ಬಾಳಿಗೊಂದು ಚಿಂತನೆ (25)

ಬಾಳಿಗೊಂದು ಚಿಂತನೆ (25)

ಶಿವರಾತ್ರಿಯಲ್ಲಿ ಕಳ್ಳರು ಎಂಬುದು ರೂಢಿ ಮಾತಾಗಲು ಕಾರಣ ಒಂದು ಕಳ್ಳತನ ಇನ್ನೊಂದು ಅಪಪ್ರಚಾರ. ಹೌದೇ, ಇದು ಕಳ್ಳತನದ ದಿನವಾ? ಶಿವರಾತ್ರಿಯಂದು ನಗರಜಾಗೃತಿಗಾಗಿ ನಗರ ಭಜನೆ, ಜಾಗರಣೆ ನಡೆಯುತ್ತಿತ್ತು. ಆಗಿನ ಕಾಲದಲ್ಲಿ ಹಸಿವು ನೀರಡಿಕೆಯಾದರೆ ಈಗಿನಂತೆ 24×7 ಹೋಟೇಲುಗಳು ಇರಲಿಲ್ಲ. ಆಗ ಹಸಿದವರು ರೈತರು ಬೆಳೆದ ಎಳೆನೀರು, ತರಕಾರಿ ಹೇಳದೆ ಕೇಳದೆ ತಿನ್ನಬಹುದಿತ್ತು. ಹಸಿದವರೂ ತಮಗೆ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಉಪಯೋಗಿಸುತ್ತಿದ್ದರು. ವೃಥಾ ಬೆಳೆಯನ್ನು ಪೋಲು ಮಾಡುತ್ತಿರಲಿಲ್ಲ. ಅದಕ್ಕೆ ಬೆಳೆದವರು ಖುಷಿ ಪಡುತ್ತಿದ್ದರೇ ವಿನಃ ಸಿಟ್ಟಾಗುತ್ತಿರಲಿಲ್ಲ. " ಅಬ್ಬಾ ಇಂದು ಬೆಳೆಗಳನ್ನು ಬೆಳೆದು ಕೃತಾರ್ಥನಾದೆ. ಶಿವ ಶರಣರು ತೃಪ್ತರಾದರಲ್ಲ. ಅದುವೇ ಪರಶಿವನ ಅನುಗ್ರಹ" ಎಂದು ಗ್ರಾಮೀಣರು ಸಂತಸ ಪಡುತ್ತಿದ್ದರು. ಕ್ರಮೇಣ ಕೆಲ ಕಿಡಿಗೇಡಿಗಳು ಇದನ್ನೊಂದು ದಂಧೆ ಮಾಡಿಕೊಂಡರು. ಇದನ್ನು ಧರ್ಮ ವಿರೋಧಿಗಳು ಬೆಂಬಲಿಸಿ ಅಪಪ್ರಚಾರ ಮಾಡಿದರು. ನಂತರ ಶಿವರಾತ್ರಿ ಕಳ್ಳರು ಎಂಬ ಹೆಸರಾಯ್ತೇ ವಿನಃ ಇದೊಂದು ಧರ್ಮಜಾಗೃತಿ ಮೂಡಿಸುವ ಕೈಂಕರ್ಯ ಎಂದು ಯಾರೂ ಹೇಳದೆ ಇದ್ದದ್ದು ದುಃಖದ ವಿಚಾರವೆ. ಹಸಿವಾದುದಕ್ಕೆ ತಿನ್ನಬಹುದು. ಆದರೆ ದುರುದ್ದೇಶದಿಂದ ಅನ್ಯಾಯ ಎಸಗಿದರೆ ನಮ್ಮ ಶಿವನು ಮೆಚ್ಚನು.

***

ಸುವಿಚಾರ

ಗಿಡಮರಗಳಲ್ಲಿ ಪ್ರತಿನಿತ್ಯ ಹೂಗಳು ಬಿಡುತ್ತವೆ, ಸಂಜೆ ಬಿದ್ದು ಹೋಗುತ್ತವೆ. ಅಯ್ಯೋ! ಹೂವುಗಳೆಲ್ಲಾ ಬಿದ್ದು ಹೋಯ್ತಲ್ಲಾ ಎಂದು ಮರಗಳು ಯಾವತ್ತೂ ದುಃಖಿಸುವುದಿಲ್ಲ. ಯಾಕೆ? ಪುನಃ ಮರುದಿನದ ಹೂವಿಗೆ ತಯಾರಾಗಿ ನಿಲ್ಲುತ್ತದೆ. ಹಾಗೆಯೇ ನಾವು ಸಹ ಇರಲು ಪ್ರಯತ್ನಿಸಬೇಕು. ಕಷ್ಟ,‌ ಬೇನೆ, ಬೇಸರಿಕೆ ಬಂದಾಗ *ಅಯ್ಯೋ* ಎಂದು ಹಲುಬದೆ, ದುಃಖಿಸದೆ ಮುಂದೆ ಹೇಗೆ ಇದನ್ನು ನಿವಾರಿಸಬಹುದು, ಬಾರದ ಹಾಗೆ ಏನು ಮಾಡಬಹುದು ಎಂದು ಆಲೋಚಿಸಬೇಕು. ಆಗ ಬದುಕು ನಿರಾಳ. ಚಿಂತೆ ಮಾಡಿದರೆ ಏನಾದೀತು? ಚಿಂತೆ-ಚಿತೆಗೆ ದಾರಿ. ಬಿಂದು ಮಾತ್ರ ಮಧ್ಯೆ.

-ರತ್ನಾ ಕೆ.ಭಟ್, ತಲಂಜೇರಿ (ಸಂಗ್ರಹ ಮಾಹಿತಿ)

ಚಿತ್ರ ಕೃಪೆ: ಅಂತರ್ಜಾಲ ತಾಣ