ಬಾಳಿಗೊಂದು ಚಿಂತನೆ - 29

ಬಾಳಿಗೊಂದು ಚಿಂತನೆ - 29

ಎಷ್ಟೋ ಸಲ ನಮ್ಮ ಆತ್ಮೀಯರು ಎಷ್ಟು ದೂರದಲ್ಲಿದ್ದರೂ, ನಾವು ಅವರನ್ನು ನೆನಪಿಸುತ್ತಾ ಇರುತ್ತೇವೆ. ಕೆಲವರು ನಮ್ಮ ಹೃದಯದಲ್ಲಿ ಸ್ಥಾನ ಪಡೆದಿರುತ್ತಾರೆ. ಅದೆಲ್ಲ ಅವರೀರ್ವರೊಳಗಿನ ಅವಿನಾಭಾವ ಸಂಬಂಧದ ಪ್ರಭಾವ ಎನ್ನಬಹುದು.

ಕೆಲವು ಜನ ನಮ್ಮ ಹತ್ತಿರದಲ್ಲಿದ್ದರೂ,ಹೃದಯದಲ್ಲಿ ಇಲ್ಲ ಎಂದಾದರೆ ದೂರವೇ ಇದ್ದ ಫಲ.

*ದೂರಸ್ಥೋಪಿ ಸಮೀಪಸ್ಥೋ ಯೋ ಯಸ್ಯ ಹೃದಿ ವರ್ತತೇ /

ಯೋ ಯಸ್ಯ ಹೃದಯೇ ನಾಸ್ತಿ ಸಮೀಪಸ್ಥೋಪಿ ದೂರತಃ*//

ಗುರು ಹಿರಿಯರನ್ನು, ಹೆತ್ತವರನ್ನು, ದೀನರನ್ನು,ಬಡವರನ್ನು ಯಾವತ್ತೂ ಕಡೆಗಣಿಸಬಾರದು. ಹೇಗೆ ಮೇಲಕ್ಕೆಸೆದ ಕೆಸರು ಎಸೆದವರ ಮುಖಕ್ಕೆ ಬೀಳುವುದೋ ಹಾಗೆ , ಹಿರಿಯರನ್ನು ಕಡೆಗಣಿಸಿದರೆ ನಮ್ಮ ಕುತ್ತಿಗೆಗೆ ಸುತ್ತಿಕೊಳ್ಳಬಹುದು. ಯಾವತ್ತೂ ತಿರಸ್ಕಾರ ಮಾಡಬಾರದು.

ನಮ್ಮ ಜೀವನ ದೀರ್ಘವಾಗಿದೆ ಅಂದು ಕೊಂಡರೆ ಅದು ತಪ್ಪು. ಎಷ್ಟು ಹೊತ್ತಿಗೆ ಏನಾದೀತು ಊಹಿಸಲು ಸಾಧ್ಯವಿಲ್ಲ. ನಮ್ಮ ಊಹೆಗೆ, ಅಂಕೆಗೆ ಮೀರಿದ್ದು. ಚಿಕ್ಕ ಸಮಯದಲ್ಲಿ ನಾವು ಏನೆಲ್ಲಾ ಮಾಡಬೇಕೋ, ಹೇಗೆಲ್ಲಾ ಇರಬೇಕೋ ಅದನ್ನೆಲ್ಲಾ ಮುಗಿಸಲು ಪ್ರಯತ್ನಿಸೋಣ. ಖುಷಿ ಎನ್ನುವುದು ಹಣ ಕೊಟ್ಟರೆ ಸಿಗುವಂಥ ವಸ್ತುವಲ್ಲ. ನಮ್ಮ ನಮ್ಮಲ್ಲೇ ಇದೆ.ಅದನ್ನು ಪಡಕೊಳ್ಳುವ ‌ ನೀಡುವ ಸಾಮರ್ಥ್ಯ ನಮಗೆ ಬಿಟ್ಟದ್ದು. ಇರುವ ಚಿಕ್ಕ ಸಮಯದಲ್ಲಿ ಖುಷಿಯಾಗಿರೋಣ.

ಮರಳಿ ಮರಳಿ ಬರುವುದು ನೆನಪುಗಳು ಮಾತ್ರ, ಸಮಯವಲ್ಲ. ಕಾಲಸರಿದಂತೆ ವಯಸ್ಸು ಹೋಗುತ್ತಿರುತ್ತದೆ ಎಂಬುದು ನೆನಪಿರಲಿ. ವಯಸ್ಸಾಗಿ ಮಾಗಿದ, ಬಾಗಿದ ಮೇಲೆ ಏನೂ ಮಾಡಲಾಗದು.

ಆಧಾರ:ನಿತ್ಯ ನೀತಿ ಸಂಗ್ರಹ

-ರತ್ನಾ ಭಟ್ ತಲಂಜೇರಿ

ಚಿತ್ರ: ಶ್ರೀರಾಮ ದಿವಾಣ, ಉಡುಪಿ