ಬಾಳಿಗೊಂದು ಚಿಂತನೆ - 234

ಬಾಳಿಗೊಂದು ಚಿಂತನೆ - 234

ಓರ್ವನು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನಾಲ್ಕು ಜನ ನೋಡಿ, ಗಮನಿಸಿ ಹೊಗಳುವುದು ಸಾಮಾನ್ಯ. ಅದು ಅವನ ಕಷ್ಟಕ್ಕೆ, ಕೆಲಸಕ್ಕೆ ಸಿಕ್ಕಿದ ಪ್ರಶಂಸೆ. ಆದರೆ ತನ್ನನ್ನು ತಾನೇ ಹೊಗಳಿಕೊಳ್ಳುವುದು ಎಷ್ಟು ಸರಿ? ಇದನ್ನು ‘ಸ್ವಪ್ರಶಂಸೆ’ ಎನ್ನಬಹುದು. ಒಳಿತನ್ನು ಕಂಡು ಹೊಗಳಲಿ ಯಾರೂ ಬೇಡವೆನ್ನರು. ಏನೂ ಮಾಡದೆಯೆ ‘ಸಮಾಜ ಸೇವೆ’ ಎಂಬ ಬಿರುದು ಹಣೆಗೆ ಅಂಟಿಸಿ ಬಿಡುವುದು ವಿಪರೀತವಾಗಿದೆ. ತನ್ನ ಬೆನ್ನು ತನಗೆ ಕಾಣಿಸದಿದ್ದರೂ, ಅದನ್ನ ತಾನೇ ತಟ್ಟಿಕೊಳ್ಳುವುದು ಒಂದು ಕೆಟ್ಟ ಸಾಮಾಜಿಕ ಪಿಡುಗು ಖಂಡಿತಾ. ’ಪ್ರಶಸ್ತಿಗೆ ಅರ್ಜಿ ಹಾಕಿದ ಹಾಗೆ’. ಹೀಗೆ ಒಂದು ಸಲ ಏನೋ ಓದುತ್ತಿರುವಾಗ ಒಂದು ವರದಿ ಕಣ್ಣಿಗೆ ಬಿತ್ತು. ಓರ್ವ ಮಹಾಶಯರಿಗೆ ೫೦ ರ ಮೇಲೆ ಪ್ರಶಸ್ತಿಗಳು ಸಿಕ್ಕ ವರದಿ. ನನಗೆ ಆಶ್ಚರ್ಯವಾಯಿತು. ಅವರು ಅಧ್ಯಾಪಕರು ಬೇರೆ. ಹಾಗಾದರೆ ಪಠ್ಯ ಚಟುವಟಿಕೆ ಎಷ್ಟು ಹೊತ್ತಿಗೆ, ಅದಕ್ಕೆ ಬಿಡುವೆಲ್ಲಿದೆ? ೩೫-೪೦ ವರ್ಷ ಸಮಾಜದಲ್ಲಿ ನಿರಂತರ ಅಧ್ಯಾಪಕರಾಗಿ ದುಡಿದವರು, ಪ್ರಾಮಾಣಿಕ ಸೇವೆ ಸಲ್ಲಿಸಿದವರು, ಅವರ ಶಾಲಾ ಮಕ್ಕಳನ್ನು ದೇಶ ಮಟ್ಟದ ವಿವಿಧ ಸ್ಪರ್ಧೆಗಳ ತನಕ ಕರಕೊಂಡು ಹೋಗಿರುವ ಪ್ರತಿಭಾನ್ವಿತರೂ ನಮ್ಮ ನಡುವೆ ಇದ್ದಾರೆ. ಪಾಪ ಅವರನ್ನು ಕೇಳುವವರೂ ಯಾರೂ ಇಲ್ಲ. ಹೋಗಲಿ, ಆ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಫಾರಸ್ಸು ಮಾಡುವುದಿಲ್ಲ. ಪ್ರಶಸ್ತಿ ಹುಡುಕಿಕೊಂಡು ಬರಲಿ ಎಂಬ ಭಾವನೆಯಿಂದಲೂ ಇರಬಹುದು. ಇದೊಂದು ಉದಾಹರಣೆ ಮಾತ್ರ. ಎಲೆಯ ಮರೆಯ ಕಾಯಿಗಳಂತೆ ಬಹಳ ಜನವಿರಬಹುದು. ಅರ್ಹರಿಗೆ ಸಿಗಲೆಂಬ ಹಾರೈಕೆ. ಬೇರೆಯವರು ಗುರುತಿಸಿ ವೇದಿಕೆಗೆ ಏರಿಸಿದರೆ, ನೀಡಿದರೆ ಎಷ್ಟು ಸಂತೋಷವಿದೆ ಅದರಲ್ಲಿ. ಏನೂ ಮಾಡದೆ ಪಡೆಯುವವರ ಬಗ್ಗೆ ನನ್ನದೊಂದು ಧಿಕ್ಕಾರ. ತನ್ನ ತಾನೇ ಹೊಗಳುವವರ ಬಗ್ಗೆ ಸುಭಾಷಿತದಲ್ಲಿ ನಾವು ಹೀಗೆ ಓದಬಹುದು.

*ಸ್ತೋತಾರಃ ಕೇ ಭವಿಷ್ಯಂತಿ* *ಮೂರ್ಖಸ್ಯ ಜಗತೀತಲೇ|*

 *ನ ಸ್ತೌತಿ ಚೇತ್ ಸ್ವಯಂ ಚ ಸ್ವಂ* *ಕದಾ ಕಸ್ಯಾಸ್ತು ನಿರ್ವೃತ್ತಿಃ||*

ಮೂರ್ಖನು ತನ್ನನ್ನು ತಾನೇ ಹೊಗಳಿಕೊಳ್ಳದಿದ್ದರೆ ಅವನನ್ನು ಗುರುತಿಸುವವರಾಗಲಿ, ಹೊಗಳುವವರಾಗಲಿ ಬೇರಾರು ಇಲ್ಲ. ಅವನಿಗೆ ಮತ್ತೆ ಸುಖವೆಲ್ಲಿದೆ? ಸುಖಾಪೇಕ್ಷೆ ಮಾನವನ ಸ್ವಭಾವ. ನಾವು ಬುದ್ಧಿವಂತರೂ ಪ್ರಾಜ್ಞರೂ ಆಗುವುದು ನಮಗೆ ಶೋಭೆ. ನಡೆದು ಬಂದ ಹಾದಿಯನ್ನು ಆಗಾಗ ಹಿಂದಿರುಗಿ ನೋಡೋಣ. ‘ಸ್ವವಿಮರ್ಶೆಗೆ ಹೆಚ್ಚು ಒತ್ತು ಕೊಡುತ್ತಾ ಸಾಗೋಣ.ಸ್ವಪ್ರಶಂಸೆ ಬೇಡ.’ ಪ್ರಶಸ್ತಿಗಳೋ, ಅಭಿನಂದನೆಗಳೋ, ಹೊಗಳಿಕೆಯೋ ಅದರಷ್ಟಕ್ಕೇ ಬರಲಿ. ಬೆನ್ನು ಹತ್ತುವುದು ಸರಿಯಲ್ಲ. ಹಿಂದೆ ಹೋಗಿ ಪಡೆದ ಯಾವ ಗೌರವಕ್ಕೂ ಬೆಲೆ ಇಲ್ಲ. ಎದುರಿನಿಂದ ಅಭಿನಂದನೆಗಳ ಸುರಿಮಳೆ ಸಿಗಬಹುದು. ಆದರೆ ಬೆನ್ನಹಿಂದೆ ಆಡುವ ಮಾತುಗಳೇ ಬೇರೆ. ಅಂಥ ಅಭಿಲಾಷೆಯು ಇರಬಾರದು. ನಮ್ಮ ಕರ್ತವ್ಯವನ್ನು  ಪ್ರಾಮಾಣಿಕತೆಯಲ್ಲಿ, ನಿಷ್ಠೆಯಲ್ಲಿ ಮಾಡೋಣ. 

ಗಳಿಸೋಣ, ನೆಮ್ಮದಿಯಲಿರೋಣ. ಬದುಕಿನ ದಾರಿಯಲ್ಲಿ ಸಾಗಿ ಬರುವಾಗ ನೋವು, ಹತಾಶೆ, ಸೋಲು, ಕಷ್ಟಗಳಿರಬಹುದು, ಅದೆಲ್ಲ ನಮ್ಮನ್ನು ಒರೆ ಹಚ್ಚಲಿರುವ ಸಾಧನಗಳೆಂದು ತಿಳಿಯೋಣ. ಮುಂದೆ ಒಳ್ಳೆಯದಾಗಬಹುದೆಂಬ ‘ನಿರೀಕ್ಷೆ’ ಯೆಂಬ ರತ್ನಾಭರಣ ನಮ್ಮ ಮನಸ್ಸಿನಲ್ಲಿದ್ದರೆ ಅದೇ ಸಮಾಜದಲ್ಲಿ,ಜೀವನದಲ್ಲಿ ಧನಾತ್ಮಕ ಧೋರಣೆಯಾಗಬಹುದು. ಯಾರು ಗುರುತಿಸಲಿ ಬಿಡಲಿ ಭಗವಂತನ ಡೈರಿಯಲ್ಲಿ ಬರೆದಿಡುವ ಕೆಲಸ ಮಾಡೋಣ. ಆತನ ಚಕ್ಷುಗಳಿಂದ ತಪ್ಪಿಸಲು ಸಾಧ್ಯವಾಗದೆಂಬುದುರ ಅರಿವಿದ್ದರೆ ಸಾಕು.

-ರತ್ನಾ ಕೆ ಭಟ್ ತಲಂಜೇರಿ

(ಶ್ಲೋಕ: ಸರಳ ಸುಭಾಷಿತ) ಚಿತ್ರ ಕೃಪೆ: ಇಂಟರ್ನೆಟ್ ತಾಣ