ಬಾಳಿಗೊಂದು ಚಿಂತನೆ - 231

ಬಾಳಿಗೊಂದು ಚಿಂತನೆ - 231

ಸಾಹಿತ್ಯದಡಿಯಲ್ಲಿ ಹಲವು ಪ್ರಕಾರಗಳನ್ನು ಕಾಣಬಹುದು. ಬರೆದವುಗಳನ್ನು ಎಲ್ಲರೂ ಓದಲೇಬೇಕೆಂಬ ನಿಯಮವೇನಿಲ್ಲ. ಅವರವರ ಇಷ್ಟ, ಓದುವುದು, ಮೆಚ್ಚುವುದು, ಸಂತಸಪಡುವುದು. ಒಬ್ಬೊಬ್ಬರ ಭಾವನೆಗಳೂ ಭಿನ್ನವಾಗಿರಬಹುದು. ಸಾಹಿತ್ಯಪ್ರಕಾರಗಳನ್ನು ಆದಷ್ಟೂ ಉತ್ತಮವಾಗಿ, ನೈಜತೆಗೆ ಹತ್ತಿರವಾಗಿ, ವಾಸ್ತವಿಕದ ಆಗುಹೋಗುಗಳನ್ನು ಬಿಂಬಿಸುತ್ತ ಬರೆದರೆ ಒಳ್ಳೆಯದು. ಎಲ್ಲವೂ, ಎಲ್ಲರ ಬರಹಗಳೂ ಕನಸುಗಳಾದರೆ ನನಸಾಗುವುದೆಂತು? ನನಸಾಗಿಸುವುದು ಓರ್ವ ಅತ್ಯುತ್ತಮ ಬರಹಗಾರನ, ಸಾಹಿತಿಯ, ಕವಿಯ ಬರವಣಿಗೆಯಲ್ಲಡಗಿದೆ.

*ತತ್ವಂ ಕಿಮಪಿ ಕಾವ್ಯಾನಾಂ ಜಾನಾತಿ ವಿರಲೋ ಭುವಿ/*

*ಮಾರ್ಮಿಕಃ ಕೋ ಮರಂದಾನಾಮಂತರೇಣ ಮಧುವ್ರತಮ್//*

ನಾವು ಕಾವ್ಯಗಳನ್ನು, ಸಾಹಿತ್ಯ ಪ್ರಕಾರಗಳನ್ನು ಲೆಕ್ಕವಿಲ್ಲದಷ್ಟು ಬರೆಯಬಹುದು. ಆದರೆ ಓದಿ ಅರ್ಥ ಮಾಡಿಕೊಳ್ಳುವವರು ತುಂಬಾ ಕಡಿಮೆ ಎಂದೇ ಹೇಳಬಹುದು ಅಥವಾ ಮಾಡಿಕೊಂಡರೂ ಅವರವರ ಭಾವದ, ಆಲೋಚನೆಯ ದೃಷ್ಟಿಕೋನದಲ್ಲಿ ಮಾತ್ರ. ಹೂವಿನಲ್ಲಿರುವ ಮಕರಂದದ ಮರ್ಮ, ಅದರ ಸಿಹಿ ದುಂಬಿಗೆ ಮಾತ್ರ ಗೊತ್ತಿರುವುದಷ್ಟೆ. ಬೇರೆ ಯಾರಿಗೂ ಅದನ್ನು ತಿಳಿಯಲು ಸಾಧ್ಯವಿಲ್ಲ. ಓರ್ವ ಉತ್ತಮ ಬರಹಗಾರನು ಇನ್ನೋರ್ವನ ಉತ್ತಮ ಸಾಹಿತ್ಯವನ್ನು ಓದಿ ಆಸ್ವಾದಿಸುವನು. ಉಳಿದವರು ಓದಿಯಾರು, ಆದರೆ ಮನನ ಕಡಿಮೆ. ಈ ಕಾರಣದಿಂದ ಉತ್ತಮ ಪ್ರಕಾರಗಳು ಸೊರಗುವುದನ್ನು ಕಾಣಬಹುದು. ಎಷ್ಟೇ ಒಳ್ಳೆಯ ರಚನೆಯಾದರೂ ಅದು ಓದುಗನ ಕೈಗೆ ಸಿಕ್ಕಿ ಚಿಂತನೆಗೆ ಒಡ್ಡಿದಾಗಲೇ ಬರೆದದ್ದಕ್ಕೆ ಸಾರ್ಥಕತೆ. ಕಲಿಯೋಣ-ಅರಿಯೋಣ-ಓದೋಣ-ಬರೆಯೋಣ-ಆಸ್ವಾದಿಸೋಣ-ಪ್ರೋತ್ಸಾಹಿಸೋಣ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ :ರಸಗಂಗಾಧರ) ಚಿತ್ರ ಕೃಪೆ: ಇಂಟರ್ನೆಟ್ ತಾಣ