ಬಾಳಿಗೊಂದು ಚಿಂತನೆ - 34
ಗೋಡೆಗೆ ಒಂದು ಚೆಂಡನ್ನು ಎಸೆದರೆ, ಆ ಚೆಂಡು ಪುನಃ ಎಸೆದವನ ಬಳಿಗೆ ಬರುತ್ತದೆ. ಇದು ನಮಗೆಲ್ಲ ತಿಳಿದ ವಿಚಾರ. ಬೇರೆಯವರನ್ನು ಕೆಟ್ಟವರು ಎಂದು ಬಿಂಬಿಸಲು ಹೋದರೆ, ಅದು ಒಂದು ದಿನ, ತಿರುಗಿ ನಿಂತು, ನಮ್ಮನ್ನೇ ತೋರಿಸಬಹುದು. *ಮರದ ಹುಳ ಮರವನ್ನೇ ತಿಂದು ನಾಶ ಮಾಡುವಂತೆ*. ನಾವು ಮಾಡಿದ ಕೆಟ್ಟ ಕೆಲಸ ನಮಗೆ ಪರಿಣಾಮ ಬೀರಬಹುದು.
ಕಂದುಕೋ ಭಿತ್ತಿನಿಕ್ಷಿಪ್ತ ಇವ ಪ್ರತಿಫಲನ್ಮುಹುಃ/
ಅಪತತ್ಯಾತ್ಮನಿ ಪ್ರಾಯೋ
ದೋಷೋನ್ಯಸ್ಯ ಚಿಕೀರ್ಷತಃ//
ಆದಷ್ಟೂ ಬೇರೆಯವರಿಗೆ,ನಮ್ಮ ನೆರೆಕರೆಯವರಿಗೆ ತೊಂದರೆ ಆಗದಂತೆ ಜೀವಿಸಲು ಕಲಿಯೋಣ. ನಾವಾಯಿತು, ನಮ್ಮ ಕೆಲಸ ಆಯಿತು ಎಂದಿದ್ದರೆ ಯಾವ ತೊಂದರೆಯೂ ಆಗದು. ಒಳ್ಳೆಯ ರೀತಿಯಲ್ಲಿ ಕೂಡಿದಷ್ಟೂ ಸಹಕರಿಸೋಣ.
ಈ ಭೂಮಿಗೆ ನಾವು ಬಂದ ಮೇಲೆ, ಇರುವಷ್ಟು ದಿನ ಒಪ್ಪ ಓರಣವಾಗಿ, ನಾಲ್ಕು ಜನ ಮೆಚ್ಚುವಂತೆ, ಭಗವಂತನಿಗೆ ಪ್ರಿಯವಾಗುವಂತೆ, ನಮ್ಮ ಮನಸ್ಸಿಗೆ ಹಿತವಾಗುವಂತೆ, ಆತ್ಮಸಾಕ್ಷಿ ಗೆ ದ್ರೋಹವಾಗದಂತೆ ವ್ಯವಹರಿಸುವುದು ಅಗತ್ಯ. ಆದಷ್ಟೂ ಪ್ರಯತ್ನಿಸೋಣ. ಬೇರೆಯವರ ಬಾಯಿಗೆ ಆಹಾರವಾಗದಂತಿರೋಣ.
ಒಮ್ಮೆ ನಮ್ಮತ್ತ ಬೊಟ್ಟು ಮಾಡಿದರೆ, ಮತ್ತೆ ನಾವು ಸರಿಯಾಗಿದ್ದರೂ ಹೇಳುವುದು ಅಭ್ಯಾಸವಾಗಿಬಿಡುತ್ತದೆ. ಜಾಗೃತೆ ವಹಿಸೋಣ.
ಸಂಗ್ರಹ:ರತ್ನಾ ಭಟ್ ತಲಂಜೇರಿ
ಆಧಾರ;(ಸಂಸ್ಕೃತ ಸಂಸ್ಕೃತಿ)