಿಮ್ಮ//*
ಈ ಜೀವನದ ಆಟದಲ್ಲಿ ಸೋಲು -ಗೆಲುವು ಸಾಮಾನ್ಯ. ಅದನ್ನು ನಗಣ್ಯವೆಂದು ಪರಿಗಣಿಸಿ, ಮುಂದೆ ಹೋಗಬೇಕು. ಕೊನೆ ಮೊದಲಿಲ್ಲದ ಈ ಆಟವು ಹಲವಾರು ಚಿತ್ರ ವಿಚಿತ್ರವಾದ್ದು. ಅದಕ್ಕೆಲ್ಲ ಹೆದರಬಾರದು. ನಮ್ಮ ಸಂಪಾದನೆ, ನಮ್ಮ ಜೀವನ ಸಾಗಿಸುತ್ತಾ ಸಾಗಬೇಕು. ಮಿತಿಮೀರಿದ ಆಸೆ ಬೇಡ. ಈ ಪ್ರಪಂಚದ ಬೆಳಕನ್ನು ಕಂಡಮೇಲೆ ಕಷ್ಟಗಳಿಗೆ ಹೆದರಿ ಓಡಿಹೋಗುವುದು, ಜೀವವನ್ನೇ ಇಲ್ಲವಾಗಿಸುವುದು ಸರಿಯಲ್ಲ. ಇಲ್ಲಿ ಎದೆಗಟ್ಟಿ ಮಾಡಿಕೊಳ್ಳುವುದೇ ಉಪಾಯ. ಆಸೆಗಳಿಗೆ ಕಡಿವಾಣ ಹಾಕಿ, ದೃಢಚಿತ್ತದಿಂದ ಬದುಕಿನ ಹಾದಿ ಗಟ್ಟಿಯಾಗಿ ಇರುವಂತೆ ಪ್ರಯತ್ನಿಸಬೇಕು, ನಿಲ್ಲಬೇಕು. ಕಣ್ಣಿಗೆ ಕಂಡದ್ದನ್ನೆಲ್ಲ ಬಯಸದಿರುವುದೇ ಜಾಣತನ. ಬಾಳಿನಲಿ ಒಪ್ಪ ಓರಣವಿರಲಿ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
*ಕಗ್ಗ ಆಧಾರ:ಮಂಕುತಿಮ್ಮನ ಕಗ್ಗ*