ಬಾಳಿಗೊಂದು ಚಿಂತನೆ - 27

ಬಾಳಿಗೊಂದು ಚಿಂತನೆ - 27

ಬುದ್ಧಿವಂತನಾಗಿರು, ಆದರೆ ತೇಜೋಹೀನನಾಗಿರಬೇಡ. ಒಳ್ಳೆಯ ಸ್ವಭಾವ, ನಮ್ರತೆ, ವಿನಯ ಇವೆಲ್ಲ ಶ್ರೇಷ್ಠ ಗುಣಗಳು. ಇವು ಯಾರಲ್ಲಿ ಹೆಚ್ಚು ಇದೆಯೋ, ಅವರನ್ನು ಶೋಷಿತರನ್ನಾಗಿ ಮಾಡಲು ನೋಡುವುದೇ ಹೆಚ್ಚು. ದುರ್ಲಾಭ ಪಡೆಯುವವರೇ ಅಧಿಕ.

*ತೇಜೋಹೀನೇ ಮಹೀಪಾಲೇ ಸ್ವಾಃಪರೇ ಚ ವಿಕುರ್ವತೇ/

ನೀಃಶಂಕಂ ಹಿ ನಕೋ ಧತ್ತೇ ಪದಂ ಭಸ್ಮ ನ್ಯ ನೂಷ್ಮಣಿ//

ಎಲ್ಲಿ ರಾಜನಾದವನು ತೇಜೋರಹಿತನಾಗಿರುವನೋ, ಅಲ್ಲಿ ಶತ್ರುರಾಜರು, ಬಂಧುಗಳು ಪ್ರಬಲರಾಗುತ್ತಾರೆ. ಬಿಸಿಯಿಲ್ಲದ ಬೂದಿಯ ಮೇಲೆ ಎಲ್ಲರೂ ಕಾಲಿಡುವವರೇ.*

ರಾಜ ದಂಡಿಸಿಯಾನು ಎಂಬ ಭಯ ಬೇಕೇ ಬೇಕು. ಶಾಲೆಯಲ್ಲಿ ಶಿಕ್ಷಕರ ಭಯ, ಗೌರವ ಸ್ವಲ್ಪವಾದರೂ ಇದ್ದಾಗ ಕೆಲಸಕಾರ್ಯಗಳು ಚೆನ್ನಾಗಿ ನಡೆಯುತ್ತದೆ. ಆ ಶಿಕ್ಷಕ ತನ್ನ ತಲೆಯ ಮಕ್ಕಳನ್ನು ಹತ್ತಿ ಕೂರಿಸ್ತಾನೆ ಅಂದರೆ ಭಯ ಇಲ್ಲ ಅನ್ನಲಾರದು. ಪ್ರೀತಿ ಭಯ ಒಟ್ಟೊಟ್ಟಿಗೆ ಬರುವಂಥವು.

ಪ್ರತಿಯೊಬ್ಬರೂ ಬುದ್ಧಿವಂತರಾದರೆ ಸಾಲದು, ತೇಜಸ್ಸು, ಓಜಸ್ಸು ಬೆಳೆಸಿಕೊಳ್ಳಬೇಕು. ಹೆತ್ತವರು ಎಲ್ಲದಕ್ಕೂ ಮುದ್ದು ಮಾಡ್ತಾನೇ ಇದ್ದರೆ, ಮುಂದೊಂದು ದಿನ ಆ ಮಗು ಪೆದ್ದು ಆಗುವುದು ಬಿಟ್ಟು ಬೇರೇನೂ ಆಗಲು ಸಾಧ್ಯವಿಲ್ಲ. ಮುದ್ದಿನ ಜೊತೆ ಸ್ವಲ್ಪ ಹೆದರಿಕೆಯೂ ಇರಲಿ. ತನ್ನ ಕಾಲ ಮೇಲೆ ತಾನೇ ನಿಲ್ಲುವಂತೆ ಮಕ್ಕಳನ್ನು ಬೆಳೆಸೋಣ. ಶಾಲಾಶಿಕ್ಷಣ ಅವರ ಸುಂದರವಾದ ಬದುಕನ್ನು ರೂಪಿಸುವಂತಿರಲಿ. ಎಲ್ಲಾ ರಂಗದಲ್ಲೂ ಬುದ್ಧಿವಂತಿಕೆ ಜೊತೆ ಚಾಕಚಕ್ಯತೆ ಸಹ ಇರಲಿ.

-ರತ್ನಾ ಕೆ ಭಟ್ ತಲಂಜೇರಿ

(ಸಂಗ್ರಹ:ನಿತ್ಯ ನೀತಿ ಸುಭಾಷಿತ)