ಬಾಳಿಗೊಂದು ಚಿಂತನೆ - 33

ಬಾಳಿಗೊಂದು ಚಿಂತನೆ - 33

ನಾವು ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದಾದರೆ, ತುಂಬಾ ಆಲೋಚನೆ ಮಾಡಬೇಕಾಗುತ್ತದೆ. ಸುಮ್ಮ ಸುಮ್ಮನೆ ಅವನನ್ನು ಅಥವಾ ಅವಳನ್ನು ನಂಬಿದರೆ, ಹೊಂಡಕ್ಕೆ ಬಿದ್ದಂತೆಯೇ ಆದೀತು. *ರೈಲು ಹೋದ ಮೇಲೆ ಟಿಕೇಟ್ ತೆಗೆದ ಹಾಗೆ*  ನಮ್ಮದೆಲ್ಲವನ್ನೂ ಕಳೆದುಕೊಳ್ಳಬೇಕಾದೀತು. ಎಷ್ಟೋ ಸಲ ನಂಬಿದವರು ಬೆನ್ನಿಗೆ ಇರಿಯುವುದಿದೆ. ಆಗ ನಮಗಾಗುವ ಸಂಕಟ, ನೋವು, ಬೇನೆ ಸಹಿಸಲು ಸಾಧ್ಯವಿಲ್ಲದ್ದು. ನಮ್ಮಿಂದ ಉಪಕಾರ ಹೊಂದುವಷ್ಟೂ ಹೊಂದಿ, ನಂತರ ತಿರುಗಿ ಸಹ ನೋಡದ ಒಂದು ವರ್ಗ ಇದೆ. ಬೇರೆಯವರು ಸಿಕ್ಕಾಗ, ನಮ್ಮ ಬಗ್ಗೆ ಇಲ್ಲಸಲ್ಲದ ಚಾಡಿ ಹೇಳಿ ತಲೆಕೆಡಿಸುವವರೂ ಇದ್ದಾರೆ. ಹಾಗಾಗಿ ಸಹಾಯ ಮಾಡುವಾಗ,ಗೆಳೆತನ ಮಾಡುವಾಗ ನೋಡಿಯೇ ಮಾಡಿದರೆ  ನಾವು ಕ್ಷೇಮಿಗಳಾಗಿರಬಹುದಲ್ಲವೇ?

ಜೀವನ, ಬದುಕು ಎಂಬುದು  ಎಲ್ಲವನ್ನೂ ಕಲಿಸುವ ಪಾಠಶಾಲೆ ಇದ್ದಂತೆ.ಹುಟ್ಟು-ಸಾವಿನ ಮಧ್ಯೆ ಎಣಿಸಲಾರದಷ್ಟು ಅನುಭವಗಳ ಸಂತೆಯೇ ನಮಗಾಗುವುದು. ನಮಗೆ ಬೇಕಾದ್ದನ್ನು ಒಳ್ಳೆಯ ರೀತಿಯಲ್ಲಿ ಪಡೆದುಕೊಳ್ಳೋಣ. ಒಳ್ಳೆಯ ವರ ಸ್ನೇಹ ಮಾಡೋಣ.

ಒಲಿಸುವ ಕಲೆಯ ಬಗ್ಗೆ ಹೀಗೊಂದು ಶ್ಲೋಕವಿದೆ.

ಲುಬ್ಧಮರ್ಥೇನ ಗೃಹ್ಣೀಯಾತ್ ಕ್ರುದ್ಧಮಂಜಲಿಕರ್ಮಣಾ/

ಮೂರ್ಖಂ ಛಂದಾನುವೃತ್ತೇನ ತತ್ತ್ವಾರ್ಥೇನ ಚ ಪಂಡಿತಮ್//

ಲೋಭಿ, ಜಿಪುಣನನ್ನು ಹಣದಿಂದ ಹಿಡಿಯಬೇಕು. ಕೋಪಿಸುವವನನ್ನು ಕೈಮುಗಿದು ದಾರಿಗೆ ತರಬೇಕು. ಮೂರ್ಖರಿಗೆ ನಾವು ಸಹ ಮೂರ್ಖರಾಗಿಯೇ ವರ್ತಿಸಿ ಸೆಳೆಯಬೇಕು. ವಿಚಾರ, ವಿವೇಕದಿಂದ ವಿದ್ವಾಂಸರನ್ನು ಒಲಿಸಿಕೊಳ್ಳಬೇಕು.

ಯಾರು ಯಾರು ಹೇಗೆ ಇರಬಹುದು ಎಂದು ನೋಡಿ ವ್ಯವಹರಿಸೋಣ.

-ರತ್ನಾ ಕೆ.ಭಟ್, ತಲಂಜೇರಿ

(ಆಧಾರ:ಶ್ಲೋಕ: ನಿತ್ಯ ನೀತಿ ಸುಭಾಷಿತ ಸಂಗ್ರಹ.)