ಬಾಳಿಗೊಂದು ಚಿಂತನೆ - 32

ಬಾಳಿಗೊಂದು ಚಿಂತನೆ - 32

ನಾವು ಬೇರೆಯವರನ್ನು ಓಲೈಸುವುದು, ಮೆಚ್ಚಿಸುವುದು ಮಾಡಬಾರದು. ಅವರನ್ನು ಮೆಚ್ಚಿಸಿದರೆ ನಮಗೇನೂ ಲಾಭವೂ ಇಲ್ಲ, ನಷ್ಟವೂ ಇಲ್ಲ. ಕೆಲವು ಸಲ ಕೇಳುತ್ತೇವೆ, ಅವನು ಅವರನ್ನು ಮೆಚ್ಚಿಸಲು ಹೇಳಿದ್ದು ಎಂಬುದಾಗಿ. ಇದರಿಂದ ಪ್ರಯೋಜನವಿಲ್ಲ. ಇದೆಲ್ಲ ಕ್ಟಣಿಕವಾದ್ದು.ಆಡಿದ ಮಾತಿನಿಂದ ಏನಾದರೂ ಪ್ರಯೋಜನವಾಗಬೇಕು. ಸುಮ್ಮನೆ ಹೊತ್ತು ಕಳೆಯಲು ಮಾತನಾಡುವ ಅಗತ್ಯವಿಲ್ಲ. ದಿನದ ಒಂದೊಂದು ಸೆಕೆಂಡ್ ಗೂ ಬೆಲೆಯಿದೆ. ಕಳೆದ ಸಮಯ ಬದುಕಲ್ಲಿ ಮತ್ತೆಂದೂ ಬಾರದು ಎಂಬ ಪ್ರಜ್ಞೆ ನಮಗಿರಬೇಕು.

ಕೆಲವು ಜನರಿಗೆ ಒಂದು ಅಭ್ಯಾಸ, ಬೇರೆಯವರಿಗೆ ಚುಚ್ಚುವ,ನೋವನ್ನು ನೀಡುವ, ತಾನೇ ಎಲ್ಲ ಗೊತ್ತಿದ್ದವರು ಎಂಬಂತಿರುವ ಮಾತುಗಳನ್ನು ಆಡುವ ಅಭ್ಯಾಸವಿದೆ. ಇದು ಸಲ್ಲದು. ಇನ್ನೊಬ್ಬರನ್ನು ನೋಯಿಸುವ ಅಧಿಕಾರ ನಮಗೆ ಖಂಡಿತಾ ಇಲ್ಲ. ಈಗಂತೂ ಈ ವಾಟ್ಸಾಪ್, ಫೇಸ್ಬುಕ್ ಬಂದ ಮೇಲೆ ಹೀಗಿರುವುದು ಹೆಚ್ಚಾಗಿ ನೋಡ್ತಾ ಇದ್ದೇವೆ. ತಾವು ಬರೆಯುವ ಸಾಹಿತ್ಯ ಪ್ರಕಾರಗಳಲ್ಲಿ ಸಹ *ಕಚ್ಚುವುದು,ಚುಚ್ಚುವುದು, ನೋಯಿಸುವುದು* ಎದ್ದುಕಾಣುತ್ತಿದೆ. ಏನೇ ಮಾಡಿದರೂ 'ನಮ್ಮ ಕಣ್ಣಿಗೆ ಕಾಣದ ಶಕ್ತಿ ಯೊಂದು ಎಲ್ಲವನ್ನೂ ಗಮನಿಸಬಹುದೆಂಬ ಪ್ರಜ್ಞೆ ಇದ್ದರೆ ಒಳ್ಳೆಯದು'. ನಾವು ಇನ್ನೊಬ್ಬರ ಕುರಿತಾಗಿ ಹೇಳಬೇಕಾದರೆ, ನಮ್ಮನ್ನೇ ನಾವು ಅವಲೋಕನ ಮಾಡಿಕೊಂಡು ಹೇಳೋಣ ಆಗದೇ? ನಾವು೧೦೦% ಸರಿ ಇದ್ದೇವಾ? ಎಂಬುದಾಗಿ ವಿವೇಚಿಸದೆ, ಇನ್ನೊಬ್ಬರತ್ತ ಬೆರಳು ತೋರಿಸುವುದು ತಪ್ಪಲ್ಲವೇ?

ನಾವು ನಾವಾಗಿರೋಣ. ಆಡುವ ಮಾತಿನಲ್ಲಿ ಹುರುಳಿರಲಿ, ನಾಲ್ಕು ಜನ ಇದು ಸರಿ ಅನ್ನುವಂತಿರಲಿ.

-ರತ್ನಾ ಕೆ.ಭಟ್, ತಲಂಜೇರಿ (ಆಧಾರ)

ಚಿತ್ರ: ಇಂಟರ್ನೆಟ್ ತಾಣದ ಕೃಪೆ