ಬಾಳಿಗೊಂದು ಚಿಂತನೆ - 239
ತಾನು, ತನ್ನದು ಎಂಬುದು ಸರ್ವೇ ಸಾಮಾನ್ಯ. ಅನ್ಯ ಅಥವಾ ಬೇರೆ ಆಶ್ರಯಿಸಬಾರದೆಂದು ಅಲ್ಲ. ಅಷ್ಟೂ ಅನಿವಾರ್ಯತೆಗೆ ನಾವು ಇಳಿಯಬಾರದಷ್ಟೆ. ಆಸೆ -ಆಕಾಂಕ್ಷೆಗಳನ್ನು ಸ್ಥಿಮಿತದಲ್ಲಿಟ್ಟರೆ ಅನಿವಾರ್ಯತೆ ಹತ್ತಿರ ಬರಲೂ ಹೆದರಬಹುದು. ಇತರರ ಬಳಿ ಎಷ್ಟಿದ್ದರೇನು? ಅದು ತನ್ನದಾಗದು. ತಾನು ಬೆವರಿಳಿಸಿ ದುಡಿಯಬೇಕು, ಗಳಿಸಬೇಕಲ್ಲವೇ? ಆಸೆ ಸಹಜ. ಆದರೆ ಅದಕ್ಕೂ ಒಂದು ಪರಿಧಿ ಹಾಕಿಕೊಂಡರೆ ಉತ್ತಮ. ಆಸೆಯ ಕಡಲನ್ನು ದಾಟುವ ಸಾಹಸ ಮಾಡಿದರೆ ಮುಳುಗಿಯೇ ಹೋಗಬಹುದು. ದೋಣಿ ಇರುವುದು ನೀರಿನ ಮೇಲೆ ತೇಲಲು. ಅದೇ ದೋಣಿಗೆ ನೀರು ನನ್ನೊಳಗೆ ಬರಲಿ ಎಂದು ಆಸೆಯಾದರೆ ಪರಿಸ್ಥಿತಿ ಏನಾಗಬಹುದು? ಮುಳುಗಬಹುದು. ಹಾಗಾಗಿ ನಮ್ಮ ಇತಿಮಿತಿ ಅರಿತರೆ ಚೆನ್ನ. ಪ್ರತಿಯೊಬ್ಬರಿಗೂ ಸ್ವಾಭಿಮಾನ, ಸ್ವಧರ್ಮ, ತನ್ನತನ ಎನ್ನುವುದು ಶ್ರೇಷ್ಠ. ಅದನ್ನು ಮೀರುವುದು ತರವಲ್ಲ.
*ಸ್ವಧರ್ಮಾಚರಣಂ ಶ್ರೇಯ: ಪರಧರ್ಮೋ ಭಯಾವಹ:/*
*ದುರ್ಬಲೋ$೦ಬುನಿ ಮಾತಂಗ: ಕ್ಷಿತೌ ನಕ್ರೋ ನ ಶಕ್ತಿಮಾನ್//*
ತನ್ನ ಧರ್ಮವನ್ನೇ ತಾನು ಆಚರಿಸುವುದೊಳಿತು. ಬೇರೆಯವರ ಧರ್ಮ ಭಯಾನಕ, ಅದನ್ನು ಒಪ್ಪುವ ಗುಣವಿರಬೇಕು. ಗೌರವಿಸೋಣ. ಆನೆ ಬಲಶಾಲಿ ಪ್ರಾಣಿಯಾದರೂ ನೀರಿಗೆ ಬಿದ್ದಾಗ ಅದಕ್ಕೆ ಬಲವಿಲ್ಲ. ಅದರ ಶಕ್ತಿ ಉಪಯೋಗಕ್ಕೆ ಬಾರದು. ತಿಮಿಂಗಿಲಕ್ಕೆ ನೀರೇ ಆಗಬೇಕು. ನೆಲದ ಮೇಲೆ ಶಕ್ತಿಹೀನ. ಹಾಗೆಯೇ ನಮ್ಮ ಸ್ಥಿತಿ ಸಹ ಆಗಬಹುದು. ನಮ್ಮ ನಮ್ಮದು ನಮಗೆ ಶ್ರೇಷ್ಠ. ಎಲ್ಲವನ್ನೂ ಗೌರವಿಸೋಣ, ಪ್ರೀತಿಸೋಣ, ನಮ್ಮದೆಂಬ ಮಮಕಾರ ಗುಣ ಬೆಳೆಸಿಕೊಳ್ಳೋಣ, ಆಗದೇ?
ನನ್ನ ತಂದೆಯವರು ಹೇಳುತ್ತಿದ್ದ ಒಂದು ಕಥೆ ನೆನಪಾಯಿತು. ಓರ್ವ ಪ್ರಾಮಾಣಿಕ, ಸಜ್ಜನ, ಬಡವ ತನ್ನ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದನಂತೆ. ಆದರೆ ಮಳೆಯ ನೀರೇ ಆಶ್ರಯವಾದ ಕಾರಣ ಫಸಲು ಕೈಗೆ ಸಿಗದೆ ತುಂಬಾ ಕಷ್ಟ ಪಡುತ್ತಿದ್ದನಂತೆ. ಆತನ ಹೆಂಡತಿ ಹೇಗೋ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದಳಂತೆ. ಒಂದು ದಿನ ಆ ರೈತ ಕಾಡಿನ ದಾರಿಯಾಗಿ ತನ್ನ ಸಹೋದರಿಯ ಮನೆಗೆ ಹೋಗುತ್ತಿದ್ದವ ಆಯಾಸದಿಂದ ಮರದಡಿಯಲ್ಲಿ ಮಲಗಿದ್ದನಂತೆ. ಆಗ ಮೂವರು ಕಳ್ಳರು ಅದೇ ಮರದಡಿಯಲ್ಲಿ ತಾವು ಕದ್ದ ಒಡವೆ, ವಸ್ತ್ರಗಳನ್ನು ತಂದಿಟ್ಟು, ಹಂಚಿಕೊಳ್ಳುತ್ತಿರುವಾಗ ಈ ರೈತನಿಗೆ ಸೀನು ಬಂತಂತೆ. ಯಾರೋ ಹಿಂಬಾಲಿಸುತ್ತಿದ್ದಾರೆಂದು ಖದೀಮರು ಓಡಿಹೋದರಂತೆ. ಈತ ಎಚ್ಚರವಾಗಿ ನೋಡುವಾಗ ಇದೆಲ್ಲ ಭಗವಂತನೇ ತನಗೆ ನೀಡಿದ್ದಾನೆಂದು ಮನೆಗೆ ತಂದು, ಊರಿನ ನ್ಯಾಯಪಂಚಾಯಿತಿಯ ಮುಖಂಡನಿಗೆ ಒಪ್ಪಿಸಿದನಂತೆ. ಸೊತ್ತು ಯಾರದ್ದೆಂದು ತಿಳಿದ ಮೇಲೆ ಸಂಬಂಧಿಸಿದವರನ್ನು ಬರಹೇಳಿ ಮುಖಂಡ ನೀಡಿದನಂತೆ. ಆಗ ಈ ಬಡವನನ್ನು ಬರಲು ಹೇಳಿ, ಅವನಿಗೆ ಜೀವನಕ್ಕೆ ಬೇಕಾದ ಸೌಲಭ್ಯ, ಆರ್ಥಿಕ ಸಹಕಾರ, ನಗನಾಣ್ಯವಸ್ತ್ರ ನೀಡಿ ಗೌರವಿಸಿದನಂತೆ. ಅವನ ಮನೆಯ ಹತ್ತಿರ ಓರ್ವ ಜಿಪುಣಾಗ್ರೇಸರ ಇದ್ದನಂತೆ. ಅವನ ಪತ್ನಿ ವಿಷಯವೆಲ್ಲ ಸಂಗ್ರಹಿಸಿ, ತನ್ನ ಗಂಡನನ್ನು ಒತ್ತಾಯ ಮಾಡಿ ಅದೇ ಕಾಡಿನ ಮರದಡಿಗೆ ಕಳುಹಿಸಿದಳಂತೆ. ನಿದ್ದೆ ಬಂದ ಹಾಗೆ ನಟನೆ ಮಾಡುತ್ತಿದ್ದ ಸಮಯದಲ್ಲಿ ಕಳ್ಳರು ಬಂದು ಸೊತ್ತುಗಳನ್ನು ಹಂಚಿಕೊಳ್ಳುವಾಗ, ಈ ಜಿಪುಣ ಸೀನಿದನಂತೆ. ಕಳೆದ ಸಲ ಕಷ್ಟಪಟ್ಟು ತಂದದ್ದೆಲ್ಲ ಕಾಣೆಯಾಗಿದೆ, ಇಲ್ಲಿ ಯಾರೋ ಒಬ್ಬ ಹಿಂಬಾಲಿಸಿ ಬರುವವ ಇದ್ದಾನೆಂದು, ಕಳ್ಳರು ಹುಡುಕುವಾಗ ಜಿಪುಣ ಎಚ್ಚರಿಕೆಯಲ್ಲಿ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ಕಳ್ಳರನ್ನೇ ನೋಡಿದನಂತೆ. ಮೂವರೂ ಸೇರಿ ಆತನಿಗೆ ಹೊಡೆದು ಬಡಿದು ಹಣ್ಣುಗಾಯಿ ನೀರುಗಾಯಿ ಮಾಡಿದರಂತೆ. ಪತ್ನಿಯ ಮಾತು ಕೇಳಿ, ಸಾಕಷ್ಟು ಶ್ರೀಮಂತನಾಗಿದ್ದ ಜಿಪುಣ ಅತ್ಯಾಸೆಯಿಂದ ಬಂದದ್ದಕ್ಕೆ ತಕ್ಕಶಾಸ್ತಿಯಾಯಿತು. ಹೇಗೋ ಸಾವರಿಸಿಕೊಂಡು ಮನೆಗೆ ಬಂದವನಿಗೆ ಹೆಂಡತಿ ಉಪ್ಪಿನ ಶಾಖ, ಕಷಾಯ ಮಾಡಿ ಉಪಚರಿಸಿದಳಂತೆ. ಇದೇ ರೀತಿ ಆಸೆ ಪಟ್ಟರೆ ಸಿಗದು. ಪ್ರಾಮಾಣಿಕತನ ಇರಬೇಕು. ಇನ್ನೊಬ್ಬರ ಹತ್ತಿರವಿರುವುದಕ್ಕೆ ಆಸೆ ಪಡಬಾರದು.
-ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ: ಸರಳ ಸುಭಾಷಿತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ