ಬಾಳಿಗೊಂದು ಚಿಂತನೆ - 236

ಬಾಳಿಗೊಂದು ಚಿಂತನೆ - 236

ನಾವೆಲ್ಲರೊಂದೇ ಒಪ್ಪಿಕೊಳ್ಳೋಣ. ಆದರೆ ಗುಣ ಸ್ವಭಾವ ಭಿನ್ನ. ಐದು ಬೆರಳುಗಳು ಒಂದೇ ಹಾಗಿಲ್ಲ. ದೇಹ, ಅಂಗಗಳು ಒಂದೇ ಆದರೂ, ಗಾತ್ರ, ಆಕಾರ, ಬಣ್ಣ ಎಲ್ಲ ಬೇರೆ ಬೇರೆ. ಯೋಚನೆಗಳಲ್ಲಿ ವೈವಿಧ್ಯತೆ. ಒಬ್ಬೊಬ್ಬರಿಗೆ ಒಂದೊಂದು ಇಷ್ಟ. ಒಬ್ಬರಿಗೆ ಪಥ್ಯವಾದ್ದು ಮತ್ತೊಬ್ಬರಿಗೆ ಅಪಥ್ಯ. ಹುಳಿ, ಒಗರು, ಸಿಹಿ, ಖಾರ, ಉಪ್ಪು ಎಲ್ಲದರಲ್ಲೂ ವ್ಯತ್ಯಾಸ. ರಾಗ, ದ್ವೇಷ, ಕೋಪ, ಸಿಟ್ಟು, ಸೆಡವು, ವಯ್ಯಾರ, ನಗು, ಅಳು, ಮತ್ಸರ, ಮಮಕಾರದಲ್ಲೂ ಭಿನ್ನತೆ. ಕಲಿಕೆಯಲ್ಲಿ ಕೆಲವು ಮಂದಿ ಮುಂದೆ. ಕೆಲವರಿಗೆ ಎಷ್ಟು ಹೇಳಿದರೂ ತಲೆಗೆ ಹತ್ತದು. ಸೋಮಾರಿಗಳು, ಜಾಣರು ಹೀಗೆ ಹತ್ತು ಹಲವು ಭಿನ್ನತೆಗಳನ್ನು ಮನುಷ್ಯ ಹೇಳುವ ಒಂದು ಜಾತಿಯಲ್ಲಿ ನೋಡ್ತಾ ಇದ್ದೇವೆ. ಮನಸ್ಸಿನ ಆಲೋಚನೆಗಳಲ್ಲಿ ಒಟ್ಟಾಗಲು ಬಹಳ ಪ್ರಯಾಸವಿದೆ.

*ಮನುಜ ಕುಲವೊಂದೊಬ್ಬನಿನ್ನೊಬ್ಬನಂತಿಲ್ಲ*/

*ತನುವಂಗಗಳೊಂದು,ರೂಪ ಗುಣ ಬೇರೆ//*

*ನದೊಳೊಬ್ಬೊಬ್ಬನೊಂದೊಂದು ಪ್ರಪಂಚವಿಂ/*

*ತನುವೇಕದೊಳ್ ಬಹುಳ-ಮಂಕುತಿಮ್ಮ//*

ಮಾನ್ಯ ಡಿ.ವಿ.ಜಿಯವರು ಎಷ್ಟು ಸತ್ಯವಾಗಿ ತಮ್ಮ ಕಗ್ಗದ ಮೂಲಕ ಹೇಳಿದ್ದಾರಲ್ಲವೇ? ಈ ಪ್ರಪಂಚವೇ ಹಾಗೆ ಏಕತೆಯಲ್ಲಿ ಅನೇಕವನ್ನು ಬಿಂಬಿಸುತ್ತಾ ಹೊಂದಾಣಿಕೆಯಿಂದ ಹೋಗುತ್ತಿದೆ. ಇದುವೇ ಬದುಕಿನ ಗುಟ್ಟು ಸಹ ಆಗಿದೆ. ಹೊಂದಾಣಿಕೆಯಿಲ್ಲದಲ್ಲಿ ಬೂದಿಮುಚ್ಚಿದ ಕೆಂಡದಂತೆ. ಯಾವಾಗ ಭುಗಿಲೇಳಬಹುದೋ ಹೇಳಲಾಗದು. ಕಷ್ಟವೋ ಸುಖವೋ ಅನುಸರಿಸುವುದೇ ಸೂಕ್ತ ಪರಿಹಾರ. ನಮ್ಮೊಳಗೆ ನಾವೇ ಪರಿಹಾರ ಕಂಡುಕೊಂಡರೆ ಯಾವ ತಾಪತ್ರಯವೂ ಬರಲು ಸಾಧ್ಯವಾಗದು. ಸುಂದರ ಬದುಕನ್ನು ರೂಪಿಸುವುದು ನಮ್ಮ ಕೈಯಲ್ಲೇ ಇದೆ. ಅನ್ಯಾಯ ಅಸತ್ಯಗಳಿಗೆ ಮಣೆ ಹಾಕದೆ, ಮಣೆ ಹಾಕುವವರ ಸಂಗ ಮಾಡದಿರುವುದೇ ಆರೋಗ್ಯ, ನೆಮ್ಮದಿ. ಕತ್ತು ಭಾಗ ಬೇಕಾದಲ್ಲಿ ಬಾಗಿಸಬೇಕು. ಇಲ್ಲದಿದ್ದಲ್ಲಿ ಕತ್ತೆತ್ತಿ ನೋಡುವುದನ್ನು ರೂಢಿಸಿಕೊಳ್ಳಬೇಕು. ಇಲ್ಲದುದನ್ನು, ಭ್ರಮೆಯನ್ನು, ಕಲ್ಪನಾ ಲೋಕವನ್ನು ತ್ಯಜಿಸಿ, ವಾಸ್ತವತೆಯನ್ನು ಒಪ್ಪಿ, ಅಪ್ಪಿ ನಡೆಯಲು, ಜೀವಿಸಲು ಕಲಿಯುವುದೇ ಜಾಣತನ. ಪ್ರಜ್ಞಾಶೀಲನಾಗಿ, ಮಾನವಂತನಾಗಿ, ಸುಸಂಸ್ಕೃತನಾಗಿ ಹೊಂದಾಣಿಕೆಯೊಂದಿಗೆ ಬಾಳುವುದನ್ನು ತನ್ನದಾಗಿಸಬೇಕು. ಅವಕಾಶವನ್ನು ಅರಸಬೇಕು, ಆರೋಗ್ಯಕರವಾದಲ್ಲಿ ಸ್ವೀಕರಿಸಿ. ಇಲ್ಲವಾದಲ್ಲಿ ತಿರಸ್ಕರಿಸಿ. ದೇವನ ಕೊಡುಗೆಯ ಮರೆಯದೆ ಸ್ವೀಕರಿಸಿ, ಕೃತಜ್ಞತೆ ಸಲ್ಲಿಸಬೇಕು. ಸಂಸಾರ ಭಾರ ಅನಿವಾರ್ಯವೂ ಹೌದು, ಕರ್ತವ್ಯವೂ ಹೌದು. ಹೊರಗೆ ಹೋಗಿ ದುಡಿಯುವ ಮನೆಯ ಗಂಡು ಮಕ್ಕಳ ಕೆಲಸ ಎಲ್ಲರಿಗೂ ಕಾಣುತ್ತದೆ. ಆದರೆ ಓರ್ವ ಹೆಣ್ಣು ಮಗಳು ಬೆಳಿಗ್ಗೆ ಗಂಟೆ ೫ ರಿಂದ ರಾತ್ರಿ ಗಂಟೆ ೧೦ ರವರೆಗೂ ಮನೆಯಲ್ಲಿ ಬಿಡುವಿಲ್ಲದೆ ದುಡಿದರೂ ಕೇಳುವವರು ಬೆರಳೆಣಿಕೆಯ ಮಂದಿ. ಇದೇ ಪ್ರಪಂಚ. ಆದರೆ ಆಕೆ ಸ್ವಲ್ಪವೂ ಬೇಸರಿಸದೆ, ಹೊಂದಾಣಿಕೆಯ ಬದುಕಿನಲ್ಲಿಯೇ ತೃಪ್ತಿ ಕಂಡುಕೊಳ್ಳುತ್ತಾಳೆ. ಮನದ ಕ್ಲೇಶಗಳ ದೂರ ತಳ್ಳಿ ನೆಮ್ಮದಿಯ ಬದುಕಿಗಾಗಿ ಶ್ರಮವಹಿಸೋಣ. ಎಲ್ಲಿ ಹೊಂದಾಣಿಕೆ ಇರುವುದೋ ಅಲ್ಲಿ ಬಾಳು ಸುಗಂಧಮಯ.

-ರತ್ನಾ ಕೆ.ಭಟ್

 (ಆಕರ: ಕಗ್ಗದ ಮುಕ್ತಕ)

ಚಿತ್ರ ಕೃಪೆ: ಇಂಟರ್ನೆಟ್ ತಾಣ