ಬಾಳಿಗೊಂದು ಚಿಂತನೆ (232) - ಗಜಾನನ

ಬಾಳಿಗೊಂದು ಚಿಂತನೆ (232) - ಗಜಾನನ

*ವಕ್ರತುಂಡ ಮಹಾಕಾಯ*

 *ಸೂರ್ಯ ಕೋಟಿ ಸಮಪ್ರಭ/*

*ನಿರ್ವಿಘ್ನಂ ಕುರು ಮೇ ದೇವ*

*ಸರ್ವ ಕಾರ್ಯೇಷು ಸರ್ವದಾ*//

ಆದಿಪೂಜಿತ, ವಿಘ್ನ ನಿವಾರಕ, ಸಂಕಷ್ಟಹರ, ಫಲದಾಯಕ, ವಿಶ್ವಂಭರರೂಪಿ, ಏಕದಂತ, ಗಜಾನನ ಎಷ್ಟೊಂದು ನಾಮಗಳು ದೇವ ಗಣೇಶನಿಗೆ. ಅಗಜೆ(ಪಾರ್ವತಿ) ಪುತ್ರ, ಮಾತೆಯ ಮೈಕೊಳೆಯಿಂದ ಜೀವತಳೆದವ, ಶಿವನ ಕೋಪಕ್ಕೆ ತುತ್ತಾಗಿ ಕೊರಳು ಕತ್ತರಿಸಲ್ಪಟ್ಟರೂ, ಪರಶಿವನು ವಿಷಯ, ಸನ್ನಿವೇಷವನ್ನು ಅರ್ಥೈಸಿ ಪುನ: ಆನೆಯ ಶಿರವನ್ನು ಜೋಡಿಸಿ ಬದುಕಿಸಿ ಮುಂದೆ ಗಜಾನನ, ಆನೆಮೊಗದವ, ಗಜಮುಖ, ಕರಿಮುಖ ಎಂದು ಕರೆಯಲ್ಪಟ್ಟ ನಮ್ಮ ಗಣಪ.

ಮೊದಲ ಪೂಜೆ ಗಣೇಶನಿಗೆ ಮೀಸಲು. ಕೈಗೊಳ್ಳುವ ಕಾರ್ಯದಲ್ಲಿ ಯಾವುದೇ ವಿಘ್ನ ಬರಬಾರದೆಂದು ಕೇಳಿಕೊಳ್ಳುತ್ತಾರೆ.

ಬ್ರಹ್ಮಾಂಡವೇ ಶಿವಪಾರ್ವತಿಯರ ಸಾನಿಧ್ಯದಲ್ಲಿದೆ ಎಂದು ತೋರಿಸಿಕೊಟ್ಟ ಮಹಾತ್ಮ ಗಣೇಶ. ಕೈಲಾಸವಾಸಿಗಳಾಗಿರುವ ಎಲ್ಲಾ ಗಣಗಳಿಗೂ ಅಧಿಪತಿ ಗಣಪತಿ.

*ಗಜಾನನಂ ಭೂತಗಣಾದಿ ಸೇವಿತಂ*

 *ಕಪಿತ್ಥ ಜಂಬೂಫಲಸಾರಭಕ್ಷಿತಂ*ಉಮಾಸುತಂ ಶೋಕ ವಿನಾಶಕಾರಣಂ*

*ನಮಾಮಿ ವಿಘ್ನೇಶ್ವರ ಪಾದಪಂಕಜಂ//*

ಭೂತಗಣಗಳಿಂದ ಪೂಜಿಸಲ್ಪಡುವ, ಬೇಲದ ಹಣ್ಣು, ನೇರಳೆ ಹಣ್ಣುಗಳನ್ನು ಹೆಚ್ಚು ಇಷ್ಟ ಪಡುವ, ಪಾರ್ವತಿ ಸುತ ದು:ಖನಾಶಕನಾದ ವಿಘ್ನೇಶ್ವರ ಏಕದಂತ, ವಕ್ರತುಂಡ ಗಣೇಶ.

ನಮ್ಮ ಸ್ವಾಮಿ ದೇವ ಗಣೇಶ ಆಕಾಶಾಭಿಮಾನಿ. ಚಂದ್ರನಿಗೆ ಶಾಪವಿತ್ತವ. ಇದರ  ಬಗ್ಗೆ ನಾವು ಯೋಚಿಸಿದರೆ 'ತಮಾಷೆ ಆರೋಗ್ಯಕರವಾಗಿರಬೇಕೆಂಬ ಸೂಚನೆ. ಹಾಸ್ಯ ಮಿತಿಮೀರಿದವಗೆ ಶಿಕ್ಷೆ. ಲೇವಡಿ ಮಾಡುವುದರಲ್ಲಿಯೂ ಅರ್ಥವಿರಬೇಕು. ಗಣಪನ ಸಿಟ್ಟು ನೆತ್ತಿಗೇರಿದ ಫಲ ಚಂದ್ರಗೆ ಶಾಪ ಸಿಕ್ಕಿತು. ಮೂಷಿಕವಾಹನ ,ಮೋದಕ ಪ್ರಿಯ ಗಣೇಶ. ಮಹಾಗಣಪತಿಯನ್ನು ಮನಸಾ ಸ್ಮರಿಸಿದರೆ ಸಾಕಂತೆ, ಶ್ರದ್ಧೆ, ಏಕಾಗ್ರತೆ ಬಹುಮುಖ್ಯ. ಭಾದ್ರಪದ ಚತುರ್ಥಿಯಂದು ಗಣೇಶನ ಹುಟ್ಟಾಯಿತೆಂದು ಪ್ರತೀತಿ. ಈ ದಿನ ಭೂಲೋಕದ ಭಕುತರ ಮನೆಮನೆಗೆ ಗಣಪನ ಭೇಟಿ. ಅವರ ಇಷ್ಟಾರ್ಥಗಳ ಈಡೇರಿಸುವ ಲಂಬೋದರ, ಸುಮುಖ.

ಪಾರ್ವತಿ ಪ್ರಕೃತಿ ಮಾತೆ. ಪ್ರತಿ ಜೀವಿಯ ಜನುಮ ಮಣ್ಣಿನಲ್ಲಿ , ಸೇರುವುದು ಮಣ್ಣಿಗೆ. ನಾವು ನೆಲ-ಜಲವನ್ನು ಪೂಜ್ಯ ಭಾವನೆಯಿಂದ ನೋಡುವವರು. ಮಣ್ಣನ್ನು ನಮ್ಮ ಜೀವನಕ್ಕೆ ಬೇಕಾದಂತೆ ಬಳಸುವ ಚಾಕಚಕ್ಯತೆ ಬುದ್ಧಿವಂತನೆನಿಸಿದ ಮಾನವನಲ್ಲಿರಬೇಕು. ಕಾಯಕದ ಮಹತ್ವವನ್ನು ಅರಿತವನು ದುಡಿದು ಉಂಡಾನು. ರಟ್ಟೆಗಳಿಗೆ ಬೇಕಾದ ಶಕ್ತಿಯನ್ನು ಆ ಭಗವಂತನೇ ದಯಪಾಲಿಸಬೇಕು. ಮಣ್ಣಿನ ಗಣಪತಿಯನ್ನು ಕೂರಿಸುವುದರ ಮೂಲಕ ಪರಿಸರ ಕಾಪಾಡುವ ಕೆಲಸವೂ ಆಗಬೇಕು. ಗಣಪತಿಗೆ ಪ್ರಿಯವಾದ ಗರಿಕೆ ಅರ್ಪಿಸೋಣ. ಲೋಕಕ್ಕೆ ಬಂದ ಕಷ್ಟಗಳನ್ನೆಲ್ಲ ದೂರಮಾಡೆಂದು ಪ್ರಾರ್ಥಿಸೋಣ. ಆಡಂಬರ, ಐಷಾರಾಮಿ ಬಿಟ್ಟು ಭಕ್ತಿಯಿಂದ ಭಜಿಸಿ, ಪೂಜಿಸಿ ಕೃತಾರ್ಥರಾಗೋಣ.

*ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇ/*

*ಗೌರಿಪ್ರಿಯ ತನೂಜಾಯ ಗಣೇಶಾಯಾಸ್ತು ಮಂಗಲಮ್//*

-ರತ್ನಾ ಕೆ.ಭಟ್ ತಲಂಜೇರಿ

( ಶ್ಲೋಕ:ನಿತ್ಯ ಪ್ರಾರ್ಥನಾ ಶ್ಲೋಕ)

ಚಿತ್ರ ಕೃಪೆ: ಇಂಟರ್ನೆಟ್ ತಾಣ