ಬಾಳಿಗೊಂದು ಚಿಂತನೆ - 36

ಬಾಳಿಗೊಂದು ಚಿಂತನೆ - 36

ಈ ಮನಸ್ಸು ಒಂದು ಕೋತಿಯ ಹಾಗೆ ಚಂಚಲ. ಕೋತಿಗೆ ಸ್ವಲ್ಪ ಹೆಂಡ ಕುಡಿಸಿದರೆ ಕೇಳುವುದೇ ಬೇಡ. ಅದರ ಚೇಷ್ಟೆಗಳನ್ನು ನಿಯಂತ್ರಿಸಲು ‌ಸಾಧ್ಯವಿಲ್ಲ. ನಮ್ಮ *ಮನಸ್ಸು* ಪರಿಶುದ್ಧವಾದಷ್ಟೂ ನಿಗ್ರಹಿಸಲು ಸುಲಭ. ಮನಸ್ಸಿನ ಆರು ಮಾಲಿನ್ಯಗಳನ್ನು  ದೇಹದಿಂದ ಹೊರಹಾಕಿ, ಪರಿಶುದ್ಧವಾಗಿಟ್ಟುಕೊಂಡಿರುವುದೇ ನಿರಾಳವಾಗಿರಲು ಮೊದಲನೇ ಪ್ರಯತ್ನ. ಮನಸ್ಸನ್ನು, *ಮಂಗ, ಭೂತ, ವೈರಿ, ಮಿತ್ರ, ದೇವರು, ಶಕ್ತಿ, ಸೇವಕ, ಪಶು, ಪ್ರಭು, ಚಂಡಿ ಏನೇನೋ ಹೆಸರಿನಿಂದ ಕರೆದರು.

ಕಲ್ಪವೃಕ್ಷಕ್ಕೂ ಮನಸ್ಸಿಗೂ ನೇರ ಸಂಬಂಧವಿದೆ. ಮನಸ್ಸು ನಮಗೆ ಬೇಕಾದ್ದನ್ನೆಲ್ಲ ಕೊಡುತ್ತದೆ. *ಸುಪ್ತಮನಸ್ಸು* ನಮ್ಮನ್ನು ಉಳಿಸಲೂ ಬಹುದು, ತೆಗೆಯಲೂ ಬಹುದು. ಮನಸ್ಸಿನಲ್ಲಿ ಪ್ರೀತಿ ಬಿತ್ತಿದರೆ ಪ್ರೀತಿ, ದ್ವೇಷ ಬಿತ್ತಿದರೆ ದ್ವೇಷ ಬೆಳೆಯಬಹುದು.

*ಮುಖ ಮನಸ್ಸಿನ ಕನ್ನಡಿ*. ಎಷ್ಟೋ ಜನ ಹೇಳುವುದು ಕೇಳ್ತೇವೆ, ಇವತ್ತು ಮನಸ್ಸೇ ಸರಿ ಇಲ್ಲ ಎಂಬುದಾಗಿ. ಪ್ರವಾಹದಲ್ಲಿರುವ ಸುಳಿಯಂತೆ ನಮ್ಮ ಮನಸ್ಸು. ಈ ಸುಳಿಯಲ್ಲಿ ಸಿಲುಕಿ ಒದ್ದಾಡುವುದೇ ಆಗಿದೆ.

ಹಾಗಾದರೆ ಮನಸ್ಸನ್ನು ನಿಯಂತ್ರಣದಲ್ಲಿಡಲು ನಾವೇನು ಮಾಡಬಹುದು? ಧ್ಯಾನ, ಯೋಗ, ಪುಸ್ತಕಗಳನ್ನು ಓದುವುದು, ತೋಟಗಾರಿಕೆ, ಚಿಕ್ಕ ಮಕ್ಕಳೊಂದಿಗೆ ಆಡುವುದು, ಮನೆಯವರೊಂದಿಗೆ ಸಂಭಾಷಣೆ, ಪ್ರವಾಸಿತಾಣಗಳಿಗೆ ಭೇಟಿ ಇತ್ಯಾದಿಗಳಲ್ಲಿ ತೊಡಗಿಸಿಕೊಂಡು, ಹತೋಟಿಯಲ್ಲಿಡಬಹುದು. ಇಂದ್ರಿಯಗಳ ಅರಸನಾದ ಮನಸ್ಸನ್ನು ಅತ್ತಿತ್ತ ವಾಲದ ಹಾಗೆ ನೋಡಿಕೊಳ್ಳೋಣ.

-ರತ್ನಾ ಭಟ್, ತಲಂಜೇರಿ

(ಆಧಾರ:ಮನಸ್ಸು ಮತ್ತು ನಾವು)