ಬಾಳಿಗೊಂದು ಚಿಂತನೆ - 238
*ಸಾಹಿತ್ಯದೊಳಿಂದು ಮಾತೆಯ ನುಡಿ ಪ್ರತಿಧ್ವನಿಸಲಿ*
*ಪದಗಳ ಸರಮಾಲೆಯೊಳು ಹಂಸಧ್ವನಿ ವಿಜೃಂಭಿಸಲಿ*
*ನೆನೆಯುತ ಭುವನೇಶ್ವರಿಯ ಕರುಣೆಯ ಸ್ಫೂರ್ತಿಯಲಿ*
*ಕನ್ನಡದ ನೆಲಜಲದೊಳು ಅಕ್ಷರಕ್ಷರ ಸಲಿಲವಾಗಿ ಹರಿಯಲಿ*
ಕನ್ನಡ ಪದಗಳೇ ಎಲ್ಲೆಲ್ಲೂ ವಿಜೃಂಭಿಸಲಿ. ಈ ನಿಟ್ಟಿನಲ್ಲಿ ಕನ್ನಡಿಗರಾದ ನಾವೆಲ್ಲರೂ ಶ್ರಮವಹಿಸೋಣ, ಮಾತೆಯ ಸೇವೆಯನ್ನು ಮಾಡೋಣ.
***
*ಹಾಡಲು ಸೊಂಪು ಕೇಳಲು ಇಂಪು*
*ಸವಿ ಕನ್ನಡದ ಸಾಲು*
*ಕನ್ನಡ ಭಾಷೆಯು ಕಾನನದಿ*
*ಅರಳಿಹ ಸುಮಧುರ ಪುಷ್ಪಗಳು*
ಕನ್ನಡವೆಂದರೆ ಸರಳ, ಸ್ವಚ್ಛಸುಂದರ, ಸುಲಲಿತ. ವರ್ಣಮಾಲೆಯ ಒಂದೊಂದು ಅಕ್ಷರವೂ ಅತ್ಯಮೂಲ್ಯವಾಗಿದೆ, ನವರತ್ನಗಳಷ್ಟು ಬೆಲೆಯುಳ್ಳದ್ದಾಗಿದೆ. ಈ ಮುತ್ತಿನ ಮಣಿಗಳನ್ನು ನಾವು ಬಳಸುವುದರೊಂದಿಗೆ, ನಮ್ಮ ಮುದ್ದು ಮಕ್ಕಳಿಗೂ ಕಲಿಸೋಣ.
***
*ಜಾಣ ಜಾಣೆಯರೆದೆಗೆ ಕನಸು ಕೊಡುವವಳೆ*
*ಬಾಗಿದವರಿಗೆ ಭಾಗ ಹೃದಯ ಕೊಡುವವಳೆ*
*ಸಾವಿರದ ಶರಣವ್ವ ನಮ್ಮ ಕನ್ನಡದ ತಾಯೇ*
ಕನ್ನಡಿಗರಾದ ನಮ್ಮ ಚಲನಶೀಲತೆಯಲ್ಲಿ ನಾವು ಬದುಕುವ ಫಲವಿದೆ, ಅರ್ಥವಿದೆ, ಬಾಗಿ ಬೀಗುವುದೇ ಬಾಳಿನ ಧರ್ಮ ಜೀವನದ ಹಾದಿಯ ಮರ್ಮ. ಜನಪದ ಸಾಹಿತ್ಯದಲ್ಲಿ ಸಹ ನಾಡುನುಡಿಯನ್ನು ಹಾಡಿ ಹೊಗಳಿದ ಸಹೃದಯತೆ ನಮ್ಮ ಹಿರಿಯ ಸಾಹಿತಿವರೇಣ್ಯರದು.
***
*ತನು ಕನ್ನಡ,ಮನ ಕನ್ನಡ,ಧನ ಕನ್ನಡವೆಮ್ಮವು*
*ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯಶಿವ*
*ಜಗದ ಬಾಳೆಂಬ ತೋಟದೊಳು ನಾವೆಲ್ಲ ಕನ್ನಡದ ಹೂಗಳು*.
*ಏರಿಸಿ ಹಾರಿಸಿ*
*ಕನ್ನಡದ ಬಾವುಟ*
*ಒಂದೇ ಒಂದೇ ಒಂದೇ ಕರ್ನಾಟಕ ಒಂದೇ*
*ಹಚ್ಚೇವು ಕನ್ನಡದ ದೀಪ,ಕರುನಾಡ ದೀಪ,ಸಿರಿನುಡಿಯ ದೀಪ*
*ನಮ್ಮ ಉಸಿರು ಕನ್ನಡ,ನಮ್ಮ ಹೆಸರು ಕನ್ನಡ,ನಮ್ಮ ಕಸುಬು ಕನ್ನಡ.*
ಕನ್ನಡ ನೆಲದಲ್ಲಿ ಕನ್ನಡ ಭಾಷೆ ವಿಜೃಂಭಿಸಬೇಕಾದರೆ ನಾವೆಲ್ಲರೂ ಕೈ ಜೋಡಿಸಬೇಕು.ಅನ್ಯ ಭಾಷೆಯತ್ತ ಜನರ ಒಲವಿದೆ, ಒಪ್ಪೋಣ, ಆದರೆ ಕನ್ನಡವನ್ನು ಮರೆತು ಕೂರುವುದು ಸರಿಯಲ್ಲ. ಆಂಗ್ಲಭಾಷೆ ಕಲಿತರೆ ಮಾತ್ರ ಬದುಕು, ಜೀವನ, ಕೆಲಸ ಎಂಬ ಪೊರೆ ಹರಿದಾಗ ಮಾತ್ರ ಕನ್ನಡಕ್ಕೆ ನೆಲೆ-ಬೆಲೆ.ಕನ್ನಡದ ಜೊತೆ ಆಂಗ್ಲ ಕಲಿತು ಜೀವನ ನಡೆಸುವವರು ಎಷ್ಟೋ ಜನರಿದ್ದಾರೆ. ಮುಖ್ಯವಾಗಿ ಪೋಷಕರು. ಮನೆಮನೆಗಳಲ್ಲಿ ಒಂದಾದರೂ ಕನ್ನಡ ದಿನಪತ್ರಿಕೆ ತರುವ ಅಭ್ಯಾಸವಿರಲಿ. ಕನ್ನಡ ಸಾಹಿತ್ಯಗಳನ್ನು ಓದುವ ಹವ್ಯಾಸವಿರಲಿ.
ನಮ್ಮ ಬದುಕಿನ ಅವಿಭಾಜ್ಯ ಅಂಗ ಕನ್ನಡ ಮರೆಯದಿರೋಣ. ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಬಹುದೊಡ್ಡ ಹೊಣೆಗಾರಿಕೆ ನಮ್ಮೆಲ್ಲರದು. ಕನ್ನಡ ಪುಸ್ತಕಗಳ ಸಂಗ್ರಹ ಮತ್ತು ಓದು ಇರಬೇಕು. ನಿರರ್ಗಳವಾಗಿ ಕನ್ನಡ ಭಾಷೆಯನ್ನು,ಪದಗಳನ್ನು, ಅಕ್ಷರ ದೋಷವಿಲ್ಲದೆ ಓದಲು ಬರೆಯಲು ಕಲಿಯುವುದು ನಾಡಿನಪ್ರಜೆಗಳಾದ ನಮ್ಮ ಕರ್ತವ್ಯ. ಮಕ್ಕಳಿಗೆ ಹೆತ್ತವರು ಮನೆಯಲ್ಲಿ ಉಕ್ತಲೇಖನ, ಒಗಟು, ಗಾದೆಮಾತುಗಳ ಬರಹ, ಸಣ್ಣ ವಾಕ್ಯರಚನೆ, ಅಕ್ಷರ ಆಟಗಳು, ಪದ್ಯ ಬಂಡಿ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.
ನಮ್ಮ ನಾಡುನುಡಿ ,ನಮ್ಮ ಮಣ್ಣಿನ ಸೊಗಡು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ತಾಯಿ ಭುವನೇಶ್ವರಿಯ ಸೇವೆಗಿಂತ ಮಿಗಿಲಾದ ಸೇವೆಯಿಲ್ಲ. ವರ್ಣಮಾಲೆಯ ಅಕ್ಷರ ಅದೆಷ್ಟು ಚಂದ? ಕವಿಸಾಹಿತಿಗಳ ರಚನೆಗಳು ಅದೆಷ್ಟು ಸುಲಲಿತ? ದಾಸವರೇಣ್ಯರು, ವಚನಕಾರರು, ಹಳ್ಳಿಯ ಜನಪದ ಗೀತೆಗಳು ಭಾಷೆಯನ್ನು ಶ್ರೀಮಂತಗೊಳಿಸಿದವು. ಅವರೆಲ್ಲರ ಕೊಡುಗೆ ಅಪಾರ.
ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳೋಣ. ಸಾಹಿತ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು. ಇಲಾಖೆಯ ಸುತ್ತೋಲೆಗಳು ಕನ್ನಡಲ್ಲಿರಬೇಕು. ಕನ್ನಡ ಪುಸ್ತಕಗಳನ್ನು ಉಡುಗೊರೆ ನೀಡೋಣ, ಇದೊಂದು ಅಳಿಲ ಸೇವೆ. ಮನೆ ಮತ್ತು ಮನದ ಭಾಷೆ ಕನ್ನಡವನ್ನಾಗಿ ಮಾಡುವುದು ನಮ್ಮ ಕೈಯಲ್ಲೇ ಇದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಬಹುದೊಡ್ಡ ಹೊಣೆಗಾರಿಕೆ ಕನ್ನಡ ನೆಲದಲ್ಲಿ ವಾಸಿಸುವ ನಮ್ಮೆಲ್ಲರದ್ದಾಗಿದೆ. ತಾಯಿಯ ಋಣವನ್ನು ತೀರಿಸುವುದು ನಮ್ಮ ಕರ್ತವ್ಯವಾಗಿದೆ. ಪುಟ್ಟ ಮಕ್ಕಳಿಗೆ ಭಾಷಾ ಒಲವನ್ನು ಮೂಡಿಸುವ ಕೆಲಸವಾಗಬೇಕು. ಇದು ತಾಯಂದಿರ, ಶಾಲೆಗಳ ಕೈಯಲ್ಲಿದೆ. ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ಮನೆಯೊಳಗಡೆ ನಾಲಿಗೆಯಲಿ ಕನ್ನಡ ಭಾಷೆ ನಲಿದಾಡಲಿ. ನಾಡುನುಡಿಯನ್ನು ಒಪ್ಪಿ ಅಪ್ಪಿ, ಆಚರಣೆಯಲ್ಲಿ ತರುವುದೇ ತಾಯಿನುಡಿಗೆ ಸಲ್ಲಿಸುವ ಸೇವೆ.
*ಕನ್ನಡವೆನೆ ಕುಣಿದಾಡುವುದೆನ್ನೆದೆ*
*ಅಆಇಈ ಕನ್ನಡದ ಅಕ್ಷರಮಾಲೆ*,*ಅಮ್ಮ ಎಂಬುದು ಕಂದನ ಕರುಳಿನ ಕರೆಯೋಲೆ*
*ಕನ್ನಡ ಎನ್ನುವ ಮೂರಕ್ಷರದಿ ಎನಿತು ಅರ್ಥವಿದೆ*
*ಕನ್ನಡ ಮಣ್ಣಲಿ ಹುಟ್ಟಿದೆಯೆಂದರೆ ಹಿಂದಿನ ಪುಣ್ಯ ಫಲ*.
*ಕನ್ನಡಮ್ಮನಿಗೆ ಜಯವಾಗಲಿ*
(ನವಂಬರ ತಿಂಗಳಿನಲ್ಲಿ ಕನ್ನಡದ ನೆಲ-ಜಲ-ನುಡಿಯ ಬಗ್ಗೆಯೇ ಬರೆದ ನುಡಿಗಳನ್ನು ಓದಿ ಪ್ರೋತ್ಸಾಹಿಸಿದ ‘ಸಂಪದ' ದ ಓದುಗರಿಗೆಲ್ಲರಿಗೂ ಹೃದಯಾಂತರಾಳದ ಧನ್ಯವಾದಗಳು)
-ರತ್ನಾ ಕೆ ಭಟ್,ತಲಂಜೇರಿ
(ಹಾಡುಗಳ ಸಾಲುಗಳು ಸಂಗ್ರಹ)
ಚಿತ್ರ ಕೃಪೆ:ಇಂಟರ್ನೆಟ್ ತಾಣ