ಬಾಳಿಗೊಂದು ಚಿಂತನೆ - 241
ಹಾಡು ಹಳೆಯದಾದರೇನು
ಭಾವ ನವನವೀನ
ಒಂದೇ ಒಂದೇ ನಾವೆಲ್ಲರೂ ಒಂದೇ
ಈ ದೇಶದೊಳೆಲ್ಲಿದ್ದರು
ಭಾರತ ನಮಗೊಂದೇ
ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?
ನಿನ್ನೊಳಗನ್ನು ನೀನೇ ಅಗೆದು, ತೆಗೆದು
ಕಮ್ಮಟದ ಕುಲುಮೆ ಬೆಂಕಿಗೆ ಹಿಡಿದು
‘ಕಾವ್ಯಕೆ ಶಾಸ್ತ್ರವೇಕೆ?’ ಇವರ ನಿಲುವು. ಬಾಲ್ಯ ಮುಂಬೆಳಗು, ತಾರುಣ್ಯ ಮಧ್ಯಾಹ್ನ, ಬಿಸಿಲ ಬೇಗೆಯು ಹೆಚ್ಚು ಆ ಹೊತ್ತಿಗೆ. ಭಾಷೆ ಕೇವಲ ಒಂದು ಸಾಧನ. ಎದೆಯೊಳಗಿನ ಭಾವಹೊಮ್ಮುವುದಕೆ ಭಾಷೆ ಮಾಧ್ಯಮ.
ಶಿಕ್ಷಕರಾದ ಶ್ರೀಯುತ ಶಾಂತವೀರಪ್ಪ ವೀರಮ್ಮ ದಂಪತಿಗಳಿಗೆ ಜಿ.ಎಸ್. ಶಿವರುದ್ರಪ್ಪನವರು ಫೆಬ್ರವರಿ ೭, ೧೯೨೬ ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಈಸೂರು ಎಂಬ ಹಳ್ಳಿಯಲ್ಲಿ ಜನಿಸಿದರು. ಕನ್ನಡದ ಕವಿ, ರಾಷ್ಟ್ರಕವಿ, ವಿಮರ್ಶಕ, ಚಿಂತಕ, ನಾಟಕಕಾರ, ಪ್ರಾಧ್ಯಾಪಕ, ಉತ್ತಮ ಸಂಶೋಧಕರು. ಕನ್ನಡ ನವೋದಯದ ಹಿರಿಯ ಕವಿವರೇಣ್ಯರ ಹಾದಿಯಲ್ಲಿ ಹೆಜ್ಜೆ ಹಾಕಿ, ತಮ್ಮದೇ ಛಾಪನ್ನು ಸಾಹಿತ್ಯ ವಲಯದಲ್ಲಿ ಮೂಡಿಸಿದರು. ರಾಷ್ಟ್ರಕವಿ ಕುವೆಂಪು, ಮಂಜೇಶ್ವರ ಗೋವಿಂದ ಪೈಗಳೇ ಇವರಿಗೆ ಆದರ್ಶ ಕವಿಗಳು. ಕನ್ನಡ ಸಾಹಿತ್ಯ ಲೋಕದಲ್ಲಿ ಸಂಸ್ಕೃತಿಯ ಸಂಚಾರ, ಸೃಜನಶೀಲತೆ, ಸ್ವವಿಮರ್ಶೆಗೆ ಹೆಚ್ಚಿನ ಆದ್ಯತೆ ನೀಡಿದವರಲ್ಲಿ ಒಬ್ಬರಿವರು.
ರಾಷ್ಟ್ರಕವಿ ಕುವೆಂಪುರವರ ಮಾರ್ಗದರ್ಶನದಲ್ಲಿ 'ಸಂಶೋಧನೆ' ನಡೆಸಿ, ಮೈಸೂರು ವಿ.ವಿಯಿಂದ 'ಸೌಂದರ್ಯ ಸಮೀಕ್ಷೆ' ಗ್ರಂಥಕ್ಕೆ 'ಡಾಕ್ಟರೇಟ್ 'ಪಡೆದರು. ಮೈಸೂರು ವಿ.ವಿಯ ವಿವಿಧ ಕಾಲೇಜ್ ಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹೈದರಾಬಾದ್ ಉಸ್ಮಾನಿಯಾ ವಿ.ವಿಯಲ್ಲಿ ಕನ್ನಡ ವಿಭಾಗದಲ್ಲಿ ಮುಖ್ಯಸ್ಥರಾಗಿ ಕರ್ತವ್ಯದಲ್ಲಿದ್ದರು. 'ಹಸ್ತಪ್ರತಿ ಸಂಗ್ರಹಣೆ ಮತ್ತು ಸಂರಕ್ಷಣೆಗಾಗಿ ಶ್ರಮಿಸಿದರು. ಓಲೆಗರಿ ಸಂಗ್ರಹಣೆಯನ್ನು ಕೈಗೊಂಡರು.
ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ಪ್ರೀತಿ ಇಲ್ಲದ ಮೇಲೆ, ಎದೆ ತುಂಬಿ ಹಾಡಿದೆನು, ಅನಾವರಣ, ಕವನ ಸಂಕಲನ ಒಟ್ಟು೧೮, ವಿಮರ್ಶೆ ೧೬ ಅನುರಣನ, ಗೃಹಬಿಂಬ, ಬೆಡಗು, ನವೋದಯ ಇತ್ಯಾದಿಗಳು.ಕರ್ಮಯೋಗಿ ಸಿದ್ದರಾಮನ ಜೀವನ ಚರಿತ್ರೆ, ಪ್ರವಾಸಕಥನಗಳು ೪ ಬರೆದಿದ್ದಾರೆ. 'ಚತುರಂಗ'ದಲ್ಲಿ ಆತ್ಮಕಥನವನ್ನು ಬರೆದ ಮಹಾನುಭಾವರು. 'ಕಾಲ' ಮತ್ತು 'ಮನುಷ್ಯ' ಕಾವ್ಯ ಕವನಗಳ ಕೇಂದ್ರಬಿಂದುವಾಗಿರಲೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ, ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ಅನಕೃ ನಿರ್ಮಾಣ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನಾಡೋಜ, ಕುವೆಂಪು, ಪಂಪ, ಮಾಸ್ತಿ ಪುರಸ್ಕಾರ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಇನ್ನೂ ಅನೇಕ ಪ್ರಶಸ್ತಿ -ಸನ್ಮಾನಗಳು ಮುಡಿಗೇರಿದ್ದು ಅವರ ಪಾಂಡಿತ್ಯ, ಶೈಲಿಗೆ ತಕ್ಕುದಾಗಿದೆ. ಮಹಾನ್ ಕನ್ನಡದ ಚೇತನ ಡಾ.ಜಿ.ಎಸ್ .ಎಸ್ ಸರ್ ಅವರು ೨೩ ದಶಂಬರ ೨೦೧೩ ರಂದು ನಮ್ಮನ್ನಗಲಿದರು.
ಈ ಮೇರು ಸಾಹಿತ್ಯಕಾರರ ಜನ್ಮದಿನದಂದು ಅವರನ್ನು ಮತ್ತೆ ನೆನಪಿಸಿಕೊಳ್ಳುತ್ತಾ...
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ.
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ
ಎಷ್ಟೊಂದು ನೈಜತೆಯಲ್ಲವೇ?
'ಕನ್ನಡ ತಾಯಿ ಧನ್ಯೆ'
-ರತ್ನಾ ಕೆ ಭಟ್, ತಲಂಜೇರಿ
(ಆಕರ ಪುಸ್ತಕ: ಕನ್ನಡ ಕವಿ ಸಾಹಿತಿಗಳ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ