ಬಾಳಿಗೊಂದು ಚಿಂತನೆ - 31

ಬಾಳಿಗೊಂದು ಚಿಂತನೆ - 31

*ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು* ಹೇಳುವುದು ಕೇಳಿದ್ದೇವೆ, ಗಾದೆ ಮಾತು ಸಹ. ಹಾಗೆಯೇ *ಅಂಡೆ ಬಾಯಿ ಕಟ್ಟಬಹುದು, ದೊಂಡೆ (ಗಂಟಲು) ಬಾಯಿ ಕಟ್ಟಲು ಸಾಧ್ಯವಿಲ್ಲ* ಇದು ಸಹ ಒಂದು ಗಾದೆ ಮಾತು.

ಮಾತು ಮಾನವನಿಗೆ ದೇವನಿತ್ತ ಅಮೂಲ್ಯ ಕೊಡುಗೆ. ನಮ್ಮ ಮನದ ಭಾವನೆಗಳನ್ನು ಹೊರಹಾಕುವ ಪ್ರಕ್ರಿಯೆಗೆ ಮಧ್ಯವರ್ತಿ, ಸಾಧನ ಈ *ಮಾತು* ಮಾತಾಡದವರ ಪರಿಸ್ಥಿತಿ ನಮಗೆಲ್ಲಾ ತಿಳಿದೇ ಇದೆ. ಆದರೂ ನಾವೆಷ್ಟು ಅಹಂಕಾರ ಮಾಡುತ್ತೇವೆ ನೋಡಿ. ಅಬ್ಬಬ್ಬಾ!ನಮ್ಮ ಮಾತುಗಳ ವೈಖರಿಯೇ, ಶೈಲಿಯೇ, ಎಣಿಸಲು ಸಾಧ್ಯವಿಲ್ಲ ಅಲ್ಲವೇ?

*ಓರ್ವ ಪ್ರಜ್ಞಾವಂತ ಎನಿಸಿಕೊಂಡವ/ಳು ಹೇಗೆ, ಏನು, ಎಷ್ಟು, ಎಲ್ಲಿ, ಸಮಯ, ಸಂದರ್ಭ, ಸ್ಥಳ,ಯಾರಲ್ಲಿ, ಏನು ಮಾತನಾಡುತ್ತಿದ್ದೇನೆ* ಎಂದು ಅರಿತು ವ್ಯವಹರಿಸಿದರೆ ಎಷ್ಟು ಚೆನ್ನ ಅಲ್ಲವೇ? ಅದನ್ನೇ ನಾವು ಕಲಿಯುವುದು. ಬರಿಯ ಪುಸ್ತಕದ ಬದನೆಕಾಯಿಯನ್ನು ಉರು ಹೊಡೆದು ಒಪ್ಪಿಸಿ ನೂರಕ್ಕೆ ನೂರು ತೆಗೆದ ಕೂಡಲೇ ನಾವು ಸಂಪನ್ನರಾಗಲು ಸಾಧ್ಯವಿಲ್ಲ.

ತಿಳುವಳಿಕೆಯಿಂದ ಮಾತನಾಡೋಣ, ಮಾತನಾಡುವ ಕೌಶಲ್ಯತೆಯ ಬಳಸಿ ಮಾತುಗಳು ಬರಲಿ, ಬುದ್ಧಿವಂತಿಕೆಯಿಂದ ಮಾತುಗಳು ಬರಲಿ. ಪ್ರಜ್ಞೆ ಯಿಟ್ಟು ಮಾತನಾಡೋಣ. ಅಹಂ ಬೇಡವೇ ಬೇಡ. *ಆಡುವ ಮಾತು ಮಾಣಿಕ್ಯದಿಂದ ಹೊರಸೂಸುವ ದಿವ್ಯ ಪ್ರಭೆ*ಯಂತಿರಲಿ.

-ರತ್ನಾ ಕೆ.ಭಟ್, ತಲಂಜೇರಿ (ಸಾರ ಸಂಗ್ರಹ)